ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಕೈಕಂಬ ಬಳಿಯ ನಡುತೋಟ ಕುಟುಂಬ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಮನೆತನ. ಇದರಲ್ಲಿ ಏನು ವಿಶೇಷ ಎಂದರೆ, ಈ ಕುಟುಂಬದ ಬಹುತೇಕರು ಅಧ್ಯಾಪನ ವೃತ್ತಿಗಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಶಿಕ್ಷಣ ವೃತ್ತಿ ಎಂದರೆ ಈ ಕುಟುಂಬಕ್ಕೆ ಎಲ್ಲಿಲ್ಲದ ಪ್ರೀತಿ. ಇದರಿಂದಾಗಿಯೇ ಈ ಕುಟುಂಬದಲ್ಲಿ 13 ಮಂದಿ ಶಿಕ್ಷಕ ವೃತ್ತಿಯನ್ನು ಅವಲಂಭಿಸಿದ್ದು, ಮಕ್ಕಳ ಬಾಳಿಗೆ
ಬೆಳಕನ್ನು ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.















ಇದಕ್ಕೆ ಮೂಲ ಕಾರಣ ಕುಟುಂಬದ ಹಿರಿಯ ಸದಸ್ಯ ನೀಲಪ್ಪ ಗೌಡ ನಡುತೋಟ ಅವರು, ೪೦ ವರ್ಷ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ತಾವು ಕಲಿತಿದ್ದ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, ಜೊತೆಯಲ್ಲೇ ಉನ್ನತ ಶಿಕ್ಷಣವನ್ನೂ ಪಡೆದು ಹರಿಹರ ಪಲ್ಲತಡ್ಕ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸದ ಉಪನ್ಯಾಸಕರಾಗಿ ನಿವೃತ್ತರಾಗಿದ್ದಾರೆ. ಬಳಿಕ, ಒಂದು ವರ್ಷ ಕಡಬದ ಏಮ್ಸ್ ಖಾಸಗಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಕುಟುಂಬದ ಹೆಚ್ಚಿನ ಸದಸ್ಯರು ಶಿಕ್ಷಕ ವೃತ್ತಿಯನ್ನೇ ಆರಿಸುವುದಕ್ಕೆ ನೀಲಪ್ಪ ಗೌಡರೇ ಪ್ರೇರಣೆ. ಸಹೋದರರಿಗೆ ಮತ್ತು ಸಹೋದರಿಯರಿಗೆ ವಿದ್ಯಾಭ್ಯಾಸ ಕೊಡಿಸಿ ಸಕಲ ನೆರವನ್ನೂ ನೀಡಿದ್ದರು.
ನೀಲಪ್ಪ ಗೌಡ ಅವರ ಪತ್ನಿ ಶಾಂತಿ ಅವರು ಸುಬ್ರಹ್ಮಣ್ಯದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನೀಲಪ್ಪ ಗೌಡ ಅವರ ಸಹೋದರ ದಿ| ದಿವಾಕರ ಗೌಡ ಅವರು ಸುಂಕದಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಸೇವೆಯಲ್ಲಿರುವಾಗಲೇ ವಿದ್ಯುದಾಘಾತದಿಂದ ಮೃತಪಟ್ಟಿದ್ದರು. ದಿವಾಕರ ಅವರ ಪತ್ನಿ ಸುಮತಿಯವರು ಬಿಳಿನೆಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿ ಯಾಗಿ ನಿವೃತ್ತರಾಗಿದ್ದಾರೆ. ನೀಲಪ್ಪ ಗೌಡ ಅವರ ಇನ್ನೊಬ್ಬ ಸಹೋದರ ವಿಶ್ವನಾಥ ಗೌಡ ಅವರು ಸುಬ್ರಹ್ಮಣ್ಯದ ಸುಬ್ರಹ್ಮಣೇಶ್ವರ ಪದವಿ ಪೂರ್ವ ಕಾಲೇಜಿನ ವೃತ್ತಿ ಶಿಕ್ಷಣ ವಿಭಾಗದ ಸ್ಥಾಪಕ ಉಪನ್ಯಾಸಕರಾಗಿ, ಮುಖ್ಯಸ್ಥರಾಗಿ ಅತ್ಯುತ್ತಮ ವೃತ್ತಿ ಶಿಕ್ಷಣ ಉಪನ್ಯಾಸಕ ರಾಷ್ಟ್ರ ಪ್ರಶಸ್ತಿಯನ್ನು ಪಡೆದು ನಿವೃತ್ತರಾಗಿದ್ದಾರೆ. ವಿಶ್ವನಾಥ ಅವರ ಪತ್ನಿ ಲೀಲಾ ಕುಮಾರಿ ಪಂಜದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿ.
ನೀಲಪ್ಪ ಅವರ ಮತ್ತೊಬ್ಬ ಸಹೋದರ ವಿಜಯ್ ಕುಮಾರ್ ಅವರು ಸಿರಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ರಾಗಿ ನಿವೃತ್ತರಾದವರು. ವಿಜಯ್ ಕುಮಾರ್ ಅವರ ಪತ್ನಿ ಗೀತಾ ದೈಹಿಕ ಶಿಕ್ಷಣ ಶಿಕ್ಷಕಿ. ನೀಲಪ್ಪ ಗೌಡರ ಗೆರೆ ಸಹೋದರಿ ಉಮಾ ಗುರುವಾಯನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿ. ಅವರ ಪತಿ ಧರ್ಣಪ್ಪ ಗೌಡ ಸೋಣಂದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಇವರ ಸೊಸೆ ಶಿಲ್ಪಾ ಆದರ್ಶ್ ಇವರು ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ನೀಲಪ್ಪಗೌಡ ಅವರ ಪುತ್ರಿ ವಿದ್ಯಾಸಿ ಬೆಂಗಳೂರು ವಿದ್ಯಾಶ್ರೀ ಬೆಂಗಳೂರು ಬೃಂದಾವನ ಇಂಜಿನಿಯರಿಂಗ್ ಕಾಲೇಜಲ್ಲಿ ಉಪನ್ಯಾಸಕಿಯಾಗಿದ್ದಾರೆ. ಸೊಸೆ ರೇಷ್ಮಾ ದೇವರಗುಂಡ ಅವರು ಸುಳ್ಯ ನೆಹರು ಮೆಮೊರಿಯಲ್ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿಯಾಗಿದ್ದಾರೆ. ಇಂತಹ ಒಂದೇ ಮನೆಯ ಶಿಕ್ಷಕ ಕುಟುಂಬವು ಎಲ್ಲರಿಗೂ ಮಾದರಿಯಾಗಿ ಮುಂದುವರಿಯಲಿ ಎಂದು ಆಶಿಸುತ್ತೇವೆ.










