ಪೆರುವೋಡಿ : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

0

ಪೆರುವೋಡಿ : ಮುಕ್ಕೂರು ಜ್ಯೋತಿ ಯುವಕ ಮಂಡಲ, ಯುವಸೇನೆ ಮುಕ್ಕೂರು-ಪೆರುವಾಜೆ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ರವಿವಾರ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ವಠಾರದಲ್ಲಿ ನಡೆಯಿತು.

ಪೆರುವೋಡಿ ಶ್ರೀ ಕ್ಷೇತ್ರದ ಅರ್ಚಕ ಸುರೇಶ ಉಪಾಧ್ಯಾಯ ದೀಪ ಬೆಳಗಿಸಿ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಶಿಕ್ಷಕಿ ಲಲಿತಾ ಕುಮಾರಿ ಅವರನ್ನು ಸಮ್ಮಾನಿಸಲಾಯಿತು.

ಸಮ್ಮಾನ ಕಾರ್ಯ ನೆರವೇರಿಸಿದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರ ಕುಂಬ್ರ ದಯಾಕರ ಆಳ್ವ ಮಾತನಾಡಿ, ಹಲವು ವರ್ಷಗಳಿಂದ ಪೆರುವೋಡಿ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯುತ್ತಿದೆ. ಹತ್ತಾರು ಆಟೋಟ ಸ್ಪರ್ಧೆಗಳ ಮೂಲಕ ಊರವರು ಒಗ್ಗೂಡಿ ಸಂಭ್ರಮಿಸಲು ಇದು ಉತ್ತಮ ಅವಕಾಶ ಕಲ್ಪಿಸಿದೆ ಎಂದರು.

ವೈದ್ಯ ಡಾ.ರಾಮಕಿಶೋರ್ ಕಾನಾವು ಮಾತನಾಡಿ, ಹಬ್ಬಗಳನ್ನು ಸರ್ವರೂ ಒಗ್ಗೂಡಿ ಆಚರಿಸಲು ಇದು ಒಳ್ಳೆಯ ವೇದಿಕೆ ಎಂದರು.

ಸಮ್ಮಾನ‌ ಸ್ವೀಕರಿಸಿದ ನಿವೃತ್ತ ಶಿಕ್ಷಕಿ ಲಲಿತಾ ಕುಮಾರಿ ಮಾತನಾಡಿ, ಮುಕ್ಕೂರು ನನ್ನೂರು.‌ ಇಲ್ಲಿನ ಸರಕಾರಿ ಶಾಲೆಯಲ್ಲಿ ಸುಧೀರ್ಘ ಅವಧಿಯ ತನಕ ಶಿಕ್ಷಕಳಾಗಿ ಸೇವೆ ಸಲ್ಲಿಸಿದ್ದೇನೆ. ಈ ಊರವರು, ವಿದ್ಯಾರ್ಥಿಗಳು, ಪೋಷಕರು ಸಮ್ಮಾನದ ಮೂಲಕ ತೋರಿದ ಪ್ರೀತಿಗೆ ಚಿರಖುಣಿ ಎಂದರು.

ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕಾನಾವು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರದ ಅರ್ಚಕ ಸುರೇಶ್ ಉಪಾಧ್ಯಾಯ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಉತ್ಸವ ಸಮಿತಿ ಅಧ್ಯಕ್ಷ ದಯಾನಂದ ಕಾನಾವುಜಾಲು, ಪ್ರಗತಿಪರ ಕೃಷಿಕ ನರಸಿಂಹ ತೇಜಸ್ವಿ ಕಾನಾವು, ಯುವಸೇನೆ ಗೌರವಾಧ್ಯಕ್ಷ ನವೀನ್ ರೈ ಬರಮೇಲು ಉಪಸ್ಥಿತರಿದ್ದರು. ಸಭೆಯಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಮನವಳಿಕೆ ಮೊದಲಾದವರು ಉಪಸ್ಥಿತರಿದ್ದರು.

ಅನ್ವಿತಾ ಕಾನಾವುಜಾಲು ಸಮ್ಮಾನಪತ್ರ ವಾಚಿಸಿದರು. ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರ ಕುಶಾಲಪ್ಪ ಗೌಡ ಪೆರುವಾಜೆ ಸ್ವಾಗತಿಸಿದರು. ನವಜೀತ್ ಜಾಲ್ಪಣೆ ವಂದಿಸಿದರು. ತ್ರಿಶಾ ಕಂರ್ಬುತ್ತೋಡಿ ನಿರೂಪಿಸಿದರು. ವಿದ್ಯಾರ್ಥಿ, ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು.