ಕೊಲ್ಲಮೊಗ್ರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಮಾಧವ ಚಾಂತಾಳರವರ ಮೇಲೆ ಪಂಚಾಯತ್ ನಿಂದಲೇ ದೂರು ದಾಖಲು

0

ಕೊಲ್ಲಮೊಗ್ರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಮಾಧವ ಚಾಂತಾಳ ಅವರ ಮೇಲೆ ಕಳ್ಳತನ ಆರೋಪದಡಿ ಕೊಲ್ಲಮೊಗ್ರು ಗ್ರಾ.ಪಂ. ಪಿಡಿಒ ನೀಡಿದ ದೂರಿನ ಅನ್ವಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ವರದಿಯಾಗಿದೆ.

ಕೊಲ್ಲಮೊಗ್ರು ಗ್ರಾಮ ಪಂಚಾಯತ್‌ನ ಪಿಡಿಓ ಚೆನ್ನಪ್ಪ ನಾಯ್ಕ ಅವರು ದೂರು ಸಲ್ಲಿಸಿದ್ದು,
ಸದ್ರಿ ಗ್ರಾಮ ಪಂಚಾಯತ್ ಚರಾಸ್ತಿಗಳನ್ನು ಪರಿಶೀಲನೆ ಮಾಡುವಾಗ ಪಂಚಾಯತ್ ನ ಚರಾಸ್ತಿಗಳಾದ ಹೆಡ್ ಫೋನ್, ಧ್ವನಿವರ್ಧಕ ಸ್ಟಾಂಡ್ ಮೈಕ್ ಸೆಟ್, ಸಿ.ಸಿ. ಕ್ಯಾಮರಾಗಳು ಕಳವು ಆಗಿದ್ದು ಸದ್ರಿ ಸೊತ್ತುಗಳ ಅಂದಾಜು ಮೌಲ್ಯ ರೂ.10,000 ಆಗಿರುತ್ತದೆ. ಸದ್ರಿ ಕಳವಾದ ಸೊತ್ತುಗಳು ದುರಸ್ಥಿಯಲ್ಲಿದ್ದು ಉಪಯೋಗ ಇಲ್ಲದೇ ಇದ್ದು ಸದ್ರಿ ಸೊತ್ತುಗಳು ಪಂಚಾಯತ್ ದಾಸ್ತಾನು ವಹಿಯಲ್ಲಿ ದಾಖಲಾಗಿರುತ್ತದೆ. ಸದ್ರಿ ಕಳವಾದ ಸೊತ್ತುಗಳನ್ನು ಪಂಚಾಯತ್ ಉಪಾಧ್ಯಕ್ಷರಾಗಿರುವ ಮಾಧವ ಚಾಂತಾಳರವರು ಕಳವು ಮಾಡಿರುವ ಬಗ್ಗೆ ಸಂಶಯ ಬಂದಿದ್ದು , ಆ ಕಾರಣ ಪ್ರಕರಣದ ಸಂಪೂರ್ಣ ತನಿಖೆಯನ್ನು ಮಾಡಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕಳವಾದ ಸೊತ್ತುಗಳು 2014-2015 ನೇ ಸಾಲಿನಲ್ಲಿ ಪಂಚಾಯತ್ ವತಿಯಿಂದ ಖರೀದಿಸಿರುವ ಸೊತ್ತುಗಳಾಗಿದ್ದು ಪಂಚಾಯತ್ ದಾಖಲಾತಿಯಿಂದ ತಿಳಿದುಬಂದಿರುತ್ತದೆ ಎಂದು ತಿಳಿಸಲಾಗಿದೆ.

ಪಂಚಾಯತ್ ಸೊತ್ತುಗಳನ್ನು ನಾನು ತೆಗೆದುಕೊಂಡಿಲ್ಲ. ಯಾವುದೇ ತನಿಖೆಗೆ ಸಿದ್ದ : ಮಾಧವ ಚಾಂತಾಳ

ಘಟನೆಗೆ ಸಂಬಂಧಿಸಿದಂತೆ ಗ್ರಾ.ಪಂ. ಉಪಾಧ್ಯಕ್ಷ ಮಾಧವ ಚಾಂತಾಳ ಅವರನ್ನು ಸಂಪರ್ಕಿಸಿದಾಗ ” ನಾನು ಗ್ರಾ.ಪಂ. ನ ಯಾವುದೇ ಸೊತ್ತುಗಳನ್ನು ತೆಗೆದುಕೊಂಡಿಲ್ಲ, ನನ್ನಲ್ಲಿ ಲಕ್ಷಾಂತರ ಮೌಲ್ಯದ ಸೌಂಡ್ ಸಿಸ್ಟಮ್ ವಸ್ತುಗಳು ಇದೆ. ನನಗೆ ಪಂಚಾಯತ್ ನಿಂದ ಕಳ್ಳತನ ಮಾಡುವ ಅಗತ್ಯವಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡಲಾಗುತ್ತಿದೆ. ನಾನು ಭಜನಾ ಮಂದಿರಕ್ಕೆ ನಾನು ಹೊಸ ಮೈಕ್ ಸೆಟ್ ದಾನವಾಗಿ ಕೊಟ್ಟಿದ್ದೇನೆ. ಹಲವಾರು ಕಡೆಗಳಿಗೆ ಚೆಯರ್ ಕೊಡುಗೆ ಕೊಟ್ಟಿದ್ದೇನೆ. ಅಂತಹ ನನ್ನ ಮೇಲೆ ದುರುದ್ದೇಶದಿಂದ ಸುಳ್ಳು ದೂರು ನೀಡಿರುವುದು ನನಗೆ ಅತ್ಯಂತ ನೋವು ತಂದಿದೆ. ಈ ಪ್ರಕರಣದ ಸರಿಯಾದ ತನಿಖೆ ಆಗಲೇ ಬೇಕು” ಎಂದು ಹೇಳಿದ್ದಾರೆ.