














ಕಾಣಿಯೂರು ಸಮೀಪ ಪುಂಚತ್ತಾರು ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಯುವಕನೊಬ್ಬನ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಕೇಸು ದಾಖಲಾಗಿರುವ ಘಟನೆ ವರದಿಯಾಗಿದೆ.
ಕಾಲೇಜು ವಿದ್ಯಾರ್ಥಿನಿ ಸಂಜೆ ರಸ್ತೆ ಬದಿ ನಡೆದುಕೊಂಡು ಮನೆಗೆ ಹೋಗುವಾಗ ಪೆರ್ಲಂಪಾಡಿಯ ಉದಯ ಎಂಬವನು ಬೈಕಿನಲ್ಲಿ ಬಂದು ವಿದ್ಯಾರ್ಥಿನಿಯ ಮೈಗೆ ಕೈ ಹಾಕಿರುವುದಾಗಿ ತಿಳಿದುಬಂದಿದೆ. ಬಳಿಕ ವಿದ್ಯಾರ್ಥಿನಿ ಮನೆಯವರ ಜತೆಗೆ ಬೆಳ್ಳಾರೆಗೆ ಬಂದು ಪೊಲೀಸ್ ಠಾಣೆಗೆ ದೂರು ನೀಡಿದಳು.
ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದರು. ಆದರೆ ಯುವಕ ಯಾರೆಂದು ವಿದ್ಯಾರ್ಥಿನಿಗೆ ಗುರುತು ಪರಿಚಯವಿರಲಿಲ್ಲ. ಘಟನೆ ನಡೆದ ಸ್ಥಳದ ಸುತ್ತಮುತ್ತದ ಸುಮಾರು 15 ಸಿ.ಸಿ. ಕ್ಯಾಮರಾಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿನಿ ಹೇಳುವ ಸಮಯದಲ್ಲಿ ಹೋದ ಬೈಕ್ ಯಾವುದೆಂದು ಪತ್ತೆಯಾಯಿತೆಂದೂ, ಅದರ ನಂಬರಿನ ಆಧಾರದಲ್ಲಿ ಪೆರ್ಲಂಪಾಡಿಯ ಉದಯನನ್ನು ವಿಚಾರಣೆಗೊಳಪಡಿಸಿದಾಗ ಆತನೇ ಕೃತ್ಯ ಮಾಡಿದವನೆಂದು ಖಚಿತ ಪಟ್ಟಿತೆನ್ನಲಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿದುಬಂದಿದೆ.










