೧೧೦ ಕೆ.ವಿ.ವಿದ್ಯುತ್ ಲೈನ್ ಎಳೆಯಲು ಖಾಸಗಿ ಜಾಗದವರ ಆಕ್ಷೇಪ

0

ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲು ವಿಪಕ್ಷ ಸದಸ್ಯರ ಸಲಹೆ ಸಭೆ

ನಡೆಸದಿದ್ದರೆ ಬೀದಿಗಿಳಿದು ಪ್ರತಿಭಟನೆಯ ಎಚ್ಚರಿಕೆ : ನ.ಪಂ. ಸಭೆ

ಸುಳ್ಯದ ೧೧೦ ಕೆ.ವಿ. ಸಬ್‌ಸ್ಟೇಶನ್ ಶೀಘ್ರ ಕಾರ್ಯಗತವಾಗಲು ಇರುವ ಸಮಸ್ಯೆಗಳ ನಿವಾರಣೆಗೆ ಎಂ.ಪಿ., ಎಂ.ಎಲ್.ಎ. ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ನಗರ ಪಂಚಾಯತ್ ವಿಪಕ್ಷ ಸದಸ್ಯರು ಒತ್ತಾಯಿಸಿರುವ ಘಟನೆ ನ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.


ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಬಸವರಾಜು, ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರ ಕ್ರಾಸ್ತ, ಎಂ.ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಶೀಲಾ ಕುರುಂಜಿ, ಪೂಜಿತಾ ಕೆ.ಯು., ಸುಶೀಲ ಕಲ್ಲುಮುಟ್ಲು, ಉಮ್ಮರ್ ಕೆ.ಎಸ್., ಶರೀಫ್ ಕಂಠಿ, ನಾರಾಯಣ ಶಾಂತಿನಗರ, ಸುಧಾಕರ ಕುರುಂಜಿಭಾಗ್, ಪ್ರವಿತಾ ಪ್ರಶಾಂತ, ಬಾಲಕೃಷ್ಣ ರೈ ದುಗಲಡ್ಕ, ರಿಯಾಜ್ ಕಟ್ಟೆಕ್ಕಾರ್, ನಾಮನಿರ್ದೇಶನ ಸದಸ್ಯರುಗಳಾದ ರಾಜು ಪಂಡಿತ್, ಭಾಸ್ಕರ ಪೂಜಾರಿ ದುಗಲಡ್ಕ ಸಭೆಯಲ್ಲಿದ್ದರು.


ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡರು, ಸುಳ್ಯದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ೧೧೦ ಕೆ.ವಿ. ಅನುಷ್ಠಾನ ಆಗಬೇಕು. ಅದಕ್ಕಿರುವ ಸಮಸ್ಯೆ ಪರಿಹಾರಕ್ಕೆ ಶಾಸಕರ ಉಪಸ್ಥಿತಿಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳಿದ್ದು ಸಾರ್ವಜನಿಕರ ಸಭೆ ಆಯೋಜಿಸುವಂತೆ ಮನವಿ ಮಾಡಿದರು. ಈ ವಿಚಾರದಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ೧೯೯೯ರಲ್ಲಿ ೧೧೦ ಕೆ.ವಿ. ಸಬ್ ಸ್ಟೇಶನ್ ಮಂಜೂರಾದಾಗ ೩ ಕೋಟಿಗೆ ಡಿಪಿಆರ್ ಆಗಿತ್ತು. ೨೦೨೩ರಲ್ಲಿ ಸಬ್‌ಸ್ಟೇಶನ್‌ಗೆ ಗುದ್ದಲಿಪೂಜೆ ನಡೆಯಿತು. ಆಗ ಇದರ ವೆಚ್ಚ ೪೬ ಕೋಟಿಗೆ ಬಂದಿದೆ. ಇದಕ್ಕೆ ಕಾರಣ ಯಾರು ಎಂದ ಅವರು, ಇದು ಯಾಕೆ ಕುಂಟುತ್ತಾ ಸಾಗಿದೆ ಎನ್ನುವುದರ ಕುರಿತು ಎಲ್ಲಿಯೂ ಚರ್ಚೆಗಳು ಆಗಿಲ್ಲ. ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದಂತೆ ಕಾಣುತ್ತಿಲ್ಲ, ಈ ತಪ್ಪನ್ನು ಸರಿ ಪಡಿಸಬೇಕು. ಅದಕ್ಕಾಗಿ ಅಧ್ಯಕ್ಷರೇ.. ಶಾಸಕರು, ಸಂಸದರನ್ನು ಕರೆಸಿ ಸಭೆ ನಡೆಸಬೇಕು ಈಗಾಗಲೇ ೧೧೦ ಕೆ.ವಿ. ಮಾರ್ಗದಲ್ಲಿ ೮೯ ಟವರ್ ಬರಬೇಕಾಗಿದೆ. ಅದರಲ್ಲಿ ೪೬ ಟವರ್‌ಗಳು ಅರಣ್ಯ ಪ್ರದೇಶದಲ್ಲಿ ಬರಲಿದ್ದು ರಾಮನಗರದಲ್ಲಿ ಈಗಾಗಲೇ ಬದಲಿ ಜಾಗ ನೀಡಲಾಗಿದೆ. ಆ ಪ್ರಕ್ರಿಯೆಗಳೆಲ್ಲವೂ ಮುಗಿದಿದೆ. ಆದರೆ ೪೩ ಟವರ್ ಖಾಸಗಿಯವರ ಜಾಗದಲ್ಲಿ ಬರಬೇಕಾಗಿದ್ದು ಅದಕ್ಕೆ ಆಕ್ಷೇಪಣೆಗಳಿವೆ. ಅವರೆಲ್ಲರನ್ನು ಕರೆದು ಸಭೆ ನಡೆಸಿ ಮಾತನಾಡಿಸುವ ಕೆಲಸ ಮಾಡಬೇಕಾಗಿದೆ. ಅವರು ಸಭೆ ಮಾಡದೇ ಇದ್ದರೆ ಸುಳ್ಯದ ಜನತೆ ಶಾಸಕರ ಮೇಲೆ ಆರೋಪ ಮಾಡಬೇಕಾಗುತ್ತದೆ ಎಂದು ಹೇಳಿದರು.

ಮತ್ತು ಮಾತು ಮುಂದುವರೆಸಿದ ವೆಂಕಪ್ಪ ಗೌಡರು, ೨೦೦೯ರಲ್ಲಿ ಶಾಸಕ ಅಂಗಾರರು ೧೧೦ ಕೆ.ವಿ. ಲೈನ್ ಎಳೆಯಲು ಡಿಪಿಆರ್ ಆಗಿದ್ದ ಜಾಗದಲ್ಲಿ ಲೈನ್ ಎಳೆಯಬಾರದೆಂದು ಪತ್ರ ಕೊಟ್ಟಿದ್ದಾರೆ. ಆದ್ದರಿಂದ ಸುಳ್ಯದಲ್ಲಿ ೧೧೦ ಕೆ.ವಿ. ಲೈನ್ ಆಗದಕ್ಕೆ ಕಾರಣ ನಮ್ಮನ್ನಾಳಿರುವ ಶಾಸಕರು. ಶಾಸಕರಿಗೆ, ಸಂಸದರಿಗೆ ಜನತೆಯ ಬಗ್ಗೆ ಕಾಳಜಿ ಇರಬೇಕು. ಈ ಕುರಿತು ಸಭೆ ಕರೆಯದೇ ಇದ್ದರೆ ನಗರ ಪಂಚಾಯತ್ ವತಿಯಿಂದ ಬೀದಿಗಿಳಿದು ಮೆಸ್ಕಾಂ ಎದುರು ಪ್ರತಿಭಟನೆ ಮಾಡೋಣ. ಎಂ.ಎಲ್.ಎ., ಎಂ.ಪಿ. ಹಾಗೂ ಸರಕಾರದ ವಿರುದ್ಧವೇ ಪ್ರತಿಭಟಿಸೋಣ. ಹಾಗಾದಾಗ ಮಾತ್ರ ೧೧೦ ಕೆ.ವಿ. ಕಾರ್ಯಗತ ಆಗುತ್ತದೆ ಎಂದು ಅವರು ಹೇಳಿದರು. ಬಳಿಕ ಮಾತನಾಡಿದ ಸದಸ್ಯ ವಿನಯ ಕುಮಾರ್ ಕಂದಡ್ಕರು, ೧೧೦ ಕೆ.ವಿ. ಕಾರ್ಯಗತ ಆಗಬೇಕೆನ್ನುವುದು ನಮ್ಮದು ಕೂಡಾ ಬೇಡಿಕೆ ಇದೆ. ಆದರೆ ಅದು ಆದರೆ ಪವರ್ ಇಂಪ್ರೂಮೆಂಟ್ ಆಗುತ್ತದೆ. ಪವರ್ ಕಟ್ ಆಗದೆ ಇರೋದಿಲ್ಲ. ಮರಗಳು ಇದ್ದಾಗ ಸಮಸ್ಯೆಗಳು ಆಗಿಯೇ ಆಗುತ್ತದೆ. ಲೈನ್ ಬರುವಲ್ಲಿ ಅರಣ್ಯ ಇಲಾಖೆ ಕ್ಲಿಯರೆನ್ಸ್ ಆಗಿರುವುದು ಹೌದು. ಆಕ್ಷೇಪನೆಗಳು ಇರುವುದು ಸಹಜ. ಶಾಸಕರು ಕೂಡಾ ಬದಲಿ ಜಾಗದಲ್ಲಿ ಲೈನ್ ಎಳೆಯಿರಿ ಎಂದು ಪತ್ರಕೊಡುವುದು ಕೂಡಾ ಸಹಜ. ಜನರಿಂದ ಆಯ್ಕೆಯಾದವರು ಜನರ ಬೇಡಿಕೆ ಬಂದಾಗ ಪತ್ರ ಕೊಟ್ಟಿರುತ್ತಾರೆ. ಹಿಂದೆ ಪವರ್ ಮಿನಿಷ್ಟರ್ ಆದವರೊಬ್ಬರು ಸುಳ್ಯಕ್ಕೆ ಬಂದು ಸಭೆ ಮಾಡಿದ್ದರು. ಆದರೆ ಅವರಿಂದ ಏನೂ ಮಾಡಲು ಆಗಿಲ್ಲ. ಕೆಪಿಟಿಸಿಎಲ್ ಅಧಿಕಾರಿಗಳಿದ್ದು ಶಾಸಕರು ಸಾರ್ವಜನಿಕ ಸಭೆ ಮಾಡಿದ್ದಾರೆ. ಅಲ್ಲಿ ಆಕ್ಷೇಪಣೆ ಮಾಡಿದ್ದು ಪುತ್ತೂರು, ಪೆರ್ಲಂಪಾಡಿ ಆ ಭಾಗದವರು. ಉzಶ ಪೂರ್ವಕವಾಗಿ ಬಂದು ಇಲ್ಲ ಆಕ್ಷೇಪಣೆ ಮಾಡಿ ಗಲಾಟೆಯ ವಾತಾವರಣ ಸೃಷ್ಠಿಸಿದ್ದಾರೆ. ಇಲ್ಲಿಯವರು ಗಲಾಟೆ ಮಾಡಿಲ್ಲ. ಪುತ್ತೂರಿನವರಿಗೆ ಅಲ್ಲಿಯ ಶಾಸಕರೊಂದಿಗೆ ಮಾತನಾಡಬಹುದಿತ್ತಲ್ಲವೇ? ಎಂದು ಹೇಳಿದರು. ಬಳಿಕ ಮಾತನಾಡಿದ ವೆಂಕಪ್ಪ ಗೌಡರುನಾವು ರಾಜಕೀಯ ಮಾತನಾಡೋದಿಲ್ಲ. ೧೧೦ ಕೆ.ವಿ. ಲೈನ್ ಆಗಲು ಇರುವ ಸಮಸ್ಯೆ ಕುರಿತು ಚರ್ಚೆಗಳು ಆಗಿ ಪರಿಹಾರ ಆಗಬೇಕು. ಆ ನಿಟ್ಟಿನಲ್ಲಿ ಶಾಸಕರು ಸಭೆ ಕರೆಯಬೇಕು. ಅವರು ಕರೆಯದೇ ಇದ್ದರೆ ಮೆಸ್ಕಾಂ ನವರೇ ಗ್ರಾಮಕರ ಸಭೆ ಕರೆದು ಅಭಿಪ್ರಾಯ ಪಡೆಯಲಿ. ಅದು ಆಗದಿದ್ದರೆ ನಾವೇ ಪ್ರತಿಭಟಿಸೋಣ” ಎಂದು ಹೇಳಿದರು. ಬಳಿಕ ಮಾತನಾಡಿದ ಮೆಸ್ಕಾಂ ಇಂಜಿನಿಯರ್ ಸುಪ್ರಿತ್‌ರವರು, ೧೧೦ ಕೆ.ವಿ. ಸಬ್‌ಸ್ಟೇಶನ್ ಬಂದ ಆಗುವ ಪ್ರಯೋಜನದ ಕುರಿತು ವಿವರಿಸಿದರೆಲ್ಲದೆ, ಈಗಾಗಲೇ ಮೇಜರ್ ವರ್ಕ್‌ನವರು ಖಾಸಗಿ ಜಾಗದಲ್ಲಿ ಲೈನ್ ಎಳೆಯಲು ಎಲ್ಲೆಲ್ಲಿ ಆಕ್ಷೇಪಣೆ ಇದೆ ಎನ್ನುವುದರ ಕುರಿತು ಎ.ಸಿ., ತಹಶೀಲ್ದಾರರಿಗೆ ವರದಿ ನೀಡಿದ್ದಾರೆ. ಅದು ಕ್ಲಿಯರೆನ್ಸ್ ಆದರೆ ಕೆಲಸ ಬೇಗ ಆಗುತ್ತದೆ'' ಎಂದರು. ಬಳಿಕ ವೆಂಕಪ್ಪ ಗೌಡರು ಮಾತನಾಡಿ ಅಧ್ಯಕ್ಷರೇ ೧೦ ದಿನದಲ್ಲಿ ಸಭೆ ನಿಗದಿ ಮಾಡಿ. ಆಕ್ಷೇಪಣೆ ಇರುವ ಕೃಷಿಕರನ್ನು ಕರೆದು ಮಾತನಾಡೋಣ ಎಂದು ಹೇಳಿದಾಗ,ವಿಧಾನಸಭೆ ಅಧಿವೇಶನ ಸಮಯ ಎಂದು ಅಧ್ಯಕ್ಷರು ಹೇಳಿದಾಗ, ಶಾಸಕರ ಸಮಯ ಅವರಲ್ಲಿ ಕೇಳಿಕೊಂಡು ಸಭೆ ಕರೆಯಿರಿ. ಶನಿವಾರ ಅವರಿಗೆ ಬಿಡುವು ಸಿಗಬಹುದು ಎಂದು ವೆಂಕಪ್ಪ ಗೌಡರು ಹೇಳಿದರು.


ಸುಳ್ಯಕ್ಕ ೧೧೦ ಕೆ.ವಿ. ಸಬ್ ಸ್ಟೇಶನ್ ವಿಚಾರದಲ್ಲಿ ರಾಜಕೀಯ ಬೇಡ. ಎಲ್ಲರೂ ಸಹಕಾರ ನೀಡೋಣ. ಆದಷ್ಟು ಶೀಘ್ರ ಕೆಲಸ ಆಗಲಿ ಎಂದು ಸದಸ್ಯರಾದ ಉಮ್ಮರ್ ಕೆ.ಎಸ್. ಹಾಗೂ ಶರೀಫ್ ಕಂಠಿ ಒತ್ತಾಯಿಸಿದರು.