ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಪ್ರಗತಿ ಪರಿಶೀಲನಾ ಸಭೆ- 23 ಕ್ಕೂ ಹೆಚ್ಚು ಇಲಾಖಾಧಿಕಾರಗಳು ಭಾಗಿ
ಮಕ್ಕಳ ಹಕ್ಕುಗಳ ರಕ್ಷಣಾ ನೀತಿಯನ್ನು ಜವಾಬ್ದಾರಿಯುತ ಕರ್ತವ್ಯವಾಗಿ ಪಾಲಿಸಿ : ಡಾ.ತಿಪ್ಪೇಸ್ವಾಮಿ ಸೂಚನೆ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ ಟಿ ರವರು ಸೆ. 25 ರಂದು ಸುಳ್ಯಕ್ಕೆ ಭೇಟಿ ನೀಡಿ ಸುಳ್ಯ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಪ್ರಗತಿ ಪರಿಶೀಲನಾ ಸಭೆಯನ್ನು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಸಿದರು.
ಸಭೆಯಲ್ಲಿ ಸುಮಾರು ವಿವಿಧ ಇಲಾಖೆಗಳ 23ಕ್ಕೂ ಹೆಚ್ಚು ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.
ಸುದೀರ್ಘ ಮೂರು ಗಂಟೆಗಳ ಪರಿಶೀಲನಾ ಸಭೆ ನಡೆದು ಪ್ರತಿಯೊಂದು ಇಲಾಖೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಇರುವ ಜವಾಬ್ದಾರಿಗಳ ಮತ್ತು ಮಕ್ಕಳಿಗೆ ಕಲ್ಪಿಸಬೇಕಾದ ಯೋಜನೆಗಳ ಮತ್ತು ಅವರ ಹಕ್ಕಿನ ಬಗ್ಗೆ ಮಾಹಿತಿ ನೀಡಿದರು.
ಅಲ್ಲದೆ ತಾಲೂಕಿನ ಎಲ್ಲಾ ಇಲಾಖೆಗಳು ಮಕ್ಕಳಿಗಾಗಿ ನೀಡಿರುವ ಯೋಜನೆಗಳು ಮತ್ತು ರಕ್ಷಣಾ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ವೇದಿಕೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ರಶ್ಮಿ, ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಜಿಲ್ಲಾ ಸದಸ್ಯ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್,ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ,
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ರವರಿಂದ ಡಾ. ತಿಪ್ಪೇಶ್ ರವರು ಮಾಹಿತಿಯನ್ನು ಪಡೆದು ಇಲಾಖಾ ವತಿಯಿಂದ ಮಕ್ಕಳ ಹಕ್ಕುಗಳ ಬಗ್ಗೆ ಆಗಿರುವ ಪ್ರಗತಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಸುಳ್ಯ ತಾಲೂಕು ವ್ಯಾಪ್ತಿಯ ಶಾಲೆಗಳ ಬಗ್ಗೆ ಮಾಹಿತಿ ನೀಡಿದ ಶೀತಲ್ ರವರು ತಾಲೂಕಿನಲ್ಲಿ 185 ಶಾಲೆಗಳು ಕಾರ್ಯಚರಿಸುತ್ತಿದ್ದು ಈ ಶಾಲೆಗಳ ವಿದ್ಯಾರ್ಥಿಗಳ ಬಗ್ಗೆ ಇಲಾಖೆಯಿಂದ ಬೇಕಾದ ಕಾರ್ಯಯೋಜನೆಗಳನ್ನು ರೂಪಿಸಿಕೊಳ್ಳುವ ಬಗ್ಗೆ ಮಾಹಿತಿ ತಿಳಿಸಿದರು.
185 ಶಾಲೆಗಳಲ್ಲಿ ಮಳೆ ಹಾನಿ ಮುಂತಾದ ಸಮಸ್ಯೆಗಳಿಗೆ ಈಡಾಗಿರುವ ಸುಮಾರು 85 ಶಾಲೆ ಗಳು ದುಸ್ಥಿತಿ ಗೊಂಡಿರುವ ಬಗ್ಗೆ ಮಾಹಿತಿಯನ್ನು ನೀಡಿದರು.
ಶಾಲೆಗಳ ಮೂಲಭೂತ ಸೌಲಭ್ಯಕ್ಕೆಗಾಗಿ ಜಿಲ್ಲಾಧಿಕಾರಿಯವರ ಅನುದಾನದಿಂದ ತಲಾ ಎರಡು ಲಕ್ಷ ರೂಪಾಯಿ ದುರಸ್ತಿ ಕಾರ್ಯಗಳಿಗೆ ಬಂದಿರುವ ಬಗ್ಗೆ ಮಾಹಿತಿಯನ್ನು ನೀಡಿದರು.

ಸಭೆಯ ಆರಂಭದಲ್ಲಿ ಮಕ್ಕಳ ಸಹಾಯವಾಣಿ ಫಲಕ ಬಿಡುಗಡೆ ನಡೆಸಿದ ಆಯೋಗದ ಸದಸ್ಯರು ಈ ಫಲಕ ಪ್ರತಿಯೊಂದು ಸರಕಾರಿ ಹಾಗೂ ಖಾಸಗಿ ಶಾಲೆಗಳು ಮತ್ತು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಶಾಶ್ವತ ಫಲಕವಾಗಿ ಅಳವಡಿಸ ಬೇಕು ಎಂದು ಸೂಚನೆಯನ್ನು ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾತನಾಡಿ ತಾಲೂಕಿನಲ್ಲಿ 11 ವಿದ್ಯಾರ್ಥಿ ನಿಲಯಗಳಿದ್ದು ಈ 11 ವಿದ್ಯಾರ್ಥಿ ನಿಲಯಗಳಲ್ಲಿಯೂ ವಾರ್ಡನ್ ಗಳು ಇಲ್ಲದ ಬಗ್ಗೆ ಹೇಳಿದಾಗ ಬೇಸರ ವ್ಯಕ್ತಪಡಿಸಿದ ಆಯೋಗದ ಸದಸ್ಯರು ಕೂಡಲೇ ಸಂಬಂಧಪಟ್ಟ ಇಲಾಖೆಗೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಬಗ್ಗೆ ಮತ್ತು ಅದರ ಪಾಲನಾ ವರದಿಯನ್ನು ಅವರಿಗೆ ನೀಡುವ ಬಗ್ಗೆ ಖಡಕ್ಕಾಗಿ ಸೂಚನೆಯನ್ನು ನೀಡಿದರು.
ಆರೋಗ್ಯ ಇಲಾಖೆಯ ಅಧಿಕಾರಿಯೊಂದಿಗೆ ಮಾತನಾಡಿದ ಆಯೋಜಕರು ತಾಲೂಕಿನಲ್ಲಿ ಉಂಟಾಗಿರುವ ಶಿಶುಗಳ ಮರಣ ಸಂಖ್ಯೆ,ಹಾಗೂ ಅಪೌಷ್ಟಿಕತೆಯಿಂದ ಇರುವ ಮಕ್ಕಳ ಬಗ್ಗೆ,ಹೆರಿಗೆ ಸಂದರ್ಭದಲ್ಲಿ ತಾಯಂದಿರು ಮೃತಪಟ್ಟ ವರದಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಅದರ ಬಗ್ಗೆ ಯಾವ ರೀತಿಯ ರಕ್ಷಣಾ ಕಾರ್ಯಗಳನ್ನು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದೀರಿ ಎಂದು ವೈದ್ಯಾಧಿಕಾರಿಗಳಿಗೆ ಪ್ರಶ್ನೆಗಳನ್ನು ಕೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ನೀಡುವ ಯೋಜನೆಗಳ ಕುರಿತು ಮತ್ತು ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ತಾಲೂಕು ವೈದ್ಯಾಧಿಕಾರಿ ನೀಡಿದರು.















ಅಬಕಾರಿ ಇಲಾಖೆಯ ಅಧಿಕಾರಿಯೊಂದಿಗೆ ಮಾತನಾಡಿದ ಅವರು ತಾಲೂಕು ವ್ಯಾಪ್ತಿಯಲ್ಲಿ ಇರುವ ಶಾಲೆಗಳ ಪರಿಸರದಲ್ಲಿ ಯಾವುದಾದರೂ ಮಧ್ಯದ ಅಂಗಡಿ ಇದೆಯಾ ಎಂದು ಪ್ರಶ್ನಿಸಿದರು. ಅಲ್ಲದೇ ಪ್ರತಿಯೊಂದು ಮಧ್ಯದ ಅಂಗಡಿಗಳಲ್ಲಿ ಸಿ ಸಿ ಕ್ಯಾಮೆರಾ ಕಡ್ಡಾಯವಾಗಿ ಇರಬೇಕು ಮತ್ತು ಅದನ್ನು ಅಧಿಕಾರಿಗಳಾದ ನೀವು ನಿರಂತರ ಅದನ್ನು ಪರಿಶೀಲನೆ ಮಾಡಬೇಕು. ಬಾಲ ಕಾರ್ಮಿಕರು ಇರುವ ಬಗ್ಗೆ ಅಥವಾ ಯಾರಾದರೂ ಪೋಷಕರು ಮಕ್ಕಳೊಂದಿಗೆ ಮಧ್ಯ ತರಿಸುವುದು ಇನ್ನಿತರ ವಿಷಯಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾತನಾಡಿ ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರದಿಂದ ಸಿಗುವ ಸೋಪು,ಪೇಸ್ಟು ಇನ್ನಿತರ ಸಾಮಗ್ರಿಗಳು ಕಳೆದ ಮೂರು ತಿಂಗಳಿಂದ ಬಂದಿರುವುದಿಲ್ಲ ಎಂಬ ಮಾಹಿತಿಯನ್ನು ನೀಡಿದಾಗ ಕೂಡಲೇ ಇದಕ್ಕೆ ಸಂಬಂಧಪಟ್ಟವರ ಗಮನಕ್ಕೆ ನೀಡಿ ವ್ಯವಸ್ಥೆಯನ್ನು ತಲುಪಿಸಿಕೊಳ್ಳಬೇಕು ಎಂದು ಸೂಚನೆಯನ್ನು ನೀಡಿದರು.
ಪೊಲೀಸ್ ಇಲಾಖೆಯಿಂದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಶ್ರೀಮತಿ ಸರಸ್ವತಿ ಅವರು ಪ್ರಗತಿವರದಿ ಯನ್ನು ನೀಡಿ ಸುಳ್ಯ ತಾಲೂಕಿನಲ್ಲಿ ಒಟ್ಟು ನಡೆದಿರುವ ಪೋಕ್ಸೋ ಪ್ರಕರಣಗಳು, ಮಕ್ಕಳ ಆತ್ಮಹತ್ಯೆ ಪ್ರಕರಣಗಳು, ಹತ್ತನೆಯ ತರಗತಿ ಕಲಿಕೆಯನ್ನು ಕೊನೆಗೊಳಿಸಿ ಮನೆಯಲ್ಲಿ ಉಳಿಯುವ ಹೆಣ್ಣು ಮಕ್ಕಳ ಬಗ್ಗೆ ಪೋಷಕರು ವಹಿಸಬೇಕಾದ ಜವಾಬ್ದಾರಿಗಳ ಕುರಿತು ಮತ್ತು ಇದಕ್ಕಾಗಿ ಇಲಾಖೆಯಿಂದ ನೀಡುವ ಕಾನೂನು ಅರಿವುಗಳ ಕುರಿತ ವರದಿಯನ್ನು ಮಂಡಿಸಿದರು.
ಮೆಸ್ಕಾಂ ಇಲಾಖೆಯೊಂದಿಗೆ ಮಾತನಾಡಿದ ಆಯೋಗದ ಸದಸ್ಯರು ಶಾಲಾ ಆವರಣಗಳಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳು ಇರುವ ಶಾಲೆಗಳ ವಿವರ,ಇದ್ದಲ್ಲಿ ತೆರವುಗೊಳಿಸಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಅಲ್ಲದೆ ಯಾವುದೇ ಶಾಲಾ ಪರಿಸರದಲ್ಲಿ ವಿದ್ಯುತ್ ಲೈನ್ ಗಳು ಹಾದುಹೋಗದ ರೀತಿಯಲ್ಲಿ ಕಾರ್ಯ ನಿರ್ವಹಿಸಿಕೊಳ್ಳಬೇಕು ಮತ್ತು ವಿಪತ್ತು ನಿರ್ವಹಣಾ ಇಲಾಖೆ ಅದಕ್ಕೆ ಬೇಕಾದ ರೀತಿಯಲ್ಲಿಸಹಕಾರ ನೀಡುವ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಅವರು ಸೂಚನೆ ನೀಡಿದರು.
ಒಟ್ಟಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ನೀತಿಯನ್ನು ಎಲ್ಲಾ ಇಲಾಖೆಯ ಅಧಿಕಾರಿಗಳು ಪರಿಪೂರ್ಣವಾಗಿ ಪಾಲಿಸಬೇಕು ಮತ್ತು ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ವಿದ್ಯಾರ್ಥಿ ನಿಲಯಗಳನ್ನು ತಿಂಗಳಿಗೆ ಒಮ್ಮೆಯಾದರೂ ಕಡ್ಡಾಯವಾಗಿ ಭೇಟಿ ಮಾಡಿ ಅಲ್ಲಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮಕ್ಕಳ ಹಕ್ಕಿನ ರಕ್ಷಣೆಗಾಗಿ ಸ್ಪಂದನೆ ನೀಡುವಂತೆ ಸಲಹೆ ಸೂಚನೆಗಳನ್ನು ನೀಡಿದರು.
ವಿದ್ಯಾರ್ಥಿ ನಿಲಯಗಳು ಬಹಳ ಸೂಕ್ಷ್ಮ ಸ್ಥಳಗಳಾಗಿದ್ದು ಬೇರೆ ಬೇರೆ ಊರಿನ ಪೋಷಕರುಗಳು ತಮ್ಮ ಮಕ್ಕಳನ್ನು ಶಿಕ್ಷಣ ಸಹಾಯಕ್ಕಾಗಿ ಅಲ್ಲಿ ಬಿಟ್ಟು ಹೋಗಿರುತ್ತಾರೆ.
ಅವರನ್ನು ರಕ್ಷಣೆ ಮಾಡುವುದು ಮತ್ತು ಅವರ ಬಗ್ಗೆ ಕಾಳಜಿ ವಹಿಸುವುದು ಅಧಿಕಾರಿಗಳಾದ ನಿಮ್ಮೆಲ್ಲರ ಕರ್ತವ್ಯವಾಗಿದೆ.
ಆದ್ದರಿಂದ ಈ ಬಗ್ಗೆ ಎಲ್ಲಾ ಅಧಿಕಾರಿಗಳು ಆ ಮಕ್ಕಳತ್ತ ಗಮನವಹಿಸಬೇಕು ಮತ್ತು ಮಕ್ಕಳ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಸರಕಾರದಿಂದ ಸಿಗುವ ಬಿಸಿಯೂಟದ ಅಕ್ಕಿ ಪದಾರ್ಥಗಳ ಬಗ್ಗೆಯೂ ಅಧಿಕಾರಿಗಳು ಗಮನವಹಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಅಕ್ಕಿ ಇನ್ನಿತರ ಪದಾರ್ಥಗಳು ವಿನಾಕಾರಣ ವೇಸ್ಟ್ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಮಿಕ ಇಲಾಖೆಯ ಅಧಿಕಾರಿಯೊಂದಿಗೆ ಮಾತನಾಡಿದ ಅವರು ಕಾರ್ಮಿಕರ ಮಕ್ಕಳಿಗಾಗಿ ಇಲಾಖೆಯಿಂದ ಯಾವ ಯಾವ ಯೋಜನೆಗಳನ್ನು ರೂಪಿಸಲಾಗಿದೆ ಮತ್ತು ಎಷ್ಟು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮುಂತಾದ ವ್ಯವಸ್ಥೆಗಳನ್ನು ತಲುಪಿಸಲಾಗಿದೆ ಎಂಬ ಮಾಹಿತಿಯನ್ನು ಪಡೆದುಕ್ಕೊಂಡರು.
ಅಲ್ಲದೆ ವರ್ಷದಲ್ಲಿ ಬಾಲಕಾರ್ಮಿಕರನ್ನು ಎಷ್ಟು ಜಾಗದಿಂದ ಪತ್ತೆ ಹಚ್ಚಿದ್ದೀರಿ ಮತ್ತು ಅವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಂಡರು.
ವಿಕಲಚೇತನರಿಗೆ ನಗರ ಪಂಚಾಯತ್ ಆಗಿರಬಹುದು ಅಥವಾ ಗ್ರಾಮ ಪಂಚಾಯತಿ ಆಗಿರ ಬಹುದು ಅದರ ವಾರ್ಷಿಕ ಆದಾಯದಲ್ಲಿ ಶೇಕಡ ಐದರಷ್ಟು ಅವರ ಕಲ್ಯಾಣಕ್ಕಾಗಿ ನೀಡಬೇಕು ತಾಲೂಕಿನಲ್ಲಿ ಅದರ ಪ್ರಯೋಜನ ಎಷ್ಟು ಪಡೆದಿದ್ದೀರಿ ಎಂದು ಮಾಹಿತಿಯನ್ನು ಕೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಪಿ ಡಿ ಒ ಗಳಿಗೆ ಸೂಚನೆ ನೀಡಿದ ಅವರು ಸರ್ಕಾರಿ ಕೆಲಸ ನಿಮ್ಮ ಭಾಗ್ಯದಿಂದ ಸಿಕ್ಕಿರುತ್ತದೆ. ಅದಕ್ಕಾಗಿ ನೀವುಗಳು ತುಂಬಾ ಕಷ್ಟ ಪಟ್ಟಿದ್ದೀರಿ ಮತ್ತು ವಿದ್ಯಾಭ್ಯಾಸವನ್ನು ಪಡೆದುಕೊಂಡು ಅದನ್ನು ಸಾಧಿಸಿ ಕೊಂಡಿದ್ದೀರಿ. ಆದ್ದರಿಂದ ಆ ಒಂದು ಕರ್ತವ್ಯವನ್ನು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮುಡಿಪಾಗಿಸಿಕೊಳ್ಳಬೇಕು ಮತ್ತು ದಿನದಲ್ಲಿ ಒಂದು ಅರ್ಧ ಗಂಟೆ ಸಮಯವಾದರೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನಿಗದಿ ಪಡಿಸಿಕೊಳ್ಳಬೇಕು.
ಸರ್ಕಾರಿ ಅಧಿಕಾರಿಗಳಾದ ನಾವು ಕೂಡ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಕಷ್ಟಗಳ ಜೀವನ ಮಾಡಿ ಈ ಕೆಲಸವನ್ನು ಸಂಪಾದಿಸಿಕೊಂಡಿರುತ್ತೇವೆ. ಆ ಜವಾಬ್ದಾರಿಯತ ಸ್ಥಾನದಲ್ಲಿ ನಿಂತು ನಾವು ಸಮಾಜದಲ್ಲಿರುವ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸೇವೆಯನ್ನು ನೀಡಬೇಕು ಎಂದು ಕೇಳಿಕೊಂಡರು.
ಪ್ರಗತಿ ಪರಿಶೀಲನೆಯ ಬಳಿಕ ಕೊನೆಯದಾಗಿ ಮಾತನಾಡಿದ ಅವರು ಸುಳ್ಯದಲ್ಲಿ ಅಧಿಕಾರಿಗಳ ಕೆಲಸ ಕಾರ್ಯಗಳನ್ನು ಕಂಡಾಗ ಮೆಚ್ಚುಗೆ ಆಗುತ್ತಿದೆ. ಸುಮಾರು 100 ರಲ್ಲಿ 60 ಅಂಕವನ್ನು ನಾನು ಅವರಿಗೆ ಇಂದು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಉಳಿದ 40 ಅಂಕಗಳ ಕೆಲಸ ಕಾರ್ಯಗಳು ಅವರ ಬಳಿಯಿಂದ ಆಗಬೇಕು.
ಅದನ್ನು ಮುಂದಿನ ದಿನಗಳಲ್ಲಿ ಮಾಡುವ ಮೂಲಕ ದೇಶದಲ್ಲಿ ಮಾದರಿ ತಾಲೂಕು ಆಗುವಂತೆ ಸುಳ್ಯ ತಾಲೂಕನ್ನು ಮಾಡಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು.
ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖಾಧಿಕಾರಿ ಶೈಲಜಾ ಸ್ವಾಗತಿಸಿ ವಂದಿಸಿದರು. ಸಿಡಿಪಿಒ ಇಲಾಖೆಯವರು ನೀಡಿದ ಯೋಜನೆಗಳಿಗೆ ತೃಪ್ತಿಪಟ್ಟುಕೊಂಡ ಆಯೋಗದ ಸದಸ್ಯರು ತಾಲೂಕಿನಲ್ಲಿರುವ ಎಲ್ಲಾ ಅಂಗನವಾಡಿ ಕಟ್ಟಡಗಳು ಸ್ವಂತದಾಗಿದ್ದು ಅಲ್ಲಿಯ ಎಲ್ಲಾ ವ್ಯವಸ್ಥೆಗಳು ಕೂಡ ಸ್ಥಳೀಯರ ಮತ್ತು ದಾನಿಗಳ ಇಲಾಖೆಗಳ ಸಹಕಾರದಿಂದ ನಡೆಯುತ್ತಿದೆ ಎಂಬ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗಿದ್ದರು.
ಸಭೆಯಲ್ಲಿ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು,ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಗಳೂರು, ಸುಳ್ಯ, ಬೆಳ್ಳಾರೆ ಸುಬ್ರಹ್ಮಣ್ಯ, ಪೊಲೀಸ್ ಠಾಣಾಧಿಕಾರಿಗಳು,
ತಾಲೂಕು ವೈದ್ಯಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ,
ಕಾರ್ಮಿಕ ನಿರೀಕ್ಷಕರು,
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು,
ಕಲ್ಯಾಣಾಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಆಡಳಿತ ವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಸುಳ್ಯ,
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಸುಳ್ಯ,ಸಹಾಯಕ ಕೃಷಿ ನಿರ್ದೇಶಕರು ಸುಳ್ಯ, ಪಿಡಬ್ಲ್ಯೂಡಿ ಇಲಾಖೆ ಸುಳ್ಯ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿ.ಪಂಚಾಯತ್ ಇಂಜಿನೀಯರ್ ಉಪವಿಭಾಗ ಸುಳ್ಯ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮೆಸ್ಕಾಂ ಸುಳ್ಯ,
ಉಪನೊಂದಣಾಧಿಕಾರಿಗಳು, ವಲಯ ಅರಣ್ಯ ಅಧಿಕಾರಿಗಳು, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.










