ಉಬರಡ್ಕಕ್ಕೆ ಸಂಜೆ 5.15ರ ಬಸ್ ಕ್ಯಾನ್ಸಲ್ – ಮತ್ತೆ ಆರಂಭಿಸುವಂತೆ ಮಹಿಳಾ ಉದ್ಯೋಗಸ್ಥರ ಒತ್ತಾಯ

0

ಸುಳ್ಯ ಬಸ್ ನಿಲ್ದಾಣದಿಂದ ಉಬರಡ್ಕಕ್ಕೆ ಸಂಜೆ 5:15ಕ್ಕೆ ಹೊರಡುವ ಬಸ್ಸು ಕಳೆದ ಮೂರು ತಿಂಗಳಿನಿಂದ ನಿಂತಿದ್ದು, ಅದನ್ನು ಪುನರ್ ಆರಂಭಿಸಬೇಕೆಂದು ಉದ್ಯೋಗಸ್ಥ ಮಹಿಳೆಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಸುಳ್ಯ ಡಿಪೋ ಕಚೇರಿಗೆ ಮನವಿ ನೀಡಿದ್ದು ಯಾವುದೇ ಪರಿಹಾರ ದೊರಕಿಲ್ಲ. ಸಂಜೆ 4:30ಕ್ಕೆ ಬಿಟ್ಟರೆ ಈಗ ಸಂಜೆ 6 ಗಂಟೆಗೆ ಉಬರಡ್ಕಕ್ಕೆ ಬಸ್ ವ್ಯವಸ್ಥೆ ಇದ್ದು, 5.15 ಕ್ಕೆ ಹೊರಡುತಿದ್ದ ಬಸ್ ಸುಮಾರು ಮೂರು ತಿಂಗಳಿನಿಂದ ನಾಪತ್ತೆಯಾಗಿದೆ ಎಂದು ಉದ್ಯೋಗಸ್ಥ ಮಹಿಳೆಯರು ಸುದ್ದಿಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದು, ಕೆಲ ಮಹಿಳೆಯರು ಉಬರಡ್ಕ ಪೇಟೆಯಿಂದ ನಡೆದು ಮನೆಗೆ ತಲುಪುವಾಗ ರಾತ್ರಿ ಆಗುತ್ತಿದ್ದು, ಕಾಡು ಪ್ರಾಣಿಗಳ ಭಯ ಇದ್ದು ಸೂಕ್ತ ರಕ್ಷಣೆ ನೀಡಬೇಕಾಗಿ ಆಗ್ರಹಿಸಿದ್ದಾರೆ.

ಈ ಕುರಿತು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಯವರನ್ನು ಸಂಪರ್ಕಿಸಿ ವಿಚಾರಿಸಿದಾಗ, “ನಿರ್ವಾಹಕರು, ಡ್ರೈವರ್ ಗಳ ಸಮಸ್ಯೆ ಇದ್ದಾಗ ಬಸ್ ಕ್ಯಾನ್ಸಲ್ ಆಗಿರುವುದು ಹೌದು. ಊರವರು ಮೊನ್ನೆ ಬಸ್ ನ ಆರಂಭಿಸಲು ಮನವಿ ನೀಡಿದ್ದಾರೆ. ಈಗ ನಮ್ಮಲ್ಲಿ ಕಂಡಕ್ಟರ್ ಕೂಡಾ ಬಂದಿದ್ದಾರೆ. ಕ್ಯಾನ್ಸಲ್ ಆಗಿರುವ ರೂಟ್ ಪುನರಾರಂಭಕ್ಕೆ ಅನುಮತಿಗೆ ಬರೆಯಲಾಗಿದೆ. ಸದ್ಯದಲ್ಲೇ ಆ ರೂಟಿನ ಬಸ್ ಮತ್ತೆ ಆರಂಭ ಆಗುತ್ತದೆ” ಎಂದು ತಿಳಿಸಿದ್ದಾರೆ.