ಬಾಸುಮ ಕೊಡಗುರವರ “ನಡುರಾತ್ರಿಯ ಸ್ವಾತಂತ್ರ್ಯ” ಕವನ ಸಂಕಲನ ಬಿಡುಗಡೆ
” ಭಾರತದ ಸ್ವಾತಂತ್ರ್ಯ ಹೋರಾಟದ ಬಹುಭಾಗವನ್ನು ಆವರಿಸಿಕೊಂಡವರು ಮಹಾತ್ಮಾ ಗಾಂಧೀಜಿಯವರು. ಇಡೀ ದೇಶವನ್ನು ಐದು ಬಾರಿ ಸುತ್ತಿ , ಇಲ್ಲಿಯ ಜನಜೀವನವನ್ನು ಅರ್ಥ ಮಾಡಿಕೊಂಡ ಗಾಂಧೀಜಿಯವರು ಬರಿ ಮೈಯ ಪಕೀರನಾಗಿ, ಸತ್ಯ ಮತ್ತು ಅಹಿಂಸೆ ಎಂಬ ಅಸ್ತ್ರದ ಮೂಲಕ ಇಡೀ ದೇಶವನ್ನು ತನ್ನೆಡೆಗೆ ಸೆಳೆದು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಆದ್ದರಿಂದ ಅವರನ್ನು ಬಿಟ್ಟು ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಬರೆಯಲು ಸಾಧ್ಯವೇ ಇಲ್ಲ. ಆ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಾದರೆ ನಾವೆಲ್ಲ ದುರಾಸೆಯಿಂದ ದೂರವಿದ್ದು, ಸಂವಿಧಾನಬದ್ಧವಾಗಿ ಬದುಕಲು ಕಲಿಯಬೇಕು ” ಎಂದು ಸುಳ್ಯದ ಗಾಂಧಿ ಚಿಂತನ ವೇದಿಕೆ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಹೇಳಿದರು.

ಅವರು ಸುಳ್ಯದ ಶ್ರೀಹರಿ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಂಗಮಯೂರಿ ಕಲಾಶಾಲೆಯಲ್ಲಿ ಆ. 15 ರಂದು ನಡೆದ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಗಾಂಧಿ ಕುರಿತು ಮಾತನಾಡಿದರು.















ಇದೇ ಸಂದರ್ಭ ಖ್ಯಾತ ರಂಗಕರ್ಮಿ, ಚಿತ್ರನಟ ಹಾಗೂ ರಾಷ್ಟ್ರೀಯ ತರಬೇತುದಾರ ಬಾಸುಮ ಕೊಡಗುರವರ “ನಡುರಾತ್ರಿಯ ಸ್ವಾತಂತ್ರ್ಯ” ಕವನ ಸಂಕಲನವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಅರೆಭಾಷೆ ಅಕಾಡೆಮಿ ಸದಸ್ಯ ಚಂದ್ರಶೇಖರ್ ಪೇರಾಲು ಬಿಡುಗಡೆಗೊಳಿಸಿ ಮಾತನಾಡಿ, ” ಸಾಹಿತ್ಯ ಪ್ರೇಮ, ಕಲಾ ಪ್ರೇಮದಲ್ಲಿ ತೊಡಗಿಸಿಕೊಂಡಿರುವ ಬಾಸುಮರವರು ತನ್ನ ಅಗಾಧವಾದ ವಿಚಾರದಿಂದ ಮತ್ತು ವ್ಯವಹಾರ ಜ್ಞಾನದಿಂದ ಪ್ರಸಿದ್ಧರಾಗಿದ್ದಾರೆ ” ಎಂದರು.
ರಂಗ ಕಲಾವಿದ ಬಾಸುಮ ಕೊಡಗು ಮಾತನಾಡಿ, ” ನಾಳೆಗಳ ಬಗ್ಗೆ ಯೋಚನೆ ಮಾಡಿ ನಾವೆಲ್ಲ ಬೆಳೆಯೋಣ. ನಾವು ಮಾಡಿದ ಕಾರ್ಯಗಳನ್ನು ಸದಾ ನೆನಪುಗಳಲ್ಲಿ ಉಳಿಸುವ ಕಾರ್ಯ ಮಾಡೋಣ. ಗಾಂಧಿ ಮತ್ತು ಮಾಚು ಎಂಬ ಸುಳ್ಯದ ಕತೆಯ ಎಳೆಯ ಮೂಲಕ ನಾನೇ ರಚಿಸಿರುವ ಕೃತಿಯನ್ನು ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದೇನೆ” ಎಂದರು.

ರಂಗಮಯೂರಿ ಕಲಾ ಶಾಲೆಯ ಪೋಷಕ ಭವಾನಿಶಂಕರ ಅಡ್ತಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, “ಮಕ್ಕಳು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಹೆತ್ತವರು ಪ್ರೇರೇಪಣೆ ನೀಡಬೇಕೆಂದು ” ಕರೆ ನೀಡಿದರು.
ವೇದಿಕೆಯಲ್ಲಿದ್ದ ರಂಗಮಯೂರಿಯ ಸುಗಮ ಸಂಗೀತ ಶಿಕ್ಷಕಿ ಶ್ರೀಮತಿ ಸುಮನ ರಾವ್ ಶುಭಹಾರೈಸಿದರಲ್ಲದೆ ಬಿಡುಗಡೆಗೊಂಡ ಕೃತಿಯಲ್ಲಿರುವ ಒಂದು ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದರು. ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.
ಇದೇ ಸಂದರ್ಭ ಭವಾನಿಶಂಕರ್ ಅಡ್ತಲೆ ಮತ್ತು ಬಾಸುಮ ಕೊಡಗು – ಕಾವ್ಯವಾಣಿ ದಂಪತಿಗಳನ್ನು ರಂಗಮಯೂರಿ ವತಿಯಿಂದ ಗೌರವಿಸಲಾಯಿತು.

ಇತ್ತೀಚಿಗೆ ಸುದ್ದಿ ಸಮೂಹ ಸಂಸ್ಥೆ ಮತ್ತು ರಂಗಮಯೂರಿ ವತಿಯಿಂದ ನಡೆದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನದ ಪ್ರಾಯೋಜಕರಾದ ಸೃಷ್ಟಿ ಫ್ಯಾನ್ಸಿಯ ಶೈಲೇಂದ್ರ ಸರಳಾಯ ಮತ್ತು ಕುಂಕುಂ ಫ್ಯಾಷನ್ ನ ಭೀಮರಾಂ ಪಟೇಲ್ ಉಪಸ್ಥಿತರಿದ್ದರು.
ಉಪನ್ಯಾಸ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಯಶ್ವಿತ್ ಕಾಳಮ್ಮನೆ ಸ್ವಾಗತಿಸಿ, ಶ್ರೀಮತಿ ಜಯಕೃಷ್ಣ ವಂದಿಸಿದರು.
ಶಶಿಕಾಂತ್ ಮಿತ್ತೂರು ಮತ್ತು ದೃತಿ ದೀಟಿಗೆ ಕಾರ್ಯಕ್ರಮ ನಿರ್ವಹಿಸಿದರು.










