ಬೈಕ್ ಗಳ ಅಪಘಾತ : ಆರೋಪ ಸಾಬೀತು : ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

0

ಬೈಕ್ ಗಳ ನಡುವೆ ನಡೆದ ಅಪಘಾತದ ವಿಚಾರಣೆ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿ ಆದೇಶಿಸಿದೆ.

2023 ಜೂ.20ರಂದು ರಂದು ನಾಗೇಶ್ ಎಂ.ಬಿ. ರವರು ಕೆಎ 21 ಕ್ಯೂ 8618 ನೇ ನಂಬ್ರದ ಯಮಹಾ ಫೇಜರ್ ಮೋಟಾರ್ ಸೈಕಲ್ ನಲ್ಲಿ ಸಹ ಸವಾರನಾಗಿ ಮತ್ತು ಗೌತಮ್ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಸುಳ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಗುತ್ತಿಗಾರು ಕಡೆಗೆ ಹೋಗುತ್ತಾ ಸಮಯ ಸಂಜೆ ವೇಳೆ ನೆಲ್ಲೂರು ಕೆಮ್ರಾಜೆ ಗ್ರಾಮದ ಎಲಿಮಲೆ ಜಂಕ್ಷನ್ ತಲುಪಿದಾಗ ಸುಬ್ರಹ್ಮಣ್ಯ ಕಡೆಯಿಂದ ಆರೋಪಿಯಾದ ಜಬ್ಬರ್ ಸುಳ್ಯ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ 19 ಡಬ್ಲ್ಯೂ 0836 ನೇದನ್ನು ಸಹ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಅಜಾಗರೂಕತೆ ಮತ್ತು ‌ನಿರ್ಲಕ್ಷ್ಯತನದಿಂದ ತಿರುವು ರಸ್ತೆಯಲ್ಲಿ ತಪ್ಪು ಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಹಿಂಬದಿ ಸವಾರರಾಗಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಸವಾರ ಮತ್ತು ‌ಸಹಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರ ನಾಗೇಶ್ ರವರಿಗೆ ಬಲಕಾಲಿನ ಮಂಡಿ, ಬಲಕಾಲಿನ ಬೆರಳುಗಳಿಗೆ ರಕ್ತಗಾಯ ಹಾಗೂ ಸವಾರ ಗೌತಮ್ ಗೆ ಬಲಕಾಲಿನ ಪಾದ, ಬಲಕೈ ಬೆರಳು ಮತ್ತು ಗಲ್ಲಕ್ಕೆ ರಕ್ತಗಾಯ ಮತ್ತು ಬಲಕೈಗೆ ತರಚಿದ ಗಾಯವಾಗಿದ್ದು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.

ಈ ಪ್ರಕರಣದ ವಿಚಾರಣೆಯು ಸುಳ್ಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರು ನಡೆಸಿ ಆರೋಪಿಯನ್ನು ಆಗಸ್ಟ್ 23, 2025 ರಂದು ದೋಷಿ ಎಂದು ತೀರ್ಪು ನೀಡಿ ಈ ಕೆಳಕಂಡಂತೆ ಶಿಕ್ಷೆ ಪ್ರಕಟಿಸಿರುತ್ತಾರೆ.

ಕಲಂ 279 ರಡಿಯಲ್ಲಿ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು ₹1,000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಕಾರಾಗೃಹ ಶಿಕ್ಷೆ, ಕಲಂ 337 ರಡಿಯಲ್ಲಿ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು ₹500/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಕಾರಾಗೃಹ ಶಿಕ್ಷೆ, ಕಲಂ 338 ರಡಿಯಲ್ಲಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು ₹1000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಆಗಿರುತ್ತದೆ. ಈ ಎಲ್ಲಾ ಶಿಕ್ಷೆಯನ್ನು ಏಕಕಾಲಕ್ಕೆ ಜಾರಿಗೊಳಿಸತಕ್ಕದ್ದು ಎಂದು ನ್ಯಾಯಾಧೀಶರು ಆದೇಶ ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ.