ಐವತ್ತೊಕ್ಲು ಗ್ರಾಮದ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನ.5 ರಂದು ಶ್ರೀ ಮಹಾವಿಷ್ಣು ಮಹಾಯಾಗ ನಡೆಯಲಿದೆ ಎಂದು ಶ್ರೀ ಮಹಾವಿಷ್ಣು ಮಹಾಯಾಗದ ಸಮಿತಿ ಸಂಚಾಲಕ ವೀಜೆ ವಿಖ್ಯಾತ್ ತಿಳಿಸಿದ್ದಾರೆ.















ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸೆ.24 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಋಷಿ ಪರಂಪರೆಯ, ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಹಾಗೂ 2026 ಎಪ್ರಿಲ್ ತಿಂಗಳಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನ ನಿಡ್ವಾಳ ಕರಿಕಳ ಇದರ ನೂತನ ದೇವಾಲಯದ ಲೋಕಾರ್ಪಣೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕಾರ್ತಿಕ ಮಾಸ ಹುಣ್ಣಿಮೆಯ ನ.5 ರಂದು ಬೆಳಗ್ಗೆಯಿಂದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾವಿಷ್ಣು ಮಹಾಯಾಗ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೋಡಿಮಠದ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಮಹಾಯಾಗಕ್ಕೆ ಸಮಿತಿ ರಚಿಸಿ ಕೆಲಸ-ಕಾರ್ಯಗಳು ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಲಾಗಿದ್ದು, ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ, ಭಕ್ತರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ಡಾ.ರವಿಕಕ್ಕೆಪದವು, ಪ್ರಧಾನ ಕಾರ‍್ಯದರ್ಶಿ ಚಂದ್ರಪ್ರಕಾಶ್ ಕಂಬಳ, ಪ್ರಮುಖರಾದ ದಾಮೋದರ, ನಳಿನಾಕ್ಷಿ, ಕುಸುಮಾವತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.










