ಬಳ್ಪದಲ್ಲಿ ಹೋದ ಗೂಡ್ಸ್ ಲಾರಿ ; ಸೊಸೈಟಿಗೆ ರೇಷನ್ ಸಾಮಾಗ್ರಿ ತರುವ ಲಾರಿ ಬಾಕಿ

ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆಯುದ್ದಕ್ಕೂ ತೋಡಿದ ಹಲವು ಕಡೆಗಳಲ್ಲಿ ಅವಾಂತರ ಮುಂದುವರಿದಿದ್ದು, ಪಂಜ ಸಿಎ ಬ್ಯಾಂಕಿನ ಬಳ್ಪ ಶಾಖೆಯ ಬಳಿ ಇಂತಹುದೊಂದು ಘಟನೆ ನಡೆದಿದೆ.
ಸಂಘದ ರೇಷನ್ ವಿಭಾಗಕ್ಕೆ ಆಹಾರ ಸಾಮಾಗ್ರಿಗಳು, ರಸಗೊಬ್ಬರ, ದಿನಸಿ ಸಾಮಾಗ್ರಿಗಳನ್ನು ಅನ್ ಲೋಡ್ ಮಾಡಲೆಂದು ರಸ್ತೆ ಪಕ್ಕಕ್ಕೆ ವಾಹನ ಬರುವಾಗ ಈ ಸಮಸ್ಯೆ ಎದುರಾಗಿ ಗೂಡ್ಸ್ ಲಾರಿ ಅಲ್ಲೇ ಬಾಕಿಯಾಯಿತು.
















ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಸುಬ್ರಹ್ಮಣ್ಯ ಕುಳ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಸಮರ್ಪಕ ಕಾಮಗಾರಿಯಿಂದ ನಮ್ಮ ಸಂಘದ ಶಾಖೆಗೆ ಘನ ವಾಹನಗಳು ಸಾಮಾಗ್ರಿಗಳನ್ನು ಹೇರಿಕೊಂಡು ಬರಲು ಆಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದಿದ್ದಾರೆ.
ಯಾವ ಭಾಗದಲ್ಲೆಲ್ಲಾ ಈ ರೀತಿಯ ಕಾಮಗಾರಿಗಳು ನಡೆದಿದೆಯೋ ಅಲ್ಲೆಲ್ಲಾ ಹಲವು ಬಾರಿ ಬೇರೆ ಬೇರೆ ವಾಹನಗಳು ಹೊಂಡಕ್ಕೆ ಇಳಿದ ಘಟಕಗಳು ನಡೆಯುತ್ತಲೇ ಇದೆ. ಕೋಟೆಮುಂಡುಗಾರು, ಶೇಣಿ ಚೊಕ್ಕಾಡಿ ಭಾಗದ ರಸ್ತೆಯ ಕಥೆಯಂತೂ ಕೇಳುವವರೇ ಇಲ್ಲ. ಇಲ್ಲಿ ಒಂದು ಭಾಗದಲ್ಲಿ ಕುಡಿಯುವ ನೀರಿನ ಹೊಂಡವಾದರೆ ಇನ್ನೊಂದು ಬದಿಯಲ್ಲಿ ವಿದ್ಯುತ್ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆಯ ಹೊಂಡ. ಎರಡೂ ಬದಿಗಳಿಗೂ ವಾಹನ ಇಳಿಸುವ ಹಾಗಿಲ್ಲ. ಸುಳುಗೋಡು ಎಂಬಲ್ಲಿ ಜೆಸಿಬಿಯಿಂದ ಹೊಂಡಕ್ಕೆ ಅಜಾಗರೂಕತೆಯಿಂದ ಮಣ್ಣು ತುಂಬಿಸುವಾಗ ರಸ್ತೆಯುದ್ದಕ್ಕೂ ಡಾಮರು ಕಿತ್ತು ಹೋಗಿದ್ದು, ಇದ್ದ ರಸ್ತೆಯನ್ನೂ ಹಾಳು ಮಾಡಿದಂತಾಗಿದೆ. ಇದಕ್ಕೆ ಈ ವರೆಗೆ ಪರಿಹಾರ ಮಾಡಿಲ್ಲ. ಡಾಮರು ಕಿತ್ತು ಹೋದ ಜಾಗದಲ್ಲಿ ಮರು ಡಾಮರೀಕರಣ ಮಾಡುವವರು ಯಾರು?










