ಕಾರಿಗೆ ತಾಗಿದ‌ ಬಸ್ : ಬಸ್ ಚಾಲಕನ ಮೇಲೆ ಹಲ್ಲೆ

0

ಚಂದ್ರ ಕೋಲ್ಚಾರ್ ಮೇಲೆ‌ ಎಫ್.ಐ.ಆರ್. ದಾಖಲು

ರಸ್ತೆ ಬದಿಯಲ್ಲಿ‌ ನಿಲ್ಲಿಸಿದ್ದ ಕಾರಿಗೆ ಕೆ.ಎಸ್.ಆರ್.ಟಿ.ಸಿ.‌ ಬಸ್ ತಾಗಿತೆಂಬ‌ ಕಾರಣಕ್ಕೆ ಸಿಟ್ಟುಕೊಂಡ ಕಾರಿನ ‌ಮಾಲಕರು ಬಸ್ ‌ಚಾಲಕನ ಮೇಲೆ ಹಲ್ಲೆ ನಡೆಸಿದರೆನ್ನಲಾದ ಘಟನೆ ವರದಿಯಾಗಿದ್ದು, ಆಸ್ಪತ್ರೆಗೆ ದಾಖಲಾದ ಬಸ್ ಚಾಲಕ ಕಾರಿನವರ ಮೇಲೆ ದೂರು ದಾಖಲಿಸಿರುವ ಘಟನೆ ವರದಿಯಾಗಿದೆ.

ಸೆ.9 ರಂದು ಸಂಜೆ ಕಡಬದಿಂದ‌ ಸುಳ್ಯಕ್ಕೆ ಹೊರಟ ಕೆ.ಎಸ್.ಆರ್.ಟಿ.ಸಿ. ಬಸ್ ಸಂಜೆ 7.20ರ ಸುಮಾರಿಗೆ ಸುಳ್ಯದ ಹಳೆಗೇಟು ತಲುಪಿತು. ಅಲ್ಲಿ ಪ್ರಯಾಣಿಕರನ್ನು ಇಳಿಸಿ‌ ಮುಂದಕ್ಕೆ ಬಸ್ ಬರುತ್ತಿದ್ದಂತೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಬಸ್ ತಾಗಿತು. ಇದು ಬಸ್ ಚಾಲಕನಿಗೆ ಗೊತ್ತಾಗಿ ಅವರು ಬಸ್ಸನ್ನು ಸ್ವಲ್ಪ ದೂರ ಬಂದು‌ ನಿಲ್ಲಿಸಿದರೆನ್ನಲಾಗಿದೆ. ಕಾರಿಗೆ ಬಸ್ ತಾಗಿ ಕಾರು ಸ್ಕ್ಯ್ರಾಚ್ ಆದುದನ್ನು ನೋಡಿದ ಕಾರಿನ ಮಾಲಕರಾದ ಚಂದ್ರ‌ ಕೋಲ್ಚಾರ್ ರವರು ಬಸ್ ಬಳಿ‌ ಹೋಗಿ ಚಾಲಕನನ್ನು ಪ್ರಶ್ನಿಸಿ ಹಲ್ಲೆ ನಡೆಸಿದರೆಂದು ಹೇಳಲಾಗುತ್ತಿದೆ. ವಿಷಯ ತಿಳಿದು ಪೋಲೀಸರು ‌ಬಂದರು. ಬಳಿಕ ಎಸ್.ಐ. ಯವರು ಚಾಲಕನನ್ನು ಆಸ್ಪತ್ರೆಗೆ ಕಳುಹಿಸಿದರು. ಹಲ್ಲೆಗೊಳಗಾದ ಚಾಲಕ ಗುರುಪ್ರಸಾದ್ ರವರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಂದ್ರ ಕೋಲ್ಚಾರ್ ಮತ್ತಿತರರ ಮೇಲೆ ದೂರು ನೀಡಿದ್ದು, ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಆರೋಪ ನಿರಾಕರಣೆ
ಬಸ್ ಚಾಲಕನ ಮೇಲೆ ತಾನು ಹಲ್ಲೆ ನಡೆಸಿರುವೆನೆಂಬ ಆರೋಪವನ್ನು ಚಂದ್ರಾ ಕೋಲ್ಚಾರ್ ನಿರಾಕರಿಸಿದ್ದಾರೆ. ” ನನ್ನ ಕಾರಿಗೆ ಮಾತ್ರವಲ್ಲ. ಇನ್ನೊಂದು ಹೊಸಾ ಕಾರಿಗೂ ಆ ಬಸ್ಸು ತಾಗಿತ್ತು. ತುಂಬ ಜನ ಅಲ್ಲಿ ಸೇರಿದ್ದರು” ಎಂದು ಅವರು ಹೇಳಿದ್ದಾರೆ.