ಸುಳ್ಯದಲ್ಲಿ ಅರೆಭಾಷೆ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರ ಉದ್ಘಾಟನೆ

0

ಅರೆಭಾಷೆ ಬೆಳವಣಿಗೆಗೆ ಪೂರಕವಾಗಿ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ : ಪ್ರೊ.ದಾಮೋದರ ಗೌಡ ಶ್ಲಾಘನೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರ ಸುಳ್ಯದ ಕನ್ನಡ ಭವನದಲ್ಲಿ ಜು.12ರಂದು ನಡೆಯಿತು.

ವಿಶ್ರಾಂತ ಪ್ರಾಂಶುಪಾಲ ಪ್ರೊ. ದಾಮೋದರ ಗೌಡ ಕೆ. ವಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಅರೆಭಾಷೆ ವಿಶೇಷ ಭಾಷೆ. ಭಾಷೆ ಬಳಕೆಯ ಮೂಲಕ ಪ್ರಬುದ್ಧತೆ, ತಿಳುವಳಿಕೆ ಮೂಲಕ ಜನರನ್ನು ಹತ್ತಿರ ಮಾಡಿಕೊಳ್ಳುವ ಕೆಲಸ ಅಕಾಡೆಮಿ ಮಾಡುತ್ತಿದೆ. ಭಾಷೆ ಬೆಳವಣಿಗೆಗೆ ಪೂರಕವಾಗಿ ಅನೇಕ ಕಾರ್ಯಕ್ರಮ ಮಾಡುತ್ತಿದ್ದು, ಮುಂದೆಯೂ ಇದು ಮುಂದುವರೆಯಲಿ” ಎಂದು ಶುಭ ಹಾರೈಸಿದರು.

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಅರೆಭಾಷೆ ಯಕ್ಷಗಾನ ತಾಳಮದ್ದಲೆ ಕಾರ್ಯಾಗಾರದ ಮೂಲಕ ಒಂದು ತಂಡ ನಿರ್ಮಾಣವಾಗಲಿ” ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಖ್ಯಾತ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ, ಭಾಗವತೆ ಶ್ರೀಮತಿ ಭವ್ಯಶ್ರೀ ಮಂಡೆಕೋಲು ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರೊ. ಕೆ.ವಿ ದಾಮೋದರ ಗೌಡರವರನ್ನು ಅರೆಭಾಷೆ ಅಕಾಡೆಮಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಅರೆಭಾಷೆ ಅಕಾಡೆಮಿಯಿಂದ ಹೊರತಂದ ತ್ರೈಮಾಸಿಕ ಸಂಚಿಕೆ ಹಿಂಗಾರವನ್ನು ದಾಮೋದರ ಗೌಡರು ಬಿಡುಗಡೆಗೊಳಿಸಿದರು.

ಕಾರ್ಯಾಗಾರದಲ್ಲಿ ಅರೆಭಾಷೆಯಲ್ಲಿ ಕಥಾ ಶೈಲಿ, ಪಾತ್ರ ಪ್ರವೇಶ, ಮಾತಾಡುವ ಶೈಲಿ,ತಾಳ ಜ್ಞಾನ, ಪುರಾಣದ ಪಾತ್ರಗಳ ಅರೆಭಾಷೆಗೆ ಹೊಂದಿಸುವ ಕಲೆಗಾರಿಕೆ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಯಿತು.

ಕಾರ್ಯಗಾರದ ಸದಸ್ಯ ಸಂಚಾಲಕ ಲೋಕೇಶ್ ಊರುಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.