ದೇಸಿ ತಳಿಯ ಹಸುಗಳನ್ನು ಸಾಕಿ ಸ್ವಾವಲಂಬಿ ಜೀವನ

0

ಪ್ರವೀಣ್ ಬೆಳ್ಳಾರೆ ಅವರಿಗೆ ಗೋಪಾಲ್ಸ್ ರಾಷ್ಟ್ರಮಟ್ಟದ ಪ್ರಶಸ್ತಿ

ಸ್ಥಳೀಯ ದೇಸಿ ಹಸುಗಳು ಮತ್ತು ಗೋಪಾಲಕ ಸಮುದಾಯಕ್ಕೆ ಬೆಂಬಲವಾಗಿ ಸ್ಥಾನೀಯ ದೇಶಿ ಹಸುಗಳನ್ನು ಸಾಕುವವರು ಮತ್ತು ಸಂರಕ್ಷಕರಿಗೆ ಗೋಪಾಲ್ಸ್ ಸಂಸ್ಥೆಯವರು ನೀಡುವ ರಾಷ್ಟ್ರಮಟ್ಟದ ಗೋಪಾಲ್ಸ್ ಪ್ರಶಸ್ತಿಯನ್ನು ಪ್ರವೀಣ್ ಬೆಳ್ಳಾರೆ ಅವರಿಗೆ ಬೆಂಗಳೂರಿನ ಮಲ್ಲೇಶ್ವರಂ ಚೌಡಯ್ಯ ಸ್ಮಾರಕ ಭವನ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ತಲಾ ಇಬ್ಬರು ಮಾದರಿ ರೈತರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸಂಗ್ರಹಿಸಲಾದ 40 ರೈತರ ಮಾಹಿತಿಗಳನ್ನು ಪರಿಶೀಲಿಸಿ ಅದರಲ್ಲಿ ಕರ್ನಾಟಕದವರಾದ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ಮಾಡಿ, ಉತ್ತಮ ಗುಣಮಟ್ಟದ ಗೋವುಗಳನ್ನು ಸಮಾಜಕ್ಕೆ ನೀಡುತ್ತಿರುವ ಪ್ರವೀಣ್ ಬೆಳ್ಳಾರೆ ಮತ್ತು ಧಾರವಾಡದ ಗಂಗಾಧರ್ ಅವರಿಗೆ ಗೋಪಾಲ್ಸ್ ಮ್ಯೂಸಿಕ್ ಟು ಹೀಲ್ಸ್ ಮತ್ತು ಸಾಧಕ ರೈತ ಸನ್ಮಾನ ಕಾರ್ಯಕ್ರಮದಲ್ಲಿ ಪೇಜಾವರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.


ವಿಶ್ವದಾದ್ಯಂತ ರಾಸಾಯನಿಕ ರಹಿತ ಚಿಕಿತ್ಸೆಯ ಪ್ರಚಾರ ಮಾಡುತ್ತಿರುವ, ಪಶುವೈದ್ಯಕೀಯ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಾ ಪುಣ್ಯ ಮೂರ್ತಿ,ಹರಿಕಥಾ ವಿದುಷಿ ಶ್ರೀಮತಿ ವಿಶಾಖ ಹರಿ, ಗೋಸೇವಾ ಗತಿವಿಧಿಯ, ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ ಸರಳಾಯ, ಯೂಥ್ ಫಾರ್ ಸೇವಾದ ವೆಂಕಟೇಶ್ ಮೂರ್ತಿ ಹಾಗೂ ಗೋಪಾಲ್ಸ್ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಕಾಂತನ್ ಅವರು ಉಪಸ್ಥಿತರಿದ್ದರು. ಗೋಪಾಲ್ಸ್ ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು ನಗದನ್ನು ಒಳಗೊಂಡಿದೆ.

ಬೆಳ್ಳಾರೆ ಗ್ರಾಮದ ಪಳ್ಳಿ ಮಜಲು ಬೀಡುವಿನ ಪ್ರವೀಣ್ ಸ್ಥಾನೀಯ ದೇಸಿ ತಳಿಯ ಸಂರಕ್ಷಣೆಯ ಉದ್ದೇಶದಿಂದ ಕಪಿಲ ಗೋವಿನ ಸಾಕಾಣಿಕೆಯನ್ನು ಆರಂಭಿಸಿ ಸ್ವವಲಂಬಿಯಾದವರು. ಪ್ರಸ್ತುತ ಅವರಲ್ಲಿ 24 ಕ್ಕೂ ಅಧಿಕ ಕಪಿಲ ದೇಸಿ ತಳಿಯ ಗೋವುಗಳಿವೆ. ತನ್ನ ಜಾಗದಲ್ಲಿ ಹೈನುಗಾರಿಕೆ ನಡೆಸಿ ಯಶಸ್ಸು ಕಂಡ ಇವರು ದೇಸಿ ಗೋವಿನ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಗೊಮೂತ್ರ ಮತ್ತು ಸೆಗಣಿಯಿಂದ ಧೂಪ, ವಿಭೂತಿ, ಇತ್ಯಾದಿ ಉತ್ಪನ್ನಗಳನ್ನು ಮನೆಯಲ್ಲೇ ತಯಾರಿಸಿ ಮಾರುಕಟ್ಟೆಗೆ ನೀಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ.