ಮಡಪ್ಪಾಡಿಯ ಬಾಳಿಕಳದಲ್ಲಿ ಅಂತ್ಯಸಂಸ್ಕಾರಕ್ಕೆ ನಿರ್ಧಾರ
ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ರವರ ಪುತ್ರ , ನಿನ್ನೆ ಕೇರಳದ ಕಣ್ಣೂರಿನಲ್ಲಿ ಕೆರೆಯೊಂದಕ್ಕೆ ಈಜಲು ಹೋದಲ್ಲಿ ಮುಳುಗಿ ಮೃತರಾದ ಆಸ್ತಿಕ್ ರಾಘವ್ ರವರ ಪಾರ್ಥಿವ ಶರೀರ ಇಂದು ಸಂಜೆ ನಾಲ್ಕು ಗಂಟೆಗೆ ಸುಳ್ಯ ತಲುಪಲಿರುವುದಾಗಿ ತಿಳಿದುಬಂದಿದೆ.















ಆಸ್ತಿಕ್ ರಾಘವ್ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ತನ್ನ ಮೂವರು ಸಹಪಾಠಿಗಳೊಂದಿಗೆ ಕೇರಳದ ಕಣ್ಣೂರಿಗೆ ಶನಿವಾರ ಹೋಗಿದ್ದರು. ಇತರ ಮೂವರು ವಿದ್ಯಾರ್ಥಿಗಳಲ್ಲಿ ಓರ್ವನ ಮನೆ ಕಣ್ಣೂರಿನ ಪಳ್ಳಿಕ್ಕಲ್ ನಲ್ಲಿದ್ದು, ಆತನ ಮನೆಗೆ ಇವರೆಲ್ಲ ಹೋಗಿದ್ದರು. ನಿನ್ನೆ ಅವರ ಮನೆ ಸಮೀಪದ ಕೆರೆಯೊಂದಕ್ಕೆ ಈಜಲೆಂದು ಹೋಗಿದ್ದರೆನ್ನಲಾಗಿದೆ. ನಾಲ್ವರು ವಿದ್ಯಾರ್ಥಿಗಳಲ್ಲಿ ಓರ್ವನಿಗೆ ಈಜಲು ತಿಳಿದಿರಲಿಲ್ಲವೆನ್ನಲಾಗಿದ್ದು, ಆತನನ್ನು ಹೊರತುಪಡಿಸಿ, ಈಜಲು ಗೊತ್ತಿರುವ ಆಸ್ತಿಕ್ ರಾಘವ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ಕೆರೆಗೆ ಇಳಿದು ಈಜಲು ಆರಂಭಿಸಿದ್ದರು. ಎರಡು ಸುತ್ತು ಈಜಿ ಮೂರನೇ ಸುತ್ತು ಈಜುತ್ತಿರುವಾಗ ಆಸ್ತಿಕ್ ಗೆ ಸುಸ್ತಾಗಿ ಮುಳುಗಿದನೆನ್ನಲಾಗಿದೆ. ಜತೆಗಿದ್ದ ವಿದ್ಯಾರ್ಥಿಗಳು ಹೇಳಿದಾಗ ಊರವರು ಕೆರೆಗಿಳಿದು ಆಸ್ತಿಕ್ ನನ್ನು ಮೇಲಕ್ಕೆತ್ತಿದರೂ ಆ ವೇಳೆಗೆ ಅವನು ಕೊನೆಯುಸಿರೆಳೆದಾಗಿತ್ತೆನ್ನಲಾಗಿದೆ. ಬಳಿಕ ಮನೆಯವರಿಗೆ ವಿಷಯ ತಿಳಿಸಲಾಯಿತು.
ಸಂಜೆ ವಿಷಯ ತಿಳಿದಕೂಡಲೇ ಡಾ.ನಂದಕುಮಾರ್ ಮತ್ತು ಮನೆಯವರು , ಮಿತ್ರರು ಕಣ್ಣೂರಿಗೆ ಧಾವಿಸಿದರು.
ಮೃತದೇಹ ಕಣ್ಣೂರಿನ ಕೊಯ್ಲಿ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಶವಪರೀಕ್ಷೆ ನಡೆಯುತ್ತಿದೆಯೆಂದು ತಿಳಿದುಬಂದಿದೆ. ಪೋಲೀಸ್ ಪ್ರಕ್ರಿಯೆಗಳೆಲ್ಲ ಮುಗಿದು ಕಣ್ಣೂರಿಂದ ಹೊರಡುವಾಗ ಮಧ್ಯಾಹ್ನ ಒಂದು ಗಂಟೆಯಾಗಲಿದ್ದು ಸಂಜೆ ಮೂರೂವರೆಯಿಂದ ನಾಲ್ಕು ಗಂಟೆಯ ವೇಳೆಗೆ ಸುಳ್ಯ ತಲುಪುವುದಾಗಿ ನಿರೀಕ್ಷಿಸಲಾಗಿದೆ.
ಪಾರ್ಥಿವ ಶರೀರವನ್ನು ಸುಳ್ಯದ ವಿವೇಕಾನಂದ ಸರ್ಕಲ್ ಬಳಿಯಿರುವ ಮನೆಗೆ ತಂದು ಸ್ವಲ್ಪ ಹೊತ್ತು ಇರಿಸಿ ಬಳಿಕ ಮಡಪ್ಪಾಡಿಯಲ್ಲಿರುವ ಬಾಳಿಕಳ ಮನೆಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.










