
ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇವರ ವತಿಯಿಂದ ನಡೆಸಲ್ಪಡುವ ಯಕ್ಷ ಶಿಕ್ಷಣ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಜು. 7ರಂದು ನಡೆಯಿತು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಬಾಳಿಲ ಇದರ ನಿಕಟಪೂರ್ವ ಅಧ್ಯಕ್ಷರಾದ ಎನ್ ವೆಂಕಟರಮಣ ಭಟ್ ದೀಪ ಬೆಳಗಿಸಿ ತರಗತಿಯನ್ನು ಉದ್ಘಾಟಿಸಿ, ಯಕ್ಷ ಶಿಕ್ಷಣದ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯುವಂತಾಗಲಿ ಎಂದು ಹಾರೈಸಿದರು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಾ ಕೀರ್ತಿ ಶೇಷ ಯಕ್ಷಗಾನ ಭಾಗವತರಾದ ಪದ್ಯಾಣ ಗಣಪತಿ ಭಟ್, ಹಿರಿಯ ಹಿಮ್ಮೇಳವಾದಕ ಪದ್ಯಾಣ ಜಯರಾಮ ಭಟ್, ಭಾಗವತರಾದ ಪ್ರಶಾಂತ ರೈ ಹಾಗೂ ಇನ್ನು ಹಲವು ಯಕ್ಷಗಾನ ಕಲಾವಿದರು ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳೆಂಬುದು ಹೆಮ್ಮೆಯ ವಿಷಯ, ಯಕ್ಷಗಾನವನ್ನು ಶಾಲೆಯಲ್ಲಿ ಪ್ರೋತ್ಸಾಹಿಸಲು ಎಲ್ಲಾ ಸಹಕಾರವಿದೆ ಎಂದರು.

ಯಕ್ಷದ್ರುವ ಪಟ್ಲ ಫೌಂಡೇಶನ್ ನ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕರಾದ ವಾಸು ಐತಾಳ ಪ್ರಾಸ್ತಾವಿಕವಾಗಿ ಮಾತನಾಡಿ ಬಾಳಿಲದಂತಹ ಶಾಲೆಯಲ್ಲಿ ಯಕ್ಷಶಿಕ್ಷಣ ದೊರಕುವಂತಾದದ್ದು, ಅರ್ಥಪೂರ್ಣವಾಗಿದೆ ಎಂದರು.















ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸುಳ್ಯ ಘಟಕದ ಗೌರವಾಧ್ಯಕ್ಷರಾದ ದಯಾಕರ ಆಳ್ವ ಯಕ್ಷ ಶಿಕ್ಷಣ ಪುಸ್ತಕವನ್ನು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಸಂಚಾಲಕರಾದ ಪ್ರಶಾಂತ್ ರೈ ಮುಂಡಾಳಗುತ್ತು ಶುಭ ಹಾರೈಸುತ್ತಾ ನಾನು ಕಲಿತ ಶಾಲೆಯಲ್ಲಿ ಯಕ್ಷ ಶಿಕ್ಷಣ ಆರಂಭವಾದದ್ದು ಸಂತಸ ತಂದಿದೆ ಎಂದರು. ಶಾಲಾ ಸಂಚಾಲಕರಾದ ಪಿ. ಜಿ. ಎಸ್. ಎನ್. ಪ್ರಸಾದ್ ಮಾತನಾಡುತ್ತಾ, ಮಕ್ಕಳು ಯಕ್ಷ ಶಿಕ್ಷಣದ ಉಪಯೋಗವನ್ನು ಪಡೆಯುವಂತಾಗಲಿ ಎಂದರು. ಯಕ್ಷ ಶಿಕ್ಷಣ ತರಬೇತಿಯ ಗುರುಗಳಾದ ಯಕ್ಷದ್ಯುಮಣಿ ಗಿರೀಶ್ ಗಡಿಕಲ್ಲು ಮಾತನಾಡಿ ತರಬೇತಿಯಲ್ಲಿ ನಿಷ್ಠೆಯಿಂದ ಭಾಗವಹಿಸಿ ಉತ್ತಮ ವಿದ್ಯಾರ್ಥಿಗಳಾದಾಗ ಶಿಕ್ಷಣ ಅರ್ಥಪೂರ್ಣವಾಗುತ್ತದೆ ಎಂದರು. ಮುಖ್ಯಶಿಕ್ಷಕರಾದ ಉದಯಕುಮಾರ್ ರೈ ಎಸ್ ಸ್ವಾಗತಿಸಿದರು. ಪ್ರೌಢಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ಬಿ ಮತ್ತು ಪ್ರಾಥಮಿಕ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಸೀತಾರಾಮ ಕೆ ಸಹಕರಿಸಿದರು. ಕಂಪ್ಯೂಟರ್ ಶಿಕ್ಷಕರಾದ ಅರವಿಂದ ಕಾಯಾರ ಧನ್ಯವಾದವಿತ್ತರು. ಸಂಸ್ಕೃತ ಶಿಕ್ಷಕ ವೆಂಕಟೇಶ್ ಕುಮಾರ್ ಯು ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪೋಷಕ ವೃಂದ, ವಿದ್ಯಾರ್ಥಿವೃಂದ ಭಾಗವಹಿಸಿದರು.
ಸಮಾರಂಭದ ಬಳಿಕ ಗುರುಗಳಾದ ಗಿರೀಶ್ ಗಡಿಕಲ್ಲು ಮೊದಲದಿನದ ಪಾಠವನ್ನು ಸಾಂಕೇತಿಕವಾಗಿ ನೆರವೇರಿಸಿಕೊಟ್ಟರು. ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.










