30ಕ್ಕೂ ಹೆಚ್ಚು ವರ್ಷಗಳಿಂದ ಸುಳ್ಯದಲ್ಲಿ ಬಿಜೆಪಿ ಆಡಳಿತ ಮಾಡುತ್ತಿದೆ ಅಭಿವೃದ್ಧಿ ಮಾತ್ರ ಶೂನ್ಯ :ಶಾಸಕ ಅಶೋಕ್ ಕುಮಾರ್ ರೈ

0

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂತ ಹೆಚ್ಚಿನ ಕಾಲದಿಂದ ಬಿಜೆಪಿ ಆಡಳಿತವನ್ನು ನಡೆಸುತ್ತಾ ಬರುತ್ತಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಇಂದು ಸುಳ್ಯದಲ್ಲಿ ಹೇಳಿದ್ದಾರೆ.

ಅವರು ಜು 8 ರಂದು ಸುಳ್ಯ ಸದರ್ ರೆಸಿಡೆನ್ಸಿನಲ್ಲಿ ನಡೆದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದ ಕುರಿತ ಅಭಿಪ್ರಾಯ ಸಂಗ್ರಹಣೆಗೆ ವೀಕ್ಷಕರಾಗಿ ಬಂದ ವೇಳೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಇಲ್ಲಿ ಯಾವುದೇ ಭಿನ್ನಮತವಿಲ್ಲ ಕೆಲವು ಸಂದರ್ಭದಲ್ಲಿ ಅಧ್ಯಕ್ಷರುಗಳ ಆಯ್ಕೆಯಾಗುವಾಗ ಸಣ್ಣಪುಟ್ಟ ಗೊಂದಲಗಳು ಉಂಟಾಗುವುದು ಸಹಜ. ಅದನ್ನು ಪಕ್ಷ ಸರಿ ಮಾಡುತ್ತದೆ.

ಸುಳ್ಯದಲ್ಲಿರುವ ಕಾರ್ಯಕರ್ತರುಗಳ ಮತ್ತು ಕಾಂಗ್ರೆಸ್ ನಾಯಕರುಗಳ ಸಂಖ್ಯೆಯನ್ನು ಇಂದು ನಾವು ಸುಳ್ಯದಲ್ಲಿ ಕಂಡಿದ್ದೇವೆ. ಇದನ್ನು ನೋಡಿದಾಗ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷ ಯಾವಾಗಲೋ ಅಧಿಕಾರಕ್ಕೆ ಬರಬೇಕಾಗಿತ್ತು ಎಂದು ಅನಿಸುತ್ತಿದೆ ಎಂದರು. ಆದರೆ ಪರವಾಗಿಲ್ಲ ಮುಂದಿನ ದಿನಗಳಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಮತ್ತು ಇಡೀ ಜಿಲ್ಲೆಗೆ ಒಂದು ಶಕ್ತಿಯುತ ಕ್ಷೇತ್ರವಾಗಿ ಸುಳ್ಯ ಮಾರ್ಪಾಡಾಗಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ವಿವಿಧ ಅನುಧಾನಗಳು ಯೋಜನೆಗಳು ಬರುತ್ತಿರುತ್ತದೆ. ಆದರೆ ಸಂಬಂಧಪಟ್ಟ ಶಾಸಕರುಗಳು ಅವರವರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಚನೆ ಮಾಡಿ ಅದನ್ನು ತರುವ ಕೆಲಸ ಮಾಡಬೇಕು.

ಸುಳ್ಳಕ್ಕೆ ಪಶು ವೈದ್ಯಕೀಯ ಕಾಲೇಜು ಮಾಡಲೆಂದು ಕಳೆದ ಬಾರಿಯ ಸರಕಾರವು ಕೋಟಿ ಹಣಗಳನ್ನು ಯೋಜನೆಗಳಾಗಿ ನೀಡಿತ್ತು. ಆದರೆ ಅದರ ಪ್ರಯೋಜನವನ್ನು ಇಲ್ಲಿಯ ಶಾಸಕರು ಪಡೆದುಕೊಂಡಿಲ್ಲ.

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 2006 ಕೋಟಿ ರೂಗಳ ಯೋಜನೆಗಳನ್ನು ತರಲಾಗಿದೆ. ಅದರಲ್ಲಿ ಸುಳ್ಯ ತಾಲೂಕಿನ ಸುಮಾರು 32 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಯೋಜನೆಗಳನ್ನು ತರುವ ಮಾಹಿತಿ ನಮ್ಮಲ್ಲಿ ಇದ್ದಲ್ಲಿ ಅದನ್ನು ತರಲು ಸಾಧ್ಯವಾಗುತ್ತದೆ. ಅದಲ್ಲದೆ ಸುಮ್ಮನೇ ಇದ್ದರೆ ಯಾವುದೇ ಅನುದಾನವು ನಮ್ಮ ಕೈಗೆ ಸಿಗುವುದಿಲ್ಲ ಎಂದು ಅವರು ಹೇಳಿದರು.

ಸುಳ್ಯದ ಜನತೆ ಬದಲಾವಣೆಯನ್ನು ಬಯಸಿದ್ದು ಮುಂದಿನ ದಿನಗಳಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಹಿಡಿಯಲಿದೆ ಎಂದು ಭವಿಷ್ಯವನ್ನು ಹೇಳಿದರು.

ಸುಳ್ಯದಲ್ಲಿ ನೆನೆಗುದ್ದಿಗೆ ಬಿದ್ದಿರುವಂತಹ ಅಂಬೇಡ್ಕರ್ ಭವನ, ಶಾಂತಿ ನಗರ ತಾಲೂಕು ಕ್ರೀಡಾಂಗಣ, 110 ಕೆ ವಿ ವಿದ್ಯುತ್ ಮುಂತಾದ ಕಾಮಗಾರಿಗಳ ಕುರಿತು ಪತ್ರಕರ್ತರು ಹೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಎಲ್ಲಾ ಕಾಮಗಾರಿಗಳು ನಿಂತಿರುವ ಬಗ್ಗೆ ತಿಳಿದು ಬಂದಿದೆ. ಆದರೆ ಅದು ಯಾವ ಕಾರಣಕ್ಕೆ ನಿಂತಿದೆ ಎಂದು ಮಾಹಿತಿಯನ್ನು ಪಡೆದು ಸುಳ್ಯದ ನಮ್ಮ ಪಕ್ಷದ ಮುಖಂಡರುಗಳ ನೇತೃತ್ವದಲ್ಲಿ ಸರ್ಕಾರದಿಂದ ಅನುದಾನವನ್ನು ತರಿಸುವ ಮತ್ತು ಅದರ ಕೆಲಸ ಕಾರ್ಯಗಳನ್ನು ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.

ಅಲ್ಲದೆ ಸುಳ್ಯ ನನಗೆ ಬೇರೆ ತಾಲೂಕು ಅಲ್ಲ. ನನ್ನದೇ ತಾಲೂಕು. ನಾನು ಇಲ್ಲಿಯೂ ಕೂಡ ಉದ್ದಿಮೆಯನ್ನು ಮಾಡಿದ್ದೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕೆ ಪಿ ಸಿ ಸಿ ಉಪಾಧ್ಯಕ್ಷರಾದ ಎಂ ನಾರಾಯಣ ಸ್ವಾಮಿ, ಡಿ ಸಿ ಸಿ ಅಧ್ಯಕ್ಷ ಹರೀಶ್ ಕುಮಾರ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಹಿದ್ ತೆಕ್ಕಿಲ್, ಜಿ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಉಪಸ್ಥಿತರಿದ್ದರು.