ಸುಬ್ರಹ್ಮಣ್ಯದಲ್ಲಿ ವೈಭವದಿಂದ ನಡೆದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ

0

ಅಟ್ಟಿ ಮಡಕೆಯಲ್ಲಿ ಜವನೆರ್ ಬುಡೇರಿಯಾ ಪ್ರಥಮ, ಲಕ್ಷ್ಮೀ ಜನಾರ್ದನ ಯುವಕ ಮಂಡಲ ಕೇಪು ದ್ವಿತೀಯ

ಧಾರ್ಮಿಕ ಆಚರಣೆಗಳ ಮೂಲಕ ಕಿರಿಯರು ಸಂಸ್ಕಾರ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಮುಂದುವರೆಸಬೇಕು: ಯಶವಂತ ರೈ

ಧಾರ್ಮಿಕ ಆಚರಣೆಗಳು ಯುವ ಜನಾಂಗವು ಸಂಘಟಿತರಾಗಲು ಬುನಾದಿಯಾಗುತ್ತದೆ.ಹಿರಿಯ ಮಾರ್ಗದರ್ಶನದಲ್ಲಿ ಕಿರಿಯರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಸ್ಕಾರ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ನಡೆಸಲು ಉತ್ಸಾಹ ತೋರಬೇಕು.ಆಧುನಿಕ ಯುಗದಲ್ಲಿ ಯುವ ಜನಾಂಗವು ಧಾರ್ಮಿಕ ಆಚರಣೆಗಳತ್ತ ಮನ ಮಾಡುತ್ತಿದ್ದಾರೆ ಅನ್ನುವುದು ನಮ್ಮ ಸಂಸ್ಕೃತಿಯ ಔನತ್ಯದ ಧ್ಯೋತಕವಾಗಿದೆ.ಪ್ರಾಚೀನ ಸಾಂಸ್ಕೃತಿಕ ವಿಚಾರಧಾರೆಗಳು ಚಿರಸ್ಥಾಯಾಗಿರಲು ಕೃಷ್ಣಲೀಲೋತ್ಸವವು ಸಹಕಾರಿ. ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕಾರ ಸಂಸ್ಕೃತಿಗಳು ಅಜರಾಮರವಾಗಿ ಉಳಿಯಲು ಅಡಿಗಲ್ಲಾಗಿದೆ ಎಂದು ನಿವೃತ್ತ ಮುಖ್ಯಗುರು ಕೆ.ಯಶವಂತ ರೈ ಹೇಳಿದರು.


ಸಾರ್ವಜನಿಕ ಶ್ರೀಕೃಷ್ಣಾಷ್ಟಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ನಡೆದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಧರ್ಮ ಮತ್ತು ಸಂಸ್ಕೃತಿಯ ಜಾಗೃತಿಗಾಗಿ ಕೃಷ್ಣ ಲೀಲೋತ್ಸವವನ್ನು ಆಚರಿಸಲಾಗುತ್ತಿದೆ. ಉತ್ಸವಗಳ ಮೂಲಕ ಮಕ್ಕಳಿಗೆ ಆಟೋಟ ಮತ್ತು ಮನೋರಂಜನೆ ನೀಡುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ಅದನ್ನು ಚಿರಾಯುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.

ಆ.17 ರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕುಕ್ಕೆ ದೇವಳದ ನಿವೃತ್ತ ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ನಿವೃತ್ತ ಸಿಬ್ಬಂದಿಗಳಾದ ರಮೇಶ್ ಭಟ್ ಎಸ್, ವೆಂಕಟರಮಣ, ಜಯಂತಿ, ರತಿ ಶೆಟ್ಟಿ, ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಆಶಿಶ್ ಕೆ.ವೈ ಕೋಟೆಬಾಗಿಲು ಪರವಾಗಿ ಅವರ ತಾಯಿ ಸಂಧ್ಯಾಮಣಿ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಸನ್ಮಾನಿಸಿ ಗೌರವಿಸಿದರು. ಸಮಾರಂಭದಲ್ಲಿ ಮೊಸರು ಕುಡಿಕೆ ಉತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.


ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಮಾನಾಡು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಲ್ಕುಂದ, ಬಿಎಂಎಸ್ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುಬ್ಬಪ್ಪ ಕುಲ್ಕುಂದ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್.ಆರ್, ಲಯನ್ಸ್ ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ, ಸೀನಿಯರ್ ಚೇಂಬರ್ ಅಧ್ಯಕ್ಷ ವೆಂಕಟೇಶ್ ಎಚ್.ಎಲ್ ಮುಖ್ಯಅತಿಥಿಗಳಾಗಿದ್ದರು. ಸಮಿತಿಯ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್, ಕಾರ್ಯದರ್ಶಿ ನಿತಿನ್ ಭಟ್ ವೇದಿಕೆಯಲ್ಲಿದ್ದರು.


ಸಮಿತಿ ಸದಸ್ಯ ರತ್ನಾಕರ ಎಸ್ ಬಹುಮಾನಿತರ ಪಟ್ಟಿ ವಾಚಿಸಿದರು. ಪೂರ್ವಾಧ್ಯಕ್ಷ ಡಾ.ಸಿದ್ದಲಿಂಗ ಎಸ್.ಎಸ್ ಕಾರ್ಯಕ್ರಮ ನಿರೂಪಿಸಿದರು. ಪೂರ್ವಾಧ್ಯಕ್ಷ ದೀಪಕ್ ನಂಬಿಯಾರ್ ವಂದಿಸಿದರು. ಶ್ರೀಕೃಷ್ಣ ಶರ್ಮ ಸಹಕರಿಸಿದರು. ಕಾರ್ಯಕ್ರಮದ ಬಳಿಕ ಪೂರ್ವಾಧ್ಯಕ್ಷರಾದ ಶ್ರೀಧರ ಭಟ್ ಮತ್ತು ನಿತಿನ್ ಭಟ್ ಸತತ 21ನೇ ವರ್ಷ ಭಕ್ತಾಭಿಮಾನಿಗಳಿಗೆ ಉಪಹಾರವನ್ನು ವಿತರಿಸಿದರು.

ಅಟ್ಟಿ ಮಡಕೆ ಫಲಿತಾಂಶ
ಬಹಳ ಆಕರ್ಷಕವಾಗಿ ನಡೆದ ಅಟ್ಡಿ ಮಡಕೆ ಸ್ಪರ್ಧೆಯಲ್ಲಿ ಹಲವು ತಂಡಗಳು ಭಾಗವಹಿಸಿದ್ದು ಜವನೆರ್ ಬುಡೇರಿಯಾ ತಂಡ ಪ್ರಥಮ ಸ್ಥಾನ ಪಡೆದರೆ, ಲಕ್ಷ್ಮಿ ಜನಾರ್ದನ ಯುವಕ ಮಂಡಲ ಕೇಪು ದ್ವಿತೀಯ ಸ್ಥಾನ ಪಡೆಯಿತು.

*ಉದ್ಘಾಟನ ಕಾರ್ಯಕ್ರಮ
21ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಮತ್ತು ಸಾಂಪ್ರದಾಯಿಕ ಅಟ್ಟಿ ಮಡಿಕೆ ಉದ್ಘಾಟನೆಯನ್ನು
ಸುಬ್ರಹ್ಮಣ್ಯ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯಗುರು ಮಾಧವ ಮೂಕಮಲೆ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಮಾನಾಡು ವಹಿಸಿದ್ದರು. ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್, ಪೂರ್ವಾಧ್ಯಕ್ಷರಾದ ರಾಜೇಶ್ ಎನ್.ಎಸ್,
ಶ್ರೀಕೃಷ್ಣ ಶರ್ಮ, ವೆಂಕಟೇಶ್ ಎಚ್.ಎಲ್, ದೀಪಕ್ ನಂಬಿಯಾರ್, ಡಾl ರವಿ ಕಕ್ಕೆಪದವು, ನಿತಿನ್ ಭಟ್, ಪ್ರಶಾಂತ್ ಆಚಾರ್ಯ, ಸಮಿತಿ ಕಾರ್ಯದರ್ಶಿ ಹರ್ಷಿತ್ ನೂಚಿಲ, ಜತೆ ಕಾರ್ಯದರ್ಶಿ ದಿನೇಶ್ ಎಸ್.ಎನ್ ಮೊದಲಾದವರು ವೇದಿಕೆಯಲ್ಲಿದ್ದರು. ಆರಂಭದಲ್ಲಿ ಸುಭಾಶಿಣಿ ಶಿವರಾಂ ನೇತೃತ್ವದಲ್ಲಿ ಭಗವದ್ಗೀತಾ ಪಾರಾಯಣ ನೆರವೇರಿತು.


ಬಳಿಕ ಎಲ್.ಕೆ.ಜಿ., ಯು.ಕೆ.ಜಿ ಮತ್ತು ಅಂಗನವಾಡಿ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು. ಸಾರ್ವಜನಿಕರಿಗೆ ಜಾರುವ ಕಂಬ ಏರುವ ಸ್ಪರ್ಧೆ
ನಡೆಯಿತು. ಸಂಜೆ ಅಟ್ಟಿ ಮಡಕೆ ಸ್ಪರ್ಧೆ ನಡೆಯಿತು.