ಸಿ.ಸಿ.ಎಫ್. ಕೋರ್ಟ್ ಆದೇಶದಂತೆ ಎರಡೂವರೆ ವರ್ಷದ ಅಡಿಕೆ ಗಿಡಗಳನ್ನು ತೆರವುಗೊಳಿಸಿದ ಅರಣ್ಯ ಇಲಾಖಾ ಸಿಬ್ಬಂದಿಗಳು
ಊರವರ ಆಕ್ರೋಶ – ದೂರು ನೀಡಿದ ವ್ಯಕ್ತಿಗೆ ಹಲ್ಲೆ – ಇತ್ತಂಡಗಳಿಂದ ಪೊಲೀಸ್ ದೂರು
ಅರಣ್ಯ ಇಲಾಖೆಯ ಜಾಗವನ್ನು ಅತಿಕ್ರಮಿಸಿ ಅಡಿಕೆ ಕೃಷಿ ಮಾಡಿದ್ದಾರೆಂದು ಕೃಷಿಕರೊಬ್ಬರ ಮೇಲೆ ಸ್ಥಳೀಯರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ , ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ನ್ಯಾಯಾಲಯವು ಸಿ.ಸಿ.ಎಫ್. ಗೆ ಆದೇಶಿಸಿದ ಹಾಗೂ ಈ ಆದೇಶದ ಮೇರೆಗೆ ಸಿ.ಸಿ.ಎಫ್. ನ್ಯಾಯಾಲಯವು ಒತ್ತುವರಿ ತೆರವುಗೊಳಿಸಲು ಎ.ಸಿ.ಎಫ್.ಗೆ ಆದೇಶಿಸಿ, ಅರಣ್ಯ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹೋಗಿ ಎರಡೂವರೆ ವರ್ಷ ಪ್ರಾಯದ ನೂರಾರು ಅಡಿಕೆ ಗಿಡಗಳನ್ನು ಕಡಿದು ಅರಣ್ಯ ಇಲಾಖೆಯ ಸಸಿಗಳನ್ನು ನೆಟ್ಟ ಘಟನೆ ಸೆ. 26ರಂದು ಯೇನೆಕಲ್ಲು ಗ್ರಾಮದ ಪೂರ್ಲುಪ್ಪಾಡಿಯಲ್ಲಿ ನಡೆದಿದೆ.
ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಉಳ್ಳಾಕುಲು ಉಳ್ಳಾಲ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೂರ್ಲುಪಾಡಿಯ ಕುಮಾರ ಎಂಬವರಿಗೆ ಅಕ್ರಮ ಸಕ್ರಮದಲ್ಲಿ 1 ಎಕ್ರೆ 44 ಸೆಂಟ್ಸ್ ಜಾಗ 2019 ರಲ್ಲಿ ಮಂಜೂರಾಗಿತ್ತು. ಆ ಸ್ಥಳದಲ್ಲಿದ್ದ ಹಳೆಯ ರಬ್ಬರ್ ಮರಗಳನ್ನು ಕಡಿದು ಅವರು ಎರಡೂವರೆ ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ನೆಟ್ಟಿದ್ದರು.















ಆ ಸಂದರ್ಭದಲ್ಲಿ ಸ್ಥಳೀಯರಾದ ಸೀತಾರಾಮ ಕೆಬ್ಬೋಡಿ ಎಂಬವರು ಕುಮಾರರು ಸರ್ವೆ ನಂ. 362ರಲ್ಲಿ 1.44 ಎಕ್ರೆ ಅರಣ್ಯ ಪ್ರದೇಶವನ್ನು ಕಾನೂನು ಬಾಹಿರವಾಗಿ ಸ್ವಾಧೀನಪಡಿಸಿಕೊಂಡು ಕೃಷಿ ಮಾಡಿದ್ದಾರೆಂದು ಲೋಕಾಯುಕ್ತಕ್ಕೆ ದೂರು ನೀಡಿದರೆನ್ನಲಾಗಿದೆ. ಆ ಸಂದರ್ಭದಲ್ಲಿ ಪೂರ್ಲುಪ್ಪಾಡಿಗೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದು ಅರಣ್ಯ ಪ್ರದೇಶವಾದುದರಿಂದ ಯಾವುದೇ ಯಂತ್ರಗಳನ್ನು ಬಳಕೆ ಮಾಡುವುದಾಗಲೀ, ಕೃಷಿ ಮಾಡುವುದಾಗಲೀ ಮಾಡಬಾರದೆಂದು ಹೇಳಿ ಹೋದರೆನ್ನಲಾಗಿದೆ. 2019 ರಲ್ಲೇ ಕುಮಾರ್ ರವರ ಹೆಸರಿಗೆ ದಾಖಲೆಗಳು ದೊರಕಿರುವುದರಿಂದ ಕುಮಾರ್ ರು ಉದ್ಯೋಗ ಖಾತರಿ ಯೋಜನೆಯ ಮೂಲಕ ಅಡಿಕೆ ಗಿಡಗಳನ್ನು ನೆಟ್ಟಿದ್ದರು. ಇದೀಗ ಆ ಕೃಷಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಬೇಕೆಂದು ಸಿ.ಸಿ.ಎಫ್. ನ್ಯಾಯಾಲಯದಿಂದ ಎ.ಸಿ.ಎಫ್. ಗೆ ಆದೇಶವಾಗಿರುವುದರಿಂದ ಅದರ ಪ್ರತಿಯನ್ನು ಕುಮಾರರಿಗೂ ಕಳುಹಿಸಿ ತೆರವುಗೊಳಿಸಲು ಗಡುವು ನೀಡಿದರೆನ್ನಲಾಗಿದೆ. ಸೆ. 25 ರಂದು ಸಂಜೆ ಕುಮಾರರಿಗೆ ಮರುದಿನ ಅರಣ್ಯ ಇಲಾಖಾ ಸಿಬ್ಬಂದಿಗಳು ಅಡಿಕೆ ಗಿಡಗಳನ್ನು ತೆರವುಗೊಳಿಸಲು ಬರುವ ವಿಷಯ ತಿಳಿಯಿತೆನ್ನಲಾಗಿದೆ.
ಕೃಷಿ ಕಡಿಯಲು ಆರಂಭಿಸಿದ ಇಲಾಖೆ
ಸೆ.26 ರಂದು ಬೆಳಿಗ್ಗೆ ಅರಣ್ಯ ಇಲಾಖೆಯ ಎ.ಸಿ.ಎಫ್. ಪ್ರಶಾಂತ್ ಪೈ, ಪಂಜ ರೇಂಜರ್ ಸಂಧ್ಯಾ ಸೇರಿದಂತೆ ಇಲಾಖೆಯ ಸುಮಾರು 25 ರಷ್ಟು ಸಿಬ್ಬಂದಿಗಳು ಪೂರ್ಲುಪಾಡಿಗೆ ಆಗಮಿಸಿ ಅಡಿಕೆ ಗಿಡಗಳನ್ನು ಬುಡದಿಂದ ಕತ್ತರಿಸತೊಡಗಿದರು.
ಊರವರ ಆಕ್ಷೇಪ
ಈ ಸಂದರ್ಭದಲ್ಲಿ ಊರಿನ ಹಲವು ಮಂದಿ ಸ್ಥಳಕ್ಕೆ ಬಂದು ಅಡಿಕೆ ಗಿಡಗಳನ್ನು ಕಡಿಯಬಾರದೆಂದು ವಿನಂತಿಸಿಕೊಂಡರಾದರೂ ಅರಣ್ಯ ಇಲಾಖಾ ಅಧಿಕಾರಿಗಳು ಒಪ್ಪಲಿಲ್ಲ. ಸುಳ್ಯದಿಂದ ಬಿ.ಜೆ.ಪಿ. ಮುಖಂಡ ಹರೀಸದ್ ಕಂಜಿಪಿಲಿ, ಕುಮಾರ್ ರವರ ನ್ಯಾಯವಾದಿ ವಿನಯ್ ಮುಳುಗಾಡು ಮತ್ತಿತರರು ಬಂದು ಅಡಿಕೆ ಗಿಡಗಳನ್ನು ಕಡಿಯದಂತೆ ವಿನಂತಿಸಿದರೂ ಅಧಿಕಾರಿಗಳು ಒಪ್ಪಲಿಲ್ಲ. ನಾವು ಸಿ.ಸಿ.ಎಫ್. ನ್ಯಾಯಾಲಯದ ಆದೇಶವನ್ನು ಕುಮಾರ್ ರಿಗೆ ಮುಂಚಿತವಾಗಿ ನೀಡಿ ಅತಿಕ್ರಮಣ ತೆರವು ಮಾಡಲು ಕಾಲಾವಕಾಸದ ನೀಡಿದ್ದೆವು. ಆದರೆ ಅವರು ಮಾಡಿಲ್ಲ. ಮಾತ್ರವಲ್ಲದೆ ಆ ಆದೇಶಕ್ಕೆ ತಡೆಯಾಜ್ಞೆ ಕೂಡ ತಂದಿಲ್ಲ. ನಾವು ನಮ್ಮ ಮೇಲಧಿಕಾರಿಗಳಿಗೆ ಉತ್ತರ ಕೊಡಬೇಕಲ್ಲವೇ ? ” ಎಂದು ರೇಂಜರ್ ಸಂಧ್ಯಾರವರು ಕೇಳಿದರು. ಆಗ ನಾಯಕರು ನಿರುತ್ತರರಾದರೆನ್ನಲಾಗಿದೆ.
ಬಳಿಕ ಅರಣ್ಯ ಇಲಾಖಾ ಸಿಬ್ಬಂದಿ ಅಲ್ಲಿದ್ದ ಎಲ್ಲ ಅಡಿಕೆ ಗಿಡಗಳನ್ನೂ ಕಡಿದು ತೆಗೆದರಲ್ಲದೆ, ಆ ಗುಂಡಿಗಳಿಗೆ ತಾವು ಇಲಾಖಾ ವತಿಯಿಂದ ತಂದಿದ್ದ ಹಣ್ಣಿನ ಗಿಡಗಳನ್ನು ನೆಟ್ಟರೆನ್ನಲಾಗಿದೆ. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯವರ ಜೆಸಿಬಿ ತನ್ನ ಸ್ಥಳಕ್ಕೆ ಬಾರದಂತೆ ಕುಮಾರ್ ರವರ ತಾಯಿ ರುಕ್ಮಿಣಿಯವರು ದಾರಿಗೆ ಅಡ್ಡಲಾಗಿ ಕೂತು ತಡೆದರೆಂದೂ ತಿಳಿದುಬಂದಿದೆ.










