ಅಡ್ಕಾರಿನಲ್ಲಿ ನಡೆದ ಅರೆಭಾಷೆ ಜಂಬರ-ಆಟಿಕೂಟ ಸಮಾರೋಪ

0

ಹಿರಿಯ ಇಬ್ಬರು ಸಾಧಕರಿಗೆ, ಓರ್ವ ಬಾಲ ಪ್ರತಿಭೆಗೆ ಸನ್ಮಾನ

ಬದುಕಿನಲ್ಲಿ ಹಾಸುಹೊಕ್ಕಾಗಿರುವ ಆಚರಣೆಗಳ ಅನಾವರಣ ಆಟಿ ಉತ್ಸವದ ಮೂಲಕ ಸಾಧ್ಯ : ಹರೀಶ್ ಇಂಜಾಡಿ

ಯಾವುದೇ ಕೃತಕತೆ ಇಲ್ಲದ ಅರ್ಥ ಪೂರ್ಣ ಕಾರ್ಯಕ್ರಮ, ಬದುಕಿನಲ್ಲಿ ಹಾಸುಹೊಕ್ಕಾಗಿರುವ ಆಚರಣೆಗಳ ಅನಾವರಣ ಆಟಿ ಉತ್ಸವದ ಮೂಲಕ ಇಲ್ಲಿ ಸಾಧ್ಯವಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಹೇಳಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಆ. 10ರಂದು ನಡೆದ ಅರೆಭಾಷೆ ಜಂಬರ ಆಟಿಕೂಟ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ
ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಅಕಾಡೆಮಿಯ ವತಿಯಿಂದ ಹಮ್ಮಿಕೊಂಡ ಹಲವು ಕಾರ್ಯಕ್ರಮಗಳ ಮೂಲಕ ಅರೆಭಾಷೆ ಮತ್ತು ಸಂಸ್ಕೃತಿಯ ವಿನಿಮಯ ಸಾಧ್ಯವಾಗುತ್ತದೆ. ಅರೆಭಾಷೆಯು ಈಗ ಎಲ್ಲರೂ ಮಾತನಾಡುವ ಭಾಷೆಯಾಗಿ ಬೆಳೆದು ರಾಜ್ಯಮಟ್ಟದ ಮನ್ನಣೆ ಪಡೆಯುತ್ತಿದೆ ಎಂದು ಹೇಳಿದರು.

ಸುಳ್ಯ ಕೊಡಿಯಾಲಬೈಲು ಎಂಜಿಎಂ ವಿದ್ಯಾಸಂಸ್ಥೆಗಳ ಸಂಚಾಲಕ ದೊಡ್ಡಣ್ಣ ಬರೆಮೇಲು ಆಟಿ ಬಗ್ಗೆ ಉಪನ್ಯಾಸ ನೀಡಿ “ನಮ್ಮ ಆಚರಣೆ, ಸಂಪ್ರದಾಯಗಳು ಯಥಾವತ್ತಾಗಿ ಆಚರಿಸುವ ಆಟಿ ತಿಂಗಳು ಮಹತ್ವದ್ದು ಮತ್ತು ವಿಶೇಷವಾದ ಕಾಲ.
ಹೊಸ ತಲೆಮಾರು ನಮ್ಮ ಆಚರಣೆ, ಸಂಪ್ರದಾಯಗಳನ್ನು ತಿಳಿದು ಕೊಳ್ಳಬೇಕು” ಎಂದು ಹೇಳಿದರು.

ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಹಿರಿಯ ಸಾಧಕರಾದ ನಿವೃತ್ತ ಶಿಕ್ಷಕ ಕೇಪು ಸುಂದರ ಮಾಸ್ತರ್, ಕಲಾವಿದೆ ಪಾರ್ವತಿ ಕೆ.ಎನ್.ಕಡಪಳ, ಯೋಗಪಟು ಸೋನಾ ಅಡ್ಕಾರ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನಿವೃತ್ತ ಯೋಧ ಅಡ್ಡಂತ್ತಡ್ಕ ದೇರಣ್ಣ ಗೌಡ, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯೆ ತಿರುಮಲೇಶ್ವರಿ ಅರ್ಭಡ್ಕ, ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಭಾಗವಹಿಸಿದ್ದರು.

ಅರೆಭಾಷೆ ಅಕಾಡೆಮಿ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ.ಎನ್.ಎ.ಜ್ಞಾನೇಶ್, ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಸ್ವಾಗತಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಆಟಿ ಉತ್ಸವದ ಅಂಗವಾಗಿ
ಮಹಿಳೆಯರಿಗೆ ಶೋಭಾನೆ ಸ್ಪರ್ಧೆ, ಪುರುಷರಿಗೆ ಕಾಯಿಗೆ ಕಲ್ಲು ಹೊಡೆಯುವುದು,50ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಅಜ್ಜಿಕಥೆ, ಸಾರ್ವಜನಿಕರಿಗೆ ನೇಜಿಹಾಡು ಸ್ಪರ್ಧೆ, 5ರಿಂದ 10 ವರ್ಷದ ಒಳಗಿನ ಮಕ್ಕಳಿಗೆ ಲಕ್ಕಿಗೇಮ್ ನಡೆಯಿತು.

ಮಧ್ಯಾಹ್ನ ಆಟಿ ವಿಶೇಷ ಖಾದ್ಯದ ಭೋಜನ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.