ಯೋಜನೆ ಕುರಿತು ಮಾಹಿತಿ ನೀಡಿದ ಎಸ್ ಐ ಸಂತೋಷ್ ಬಿ.ಪಿ.
ಇನ್ನು ಮುಂದೆ ಪೊಲೀಸರು ನಿಮ್ಮ ಮನೆಗೆ ಬಂದು ಸಮಸ್ಯೆಯನ್ನು ಆಲಿಸಲಿದ್ದಾರೆ. ಹಾಗೆಂದು ನೀವು ಭಯ ಪಡುವ ಅಗತ್ಯವಿಲ್ಲ. ಏಕೆಂದರೆ ಕರ್ನಾಟಕ ಸರ್ಕಾರವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದ್ದು ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ,ಸುರಕ್ಷತೆ ಮತ್ತು ನೇರ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಈ ಯೋಜನೆ ಹೊಂದಿರುತ್ತದೆ ಎಂದು ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸಂತೋಷ್ ಬಿ ಪಿ ರವರು ತಿಳಿಸಿದರು.
ಅವರು ಸುಳ್ಯ ನಗರ ಪಂಚಾಯತ್ ಕಚೇರಿಯಲ್ಲಿ ಜು 26 ರಂದು ಏರ್ಪಡಿಸಲಾಗಿದ್ದ ಮನೆ ಮನೆಗೆ ಪೊಲೀಸ್ ಯೋಜನೆಯ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಎ, ಉಪಾಧ್ಯಕ್ಷರಾದ ಬುದ್ಧ ನಾಯ್ಕ್, ಸುಳ್ಯ ಸೂಡಾ ಅಧ್ಯಕ್ಷರಾದ ಕೆ ಎಂ ಮುಸ್ತಫಾ ಜನತಾ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಯೋಜನೆಯ ಬಗ್ಗೆ ವಿವರಿಸಿದ ಎಸ್ ಐ ಸಂತೋಷ್ ರವರು ‘ಈ ಕಾರ್ಯಕ್ರಮದ ಮೂಲಕ, ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಕ್ರಮ ಕೈ ಗೊಳ್ಳಲಿದ್ದಾರೆ.
ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಸಹಾಯವಾಗಲಿದೆ.
ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮ ಹಾಗೂ ಸ್ನೇಹಪರ ಸಂಬಂಧವನ್ನು ಬೆಸೆದು ಕೊಳ್ಳಲು ಅನುಕೂಲಕರ ವಾತಾವರಣ ಇದರಿಂದ ನಿರ್ಮಾಣವಾಗುತ್ತದೆ.
ಸ್ಥಳೀಯರಿಂದ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಳ್ಳಲು ಮತ್ತು ಅಪರಾಧಗಳನ್ನು ತಡೆಯಲು ಹಾಗೂ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಇದು ಸಾಧ್ಯವಾಗಲಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಹೆಚ್ಚಾಗಿಸಿ ಇಲಾಖೆ ಮತ್ತು ಸಾರ್ವಜನಿಕರನ್ನು ಸ್ನೇಹಿಯಾಗಿಸಿ ಸಮಾಜಕ್ಕೆ ಉತ್ತಮ ಪೊಲೀಸ್ ಸೇವೆಯನ್ನು ಈ ಯೋಜನೆ ಮೂಲಕ ಒದಗಿಸಬಹುದಾಗಿದೆ ಎಂದು ತಿಳಿಸಿದರು.















ಬೀಟ್ ಕಾನ್‌ಸ್ಟೆಬಲ್‌ಗಳು, ಇನ್‌ಸ್ಪೆಕ್ಟರ್‌ಗಳು ಮತ್ತು ಪೊಲೀಸ್ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿ, ನಿಯಮಿತವಾಗಿ ಮನೆಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಮಾಹಿತಿ ಸಂಗ್ರಹ ನಿರ್ವಹಿಸುತ್ತಾರೆ ಎಂದರು.
ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
ಪೊಲೀಸರು ತಮ್ಮ ಸ್ಥಳೀಯ ಪ್ರದೇಶದ ಪ್ರತಿ ಮನೆಗೂ ಭೇಟಿ ನೀಡಿ, ನಿವಾಸಿಗಳೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸುತ್ತಾರೆ.
ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಸುರಕ್ಷತೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.
ಅರಿವು ಮೂಡಿಸುವ ಅಭಿಯಾನಗಳು ಅಪರಾಧ ತಡೆಗಟ್ಟುವಿಕೆ, ಮಹಿಳೆಯರ ಸುರಕ್ಷತೆ ಮತ್ತು ಸೈಬರ್ ಭದ್ರತೆಯ ಬಗ್ಗೆ ನಿವಾಸಿಗಳಿಗೆ ಮಾಹಿತಿ ನೀಡುತ್ತಾರೆ. ನಾಗರಿಕರು ತಮ್ಮ ಪ್ರತಿಕ್ರಿಯೆಗಳು, ದೂರುಗಳು ಅಥವಾ ಮಾಹಿತಿಗಳನ್ನು ಭೇಟಿ ನೀಡುವ ಅಧಿಕಾರಿಗಳೊಂದಿಗೆ ಅಥವಾ ಪೊಲೀಸರೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು.
ಪೊಲೀಸರು ನೆರೆಹೊರೆಯ ಕಾವಲು ಗುಂಪುಗಳನ್ನು ರಚಿಸಲು ಮತ್ತು ಸಾಮೂಹಿಕ ಕ್ರಮಗಳನ್ನು ಬಲಪಡಿಸಲು ಸಹಾಯ ಮಾಡುತ್ತಾರೆ.
ಬೀಟ್ ಕಾನ್‌ಸ್ಟೆಬಲ್‌ಗಳು ತಮ್ಮ ವ್ಯಾಪ್ತಿಯೊಳಗೆ ಮನೆ ಮನೆಗೆ ತೆರಳಿ, ನಿವಾಸಿಗಳೊಂದಿಗೆ ಸಂವಹನ ನಡೆಸಿ, ಕುಂದುಕೊರತೆಗಳನ್ನು ದಾಖಲಿಸಿಕೊಳ್ಳುತ್ತಾರೆ. ಪ್ರತಿ ಮನೆಯ ಮೂಲಭೂತ ವಿವರಗಳಾದ ಹೆಸರುಗಳು, ವಯಸ್ಸುಗಳು, ವೃತ್ತಿಗಳು, ಮಾತನಾಡುವ ಭಾಷೆಗಳು ಮತ್ತು ವಾಸದ ಅವಧಿಯನ್ನು ಸ್ಥಳೀಯ ಪೊಲೀಸರು ನಿರ್ವಹಿಸುವ ನೋಂದಣಿಯಲ್ಲಿ ದಾಖಲಿಸಲಾಗುತ್ತದೆ.
ಸೈಬರ್ ಅಪರಾಧ, ಮಾದಕವಸ್ತು ನಿಂದನೆ ಮತ್ತು ಮಹಿಳೆಯರು ಹಾಗೂ ಮಕ್ಕಳ ವಿರುದ್ಧದ ಅಪರಾಧಗಳ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಲಿದ್ದಾರೆ.

ನಿವಾಸಿಗಳು ಪೊಲೀಸರಿಗೆ ಏನನ್ನು ಕೇಳಬಹುದು?
ಸಮಾಜದಲ್ಲಿ ಎದುರಿಸುತ್ತಿರುವ ಕಿರುಕುಳ, ಮಾದಕವಸ್ತು ಮಾರಾಟದ ಬಗ್ಗೆ ಅನುಮಾನಗಳು ಅಥವಾ ಮಕ್ಕಳ ಮೇಲಿನ ದೌರ್ಜನ್ಯದಂತಹ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಈ ಯೋಜನೆ ನಿವಾಸಿಗಳನ್ನು ಪ್ರೋತ್ಸಾಹಿಸುತ್ತದೆ. ಸ್ಥಳದಲ್ಲಿ ಹೊಸಬರ ಬಗ್ಗೆ ಅಥವಾ ಏಕಾಂಗಿಯಾಗಿರುವ ನೆರೆಹೊರೆಯವರ ಬಗ್ಗೆಯೂ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಬಹುದು. ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಪೊಲೀಸರು ಮಾಡಲಿದ್ದಾರೆ.
ಒಂದು ವೇಳೆ ಅಗತ್ಯವಿದ್ದರೆ ಸಾರ್ವಜನಿಕರು ಕರ್ತವ್ಯ ನಿರತ ಪೊಲೀಸ್ ಕಾನ್‌ಸ್ಟೇಬಲ್‌ಗಳ ಸಹಾಯದಿಂದ ದೂರು ದಾಖಲಿಸಬಹುದಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ಶೀಲಾ ಅರುಣ್ ಕುರುಂಜಿ,ಸುಶೀಲ ಜಿನ್ನಪ್ಪ, ಸರೋಜಿನಿ ಪೆಲ್ತಡ್ಕ,ಎಂ ವೆಂಕಪ್ಪ ಗೌಡ,ಬಾಲಕೃಷ್ಣ ಭಟ್ ಕೊಡಂಕೇರಿ,ಕೆ ಎಸ್ ಉಮ್ಮರ್, ಧೀರಾ ಕ್ರಾಸ್ತ ರಿಯಾಜ್ ಕಟ್ಟೆಕ್ಕಾರ್ಸ್, ಸುಧಾಕರ್,ಬಾಲಕೃಷ್ಣ ರೈ,ನಾಮ ನಿರ್ದೇಶಕ ಸದಸ್ಯರುಗಳಾದ ಸಿದ್ದಿಕ್ ಕೊಕ್ಕೋ,ರಾಜು ಪಂಡಿತ್, ಹಾಗೂ ಎನ್ ಎಂ ಸಿ ಕಾಲೇಜು ಎನ್ ಸಿ ಸಿ ಕೆಡೆಡೆಟ್ಸ್ ಗಳು,ಹಾಗೂ ಎನ್ ಸಿ ಸಿ ತರಬೇತುದಾರರು ಉಪಸ್ಥಿತರಿದ್ದರು.











