ನೂತನ ಅಧ್ಯಕ್ಷ ಕೆ.ಟಿ.ವಿಶ್ವನಾಥ್, ಪ್ರ.ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಖಜಾಂಚಿ ಚಂದ್ರಾವತಿ ಬಡ್ಡಡ್ಕ
ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಮಹಾಸಭೆಯು ಆ.1 ರಂದು ಕೆ.ವಿ.ಜಿ. ಕಾನೂನು ಕಾಲೇಜಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮುಖ್ಯ ಅತಿಥಿಗಳಾಗಿದ್ದರು.
ಗಿರಿಜಾ ಟೀಚರ್ ರವರ ಪ್ರಾರ್ಥನೆಯ ಬಳಿಕ ಸಂಘದ ಕಾರ್ಯದರ್ಶಿ ರಾಜು ಪಂಡಿತ್ ಒಂದು ವರ್ಷದ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು. ಬಳಿಕ ಖಜಾಂಚಿ ಶ್ರೀಕೃಷ್ಣ ಭಟ್ ಸ್ವಾತಿಯವರು ಲೆಕ್ಕಪತ್ರ ವಿವರ ಮಂಡಿಸಿದರು. ಸದಸ್ಯರು ಚರ್ಚೆ ನಡೆಸಿ ಎರಡೂ ವರದಿಗಳನ್ನು ಅನುಮೋದಿಸಿದರು.
ಬಳಿಕ ವಿವಿಧ ಸಾಮಾಜಿಕ ಚಟುವಟಿಕೆಗಳಿಗಾಗಿ ಗೌರವಿಸಲ್ಪಟ್ಟದ ಮತ್ತು ವಿವಿಧ ಜವಾಬ್ದಾರಿಗಳಿಗೆ ಆಯ್ಕೆಯಾದ ಸಂಘದ ಸದಸ್ಯರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.
ನಂತರ 2025-26 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್, ಖಜಾಂಚಿಯಾಗಿ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಆಯ್ಕೆಯಾದರು. ಉಪಸಮಿತಿಗಳಿಗೆ ಮುಂದಿನ ಸಭೆಯಲ್ಲಿ ಪದಾಧಿಕಾರಿಗಳನ್ನು ಆರಿಸುವುದೆಂದು ನಿರ್ಧರಿಸಲಾಯಿತು.















ನೂತನ ಪದಾಧಿಕಾರಿಗಳನ್ನು ವೇದಿಕೆಗೆ ಕರೆದು ಅಧಿಕಾರ ಹಸ್ತಾಂತರ ಕಾರ್ಯ ನಡೆಯಿತು.
ಕೆ.ವಿ.ಚಿದಾನಂದರು ಮಾತನಾಡಿ, ” ತಂದೆಯವರು ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳು ನಮ್ಮ ಕಣ್ಣಮುಂದಿದೆ. ಅವರ ಕೊಡುಗೆಗಳ ಬಗ್ಗೆ ಸಮಾಜಕ್ಕೆ ಪ್ರತೀ ವರ್ಷ ಜ್ಞಾಪಿಸುವ ಕಾರ್ಯವನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಮಾಡುತ್ತಿದೆ. ಇದು ನಿರಂತರ ನಡೆಯಲಿ ” ಎಂದು ಶುಭಹಾರೈಸಿದರು. ಸಂಘದ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ಮಾತನಾಡಿ, ಕುರುಂಜಿಯವರ ಸಾಧನೆಗಳ ಪರಿಣಾಮವಾಗಿ ಸುಳ್ಯ ಬೆಳೆದಿದೆ. ಅದರಿಂದಾಗಿ ಬಹುತೇಕರು ಬದುಕು ಕಟ್ಟಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಸ್ಮರಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಆ ಹಿನ್ನೆಲೆಯಲ್ಲಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾಸಂಘ ಅಸ್ತಿತ್ವಕ್ಕೆ ಬಂದಿತು. ಇದು ಉತ್ತಮ ರೀತಿಯಲ್ಲಿ ಮುಂದುವರಿದುಕೊಂಡು ಹೋಗುತ್ತಿರುವುದನ್ನು ಕಂಡು ನಮಗೆ ಸಂತೋಷವಾಗುತ್ತಿದೆ” ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಡಾ.ಎನ್.ಎ.ಜ್ಞಾನೇಶ್ ಮಾತನಾಡಿ ” ಎಲ್ಲರ ಸಹಕಾರದಿಂದ ಒಂದು ವರ್ಷ ಈ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ನಮಗೆ ಸಾಧ್ಯವಾಗಿದೆ. ಕೆ.ವಿ.ಜಿ. ಸುಳ್ಯ ಹಬ್ಬ ಕಾರ್ಯಕ್ರಮ ಎರಡು ದಿನ ನಡೆದರೂ ರಾತ್ರಿಯ ಕಾರ್ಯಕ್ರಮವನ್ನು ಒಂದೇ ದಿನ ಮಾಡಿದ್ದರಿಂದ ಸದಸ್ಯರ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆ ಅಧಿಕವಾಗಿತ್ತು ” ಎಂದರು. ನೂತನ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ವಂದಿಸಿದರು. ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.

ಒಂದೂವರೆ ಲಕ್ಷ ಉಳಿತಾಯ
ಈ ಬಾರಿ ನಮಗೆ ಸದಸ್ಯತ್ವ ಹಣ ಡೆಪಾಸಿಟ್ ನಿಂದ 7 ಲಕ್ಷ ರೂ. ಬಡ್ಡಿ ಬಂದಿತ್ತು. ಅದರಲ್ಲಿ ಕಾರ್ಯಚಟುವಟಿಕೆಗಳಿಗೆ ಐದೂವರೆ ಲಕ್ಷ ರೂ. ಖರ್ಚಾಗಿ ಒಂದೂವರೆ ಲಕ್ಷ ರೂ. ಉಳಿತಾಯವಾಗಿದೆ. ಈ ಬಾರಿ ಹೊಸದಾಗಿ 30 ಮಂದಿ ಸದಸ್ಯರ ಸೇರ್ಪಡೆಯಿಂದ ಮೂರು ಲಕ್ಷ ರೂ. ಬಂದಿದೆ. ಈ ನಾಲ್ಕು ಲಕ್ಷ ರೂ.ಗಳನ್ನು ನಾವು ಒಡಿಯೂರು ಸೊಸೈಟಿಯಲ್ಲಿ ಡೆಪಾಸಿಟ್ ಇರಿಸಿದ್ದೇವೆ” ಎಂದು ಲೆಕ್ಕ ಪತ್ರ ಮಂಡಿಸಿದ ಖಜಾಂಚಿ ಶ್ರೀಕೃಷ್ಣ ಭಟ್ ಹೇಳಿದರು. ಅಧ್ಯಕ್ಷ ಡಾ.ಜ್ಞಾನೇಶ್ ರವರು ಕೂಡ ತಮ್ಮ ಭಾಷಣದಲ್ಲಿ ಈ ವಿಚಾರ ಉಲ್ಲೇಖ ಮಾಡಿ, ಸ್ಥಾಪಕಾಧ್ಯಕ್ಷ ಜಯಪ್ರಕಾಶ್ ರೈಯವರು ಹಣ ಉಳಿತಾಯ ಮಾಡಬೇಕೆಂದು ಆಗಾಗ ಹೇಳುತ್ತಿದ್ದರು. ಆದರೆ ಒಂದೂವರೆ ಲಕ್ಷ ರೂ. ಉಳಿಯುತ್ತದೆ ಎಂಬ ಕಲ್ಪನೆ ನಮ್ಮಲ್ಲಿ ಇರಲಿಲ್ಲ ” ಎಂದರು. ಈ ಬಗ್ಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಜಯಪ್ರಕಾಶ್ ರೈಯವರು ” ಹಣ ಉಳಿತಾಯ ಮಾಡಬೇಕೆಂದು ನಾನು ಹೇಳುತ್ತಿದ್ದುದು ಯಾಕೆಂದರೆ ಸದಸ್ಯತ್ವ ಇನ್ನು ಹೆಚ್ಚೆಚ್ಚು ಆಗುವುದಿಲ್ಲ. ಆಗ ನಮ್ಮ ಡಿಪಾಸಿಟ್ ಹೆಚ್ಚಾಗಬೇಕಾದರೆ ಒಟ್ಟು ಎಷ್ಟು ವಾರ್ಷಿಕವಾಗಿ ಬಡ್ಡಿ ಬರುತ್ತದೋ ಅದರ ಶೇಕಡಾ ಹತ್ತರಷ್ಟಾದರೂ ಉಳಿತಾಯ ಮಾಡಿ ಡೆಪಾಸಿಟ್ ಗೆ ಸೇರಿಸಬೇಕೆಂಬ ಉದ್ದೇಶದಿಂದ ” ಎಂದು ಹೇಳಿದರು.

ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಮಾಡಿ
ಕೆ.ವಿ.ಜಿ. ಸುಳ್ಯ ಹಬ್ಬವನ್ನು ಹಬ್ಬದ ರೀತಿಯಲ್ಲಿ ಎಲ್ಲ ಸಾರ್ಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ಮಾಡಬೇಕು ಎಂಬ ಅಭಿಪ್ರಾಯ ಮಹಾಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾಯಿತು.
” ಮೊದಲು ಮೂರು ದಿನ ನಡೆದಿತ್ತು. ಬಳಿಕ ಎರಡು ದಿನಗಳಾಯಿತು. ಈ ಬಾರಿ ಒಂದು ದಿನ ಮಾತ್ರ ನಡೆದಿದೆ ” ಎಂಬ ಅಭಿಪ್ರಾಯ ಸಭೆಯಿಂದ ಬಂದಾಗ ” ಇಲ್ಲ. ಕಾರ್ಯಕ್ರಮ ಎರಡು ದಿನ ನಡೆದಿದೆ. ಒಂದು ದಿನ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು, ಎರಡನೇ ದಿನ ಪ್ರಶಸ್ತಿ ಪ್ರದಾನಗೈಯ್ಯುವ ರಾತ್ರಿ ಕಾರ್ಯಕ್ರಮ. ನಾವು ಈ ಬಾರಿ ಸದಸ್ಯರ ಅಭಿಪ್ರಾಯದ ಪ್ರಕಾರವೇ ಎರಡು ದಿನಗಳ ರಾತ್ರಿ ಕಾರ್ಯಕ್ರಮ ಕೈಬಿಟ್ಟು ಒಂದು ದಿನ ಹಗಲು- ಒಂದು ದಿನ ರಾತ್ರಿ ಕಾರ್ಯಕ್ರಮ ಮಾಡಿದ್ದೇವೆ. ಸದಸ್ಯರ ಭಾಗವಹಿಸುವಿಕೆಯೂ ಹೆಚ್ಚು ಇತ್ತು ಎಂದು ಜ್ಞಾನೇಶ್ ಹೇಳಿದರು. ಒಂದು ರಾತ್ರಿ ಮಾತ್ರ ಕಾರ್ಯಕ್ರಮ ಮಾಡುವ ಬಗ್ಗೆ ಮಹಾಸಭೆಯಲ್ಲಿ ನಿರ್ಧಾರ ಮಾಡುವುದೊಳ್ಳೆಯದು ಎಂಬ ಜ್ಞಾನೇಶರ ಅಭಿಪ್ರಾಯಕ್ಕೆ ಅದನ್ನು ಮುಂದಿನ ವರ್ಷದ ಪದಾಧಿಕಾರಿಗಳ ತೀರ್ಮಾನಕ್ಕೆ ಬಿಡೋಣ ಎಂದು ಸದಸ್ಯರು ಹೇಳಿದರು.
ಕಾರ್ಯಕ್ರಮವನ್ನು ಹಿಂದೆ ಚೆನ್ನಕೇಶವ ದೇವಸ್ಥಾನದ ಎದುರುಗಡೆ ಸಾರ್ವಜನಿಕವಾಗಿ ಮಾಡುತ್ತಿದ್ದಂತೆ ಮಾಡಬೇಕು. ಲಾ ಕಾಲೇಜ್ ಆವರಣದಲ್ಲಿ ಮಾಡಿದರೆ ಇದರೊಳಗೆ ಬಂದವರಿಗೆ ಮಾತ್ರ ಗೊತ್ತಾಗುತ್ತದೆ. ಇತರ ಸಾರ್ವಜನಿಕರಿಗೆ ತಿಳಿಯುವುದಿಲ್ಲ ಎಂಬ ಅಭಿಪ್ರಾಯ ಕೆಲವು ಸದಸ್ಯರಿಂದ ಬಂದಾಗ ” ಚೆನ್ನಕೇಶವ ದೇವಸ್ಥಾನದ ಎದುರು ಮಾಡುವುದಿದ್ದರೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಈಗ ಸದಸ್ಯರ ಸಂಖ್ಯೆ 686 ಇದ್ದರೂ, ಅವರಲ್ಲಿ ಅರ್ಧಕ್ಕರ್ಧ ಮಂದಿ ತಾಲೂಕಿಂದ ಹೊರಗಿದ್ದಾರೆ. ಇಲ್ಲೇ ಇರುವವರಲ್ಲೂ ಕೆಲವರಿಗೆ ಬೇರೆ ಕೆಲಸದ ಒತ್ತಡದಿಂದಾಗಿ ಬರಲಾಗುವುದಿಲ್ಲ. ಆದ್ದರಿಂದಾಗಿ ಸದಸ್ಯರ ಭಾಗವಹಿಸುವಿಕೆ ಕಡಿಮೆ ಇರುತ್ತದೆ. ಹೊರಗಿನಿಂದ ಕರೆಸಲ್ಪಡುವ ವಿಶೇಷ ಅತಿಥಿಗಳ ಎದುರು ಜನ ಕಡಿಮೆ ಇದ್ದರೆ ಸರಿಯಾಗುವುದಿಲ್ಲ. ಕಾನೂನು ಕಾಲೇಜಿನ ಆವರಣ ಧೂಳು ಇಲ್ಲದೆ ಪ್ರಶಾಂತವಾಗಿದ್ದು ಬಂದವರು ಸಮಾಧಾನದಿಂದ ಕುಳಿತು ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಸಭೆಗಳನ್ನು ಅಲ್ಲಿ ಏರ್ಪಡಿಸುತ್ತಿದ್ದೇವೆ ” ಎಂದು ಕೆ.ವಿ.ಚಿದಾನಂದರು, ಜಯಪ್ರಕಾಶ್ ರೈಯವರು ಮತ್ತು ಡಾ.ಜ್ಞಾನೇಶರು ಹೇಳಿದರು.
ಅದ್ದೂರಿ ಮೆರವಣಿಗೆ, ತಿಂಗಳಿಡೀ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು, ಎರಡು ದಿನ ಎಲ್ಲರ ಪಾಲ್ಗೊಳ್ಳುವಿಕೆಯ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಮಾಡಿ ಎಂದು ಸದಸ್ಯರು ಆಗ್ರಹಿಸಿದರು. ಕೆ.ಆರ್.ಗಂಗಾಧರ್, ನಿತ್ಯಾನಂದ ಮುಂಡೋಡಿ, ಕೆ.ಎಂ.ಮುಸ್ತಫಾ, ಚಂದ್ರಶೇಖರ ಪೇರಾಲು, ಶೈಲೇಶ್ ಅಂಬೆಕಲ್ಲು, ದೊಡ್ಡಣ್ಣ ಬರೆಮೇಲು, ಚಂದ್ರಾ ಕೋಲ್ಚಾರ್, ದಿನೇಶ್ ಅಂಬೆಕಲ್ಲು, ಮೊದಲಾದವರು ಈ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಂಡರು.










