ಮಿತ್ತಡ್ಕ : ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆ ಜಿ ಮತ್ತು ಯು ಕೆ ಜಿ ಪ್ರಾರಂಭೋತ್ಸವ

0

ಕ್ರೀಡಾ ಸಾಮಾಗ್ರಿಗಳ ಉದ್ಘಾಟನೆ ಮತ್ತು ಸ್ತನ್ಯಪಾನ ಸಪ್ತಾಹ, ಸಮುದಾಯ ಆಧಾರಿತ ಪೋಷಣ ಅಭಿಯಾನ ಕಾರ್ಯಕ್ರಮ

ಗ್ರಾಮದ ಅಂಗನವಾಡಿ ಕೇಂದ್ರಗಳನ್ನು ನಮ್ಮ ಮನೆಯ ರೀತಿ ಅಭಿವೃದ್ಧಿ ಪಡಿಸಬೇಕಾಗಿದೆ : ರಾಜೇಶ್ ನಾಥ್ ಜಿ.

ಗ್ರಾಮದ ಅಂಗನವಾಡಿ ಕೇಂದ್ರಗಳನ್ನು ನಮ್ಮ ಮನೆಯ ರೀತಿ ಅಭಿವೃದ್ಧಿ ಪಡಿಸಬೇಕಾಗಿದೆ. ಹಸಿವನ್ನು ನೀಗಿಸಿ ಮಕ್ಕಳನ್ನು ಬೆಳೆಸುವ ಕೇಂದ್ರ ಬೆಳೆಯಲು ಊರವರ ಸಹಕಾರ ಮುಖ್ಯ. ಇಲ್ಲಿ ಸರಕಾರ ಅಥವಾ ಇಲಾಖೆಯ ಅನುದಾನವನ್ನೇ ಕಾಯದೆ ಒಂದಷ್ಟು ದಾನಿಗಳ ಸಹಾಯ ಪಡೆದು ಅವಶ್ಯಕತೆ ಗಳನ್ನು ಪೂರೈಸಿದ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದು ಅಖಿಲ ಭಾರತಿಯ ರಾಜ್ಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಥ್ ಜಿ ಹೇಳಿದರು. ಅವರು ಮಿತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಸ್ಥಳದಾನಿ ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎಲ್ ಕೆ ಮತ್ತು ಯು ಕೆ ಜಿ ಪ್ರಾರಂಭೋತ್ಸವ ಹಾಗೂ ಕ್ರೀಡಾ ಸಾಮಾಗ್ರಿಗಳ ಉದ್ಘಾಟನೆ ಮತ್ತು ಸ್ತನ್ಯಪಾನ ಸಪ್ತಾಹ, ಸಮುದಾಯ ಆಧಾರಿತ ಪೋಷಣ ಅಭಿಯಾನ ಕಾರ್ಯಕ್ರಮ ಇಂದು ಮಿತಡ್ಕ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೊಳಿಕೆ ವಹಿಸಿದ್ದರು.

ಸಿ ಡಿ ಪಿ ಒ ನಿರೂಪಣಾಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅಥಿತಿಗಳಾಗಿ ಸಿ ಡಿ ಪಿ ಒ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶೈಲಜ, ಅಟಲ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ದೊಡ್ಡತೋಟ ಬ್ಯಾಂಕ್ ಆಫ್ ಬರೋಡ ಇದರ ವ್ಯವಸ್ಥಾಪಕರಾದ ಅನಂತ ಶಿವಪ್ರಸಾದ್ ಮುಖ್ಯ ಅತಿಥಿಗಳಾಗಿದ್ದರು. ಗ್ರಾಮ ಪಂಚಾಯತ್ ಸದಸ್ಯೆ ಪವಿತ್ರ ಗುಂಡಿ, ಸದಸ್ಯ ಯಶವಂತ ಸೂಟೆಗದ್ದೆ, ಕೊಡುಗೈ ದಾನಿಗಳಾದ ಸೀತಾರಾಮ ಹಲ್ದಾಡ್ಕ, ತಮ್ಮಪ್ಪ ಪೂಂಬಾಡಿ, ಕುಸುಮವತಿ ಹಾರ್ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ ಪೋಷಣ್ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.

ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಯಮುನಾ ವರದಿ ಮಂಡಿಸಿದರು.

ಇದೇ ಸಂದರ್ಭ ಎಲ್ ಕೆ ಜಿ, ಯು ಕೆ ಜಿ ತರಗತಿಗಳ ಪ್ರಾರಂಭೋತ್ಸವವನ್ನು ಪುಸ್ತಕ ಬಿಡುಗಡೆ ಮಾಡುವುದರ ಮೂಲಕ ಗ್ರಾ. ಪಂ. ಅಧ್ಯಕ್ಷೆ ಗೀತಾ ಹೊಸೋಳಿಕೆ ನೆರವೇರಿಸಿದರು. ಬಳಿಕ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ಸೀಮಂತ ಕಾರ್ಯಕ್ರಮ ಮತ್ತು ಅನ್ನ ಪ್ರಶಾನ ಕಾರ್ಯಕ್ರಮ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು.
ಅಂಗನವಾಡಿ ಕಾರ್ಯಕರ್ತೆ ರತ್ನವತಿ ಸ್ವಾಗತಿಸಿದರು.
ರಾಮಚಂದ್ರ ಹಲ್ದಡ್ಕ ಕಾರ್ಯಕ್ರಮ ನಿರೂಪಿಸಿದರು.