ಸುಳ್ಯ ಕೆವಿಜಿ ಹಾಸ್ಪಿಟಲ್ ಆಂಬ್ಯುಲೆನ್ಸ್ ಚಾಲಕ ಹನೀಫ್‌ರವರಿಂದ ಶ್ಲಾಘನೀಯ ಸೇವೆ
ಸುಳ್ಯದ ಕೆವಿಜಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಹನೀಫ್ ಜಯನಗರ ರವರು ಕೆವಿಜಿ ಆಸ್ಪತ್ರೆಯ ಆಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಬೆಂಗಳೂರು ಜಯದೇವ ಹೃದಯಾಲಯ ಆಸ್ಪತ್ರೆಗೆ ೧೫ ದಿನದ ನವಜಾತ ಶಿಶುವನ್ನು ಚಿಕಿತ್ಸೆಗಾಗಿ ತಲುಪಿಸುವ ಮೂಲಕ ಆಪತ್ಬಾಂಧವರಾಗಿದ್ದಾರೆ.
ಸುಳ್ಯ ಕೆವಿಜಿ ಆಸ್ಪತ್ರೆಯ ಆಂಬ್ಯುಲೆನ್ಸ್ ವಾಹನ ತಾಂತ್ರಿಕ ವ್ಯವಸ್ಥೆ ಉತ್ತಮವಾಗಿರುವ ಹಿನ್ನಲೆ ಮಂಗಳೂರಿನ ಕೆಲವು ಭಾಗಗಳಿಂದ ರೋಗಿಗಳನ್ನು ಕರೆದೊಯ್ಯಲು ವಾಹನದ ಬೇಡಿಕೆ ಇರುತ್ತದೆ.















ಅದೇ ರೀತಿ ಜುಲೈ ೧೭ ರಂದು ಸಂಜೆ ೪ ಗಂಟೆಗೆ ಮಂಗಳೂರು ಮೂಲದ ಸುಮಾರು ೧೫ ದಿನದ ನವಜಾತ ಶಿಶು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಆ ಮಗುವನ್ನು ಬೆಂಗಳೂರಿನ ಜಯದೇವ ಹೃದಯಾಲಯಕ್ಕೆ ಅತಿ ಶೀಘ್ರವಾಗಿ ಕೊಂಡೊಯ್ಯಲು ಅಲ್ಲಿಯ ವೈದ್ಯರು ಸೂಚಿಸಿದ್ದರು.
ಈ ಸಂದರ್ಭದಲ್ಲಿ ಮಗುವಿನ ಪೋಷಕರು ಕೆವಿಜಿ ಆಸ್ಪತ್ರೆಯ ಆಂಬ್ಯುಲೆನ್ಸ್‌ಗೆ ಮನವಿ ಮಾಡಿದ್ದು ಕೂಡಲೇ ಮಂಗಳೂರಿಗೆ ತೆರಳಿದ ಚಾಲಕ ಹನೀಫ್ ರವರು ಜು ೧೭ ರಂದು ಸಂಜೆ ೪ ಗಂಟೆಗೆ ಮಗುವನ್ನು ಕರೆದುಕೊಂಡು ಹೊರಟು ರಾತ್ರಿ ೮ ಗಂಟೆ ೫೦ ನಿಮಿಷದಲ್ಲಿ ಬೆಂಗಳೂರು ಜಯದೇವ ಆಸ್ಪತ್ರೆಗೆ ಸೇರಿಸಿ ಆಪತ್ಬಾಂಧವರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ಮಂಗಳೂರಿನಿಂದ ಹೊರಡುವ ವೇಳೆ ಎ ಕೆ ಎ ಅರ್ ಎಸ್ ಎಂಬ ಆಂಬುಲೆನ್ಸ್ ಚಾಲಕರ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಮಾಹಿತಿ ನೀಡಿದ್ದು, ಕೂಡಲೇ ಕಾರ್ಯಪ್ರವೃತರಾದ ಗ್ರೂಪ್ ಸದಸ್ಯರು ಆಂಬ್ಯುಲೆನ್ಸ್ ಬರುವ ದಾರಿಯಲ್ಲಿರುವ ಎಲ್ಲಾ ನಗರ, ಗ್ರಾಮ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಟ್ರಾಫಿಕ್ ವ್ಯವಸ್ಥೆಯನ್ನು ಸರಿ ಪಡಿಸಿ ತಮ್ಮ ತಮ್ಮ ವಾಹನಗಳಲ್ಲಿ ಎಸ್ಕಾರ್ಟ್ ನೀಡಿ ಮಗುವನ್ನು ತರುತ್ತಿದ್ದ ವಾಹನಕ್ಕೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಕೊಟ್ಟರು.
ಇವರ ಈ ಕಾರ್ಯಕ್ಕೆ ಮತ್ತು ಕೆ ವಿ ಜಿ ಸಂಸ್ಥೆಯ ಆಂಬ್ಯುಲೆನ್ಸ್ ವಾಹನ ಹಾಗೂ ಇವರಿಗೆ ಎಸ್ಕಾರ್ಟ್ ನೀಡಿ ಸಹಕರಿಸಿದ ಇತರ ಆಂಬ್ಯುಲೆನ್ಸ್ ಚಾಲಕರ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಇವರೊಂದಿಗೆ ಆಂಬ್ಯುಲೆನ್ಸ್ ವಾಹನದಲ್ಲಿದ್ದು ಸುಳ್ಯದ ಶಿವ ಆಂಬ್ಯುಲೆನ್ಸ್ ಚಾಲಕ ಶಿವ ಹಾಗೂ ಸಮೀರ್‌ರವರು ಹಾಗೂ ಪೊಲೀಸ್ ಇಲಾಖೆ ಕೂಡ ಅಲ್ಲಲ್ಲಿ ಹೈವೇ ಪೆಟ್ರೋಲಿಂಗ್ ಸಿಬ್ಬಂದಿಗಳ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಸಹಕರಿಸಿದರು.










