ಅಕ್ರಮ – ಸಕ್ರಮದಲ್ಲಿ ಮಂಜೂರಾದ ಜಾಗವದು – ಕೃಷಿಕನ ಮೇಲೆ ಈ ರೀತಿಯ ಕ್ರಮ ಸರಿಯೇ ?
ನ್ಯಾಯಾಲಯದ ಆದೇಶದಂತೆ ಅರಣ್ಯ ಅತಿಕ್ರಮಣ ಜಾಗದಲ್ಲಿದ್ದ ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆಯವರು ಕಿತ್ತೆಸೆದ ವಿಚಾರ ಸುಳ್ಯ ತಾಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದೆ.

ಶಾಸಕಿ ಭಾಗೀರಥಿ ಮುರುಳ್ಯ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಹಶೀಲ್ದಾರ್ ಮಂಜುಳಾ, ತಾ.ಪಂ. ಇ.ಒ. ರಾಜಣ್ಣ, ಕೆಡಿಪಿ ಸದಸ್ಯರುಗಳಾದ ಧರ್ಮಪಾಲ ಕೊಯಿಂಗಾಜೆ, ಪರಮೇಶ್ವರ ಕೆಂಬಾರೆ, ಜಯಪ್ರಕಾಶ್ ನೆಕ್ರೆಪ್ಪಾಡಿ, ಅಶ್ರಫ್ ಗುಂಡಿ, ತೀರ್ಥರಾಮ ಬಾಳಾಜೆ, ಶಕುಂತಲಾ ನಾಗರಾಜ್ ಹಾಗೂ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಧರ್ಮಪಾಲ ಕೊಯಿಂಗಾಜೆಯವರು, ಏನೆಕಲ್ಲಿನಲ್ಲಿ ಕೃಷಿಕರೊಬ್ಬರ ಜಮೀನಿನಲ್ಲಿದ್ದ ಅಡಿಕೆ ಗಿಡಗಳನ್ನು ಅರಣ್ಯ ಇಲಾಖೆ ಕಿತ್ತೆಸೆದಿದೆ. ಈ ಕ್ರಮ ಸರಿಯಲ್ಲ. ಕೃಷಿ ಮಾಡಬೇಕೆಂದು ಯೋಜನೆಗಳು ಬರುತ್ತಿವೆ. ಇನ್ನೊಂದೆಡೆ ಅಧಿಕಾರಿಗಳು ಕೃಷಿನಾಶ ಪಡಿಸುತ್ತಾರೆ ಈ ಕ್ರಮ ಸರಿಯಲ್ಲ” ಎಂದು ಹೇಳಿದರು. ಅದಕ್ಕುತ್ತರಿಸಿದ ಪಂಜ ರೇಂಜರ್ ಸಂಧ್ಯಾರವರು, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತೀರ್ಪುಬಂದಿದೆ. ಅದರ ಅದೇಶದಂತೆ ನಾವು ನಿಯಮಾನುಸಾರ ಕ್ರಮಕೈಗೊಂಡಿದ್ದೇವೆ. ಆ ಮನೆಯವರಿಗೆ ಮೊದಲೇ ನೋಟೀಸು ನೀಡಲಾಗಿದೆ. ಮತ್ತು ಮೊನ್ನೆ ದಿನ ಅವರ ಲಾಯರ್ ಕೂಡಾ ಸ್ಥಳದಲ್ಲಿದ್ದರು. ಎಲ್ಲಮಾಹಿತಿ ನೀಡಿ, ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದೇವೆ” ಎಂದು ಹೇಳಿದರು.















ಪರಮೇಶ್ವರ ಕೆಂಬಾರೆ, ಜಯಪ್ರಕಾಶ್ ನೆಕ್ರೆಪ್ಪಾಡಿಯವರು, ಆ ಕೃಷಿ ಅಷ್ಟು ಬೆಳೆಸಬೇಕಾದರೆ ಎಷ್ಟು ಕಷ್ಟಪಡಬೇಕೆಂದು ಕೃಷಿಕನಿಗೆ ಗೊತ್ತಿದೆ. ನೀವು ಅಧಿಕಾರಿಗಳು ಸ್ವಲ್ಪ ಮಾನವೀಯತೆ ತೋರಬೇಕಿತ್ತು” ಎಂದು ಹೇಳಿದಾಗ, “ನ್ಯಾಯಾಲಯದ ಆದೇಶವನ್ನು ನಾವು ಮೀರುವಂತಿಲ್ಲ. ದೂರು ದಾಖಲಾಗಿ ಅದರ ವಿಚಾರಣೆ ನಡೆದೇ ಈ ರೀತಿಯ ಆದೇಶವಾಗಿದೆ” ಎಂದು ರೇಂಜರ್ ಮತ್ತೆ ಸ್ಪಷ್ಟ ಪಡಿಸಿದಾಗ, ಕೆಡಿಪಿ ಸದಸ್ಯ ಪರಮೇಶ್ವರರು, “ಶಾಸಕರೇ ನೀವಾದರೂ ಅಧಿಕಾರಿಗಳಿಗೆ ಸೂಚನೆ ನೀಡಬಹುದಿತ್ತು.ನಾವು ಕೃಷಿಕನ ಪರ ಇರಬೇಕಲ್ಲವೇ” ಎಂದು ಹೇಳಿದರು. “ಇಲಾಖೆಯ ಕ್ರಮ ಸರಿಯಲ್ಲ” ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಹೇಳಿದರು. “ನಾವು ಯಾವಾಗಲೂ ಬಡವರ ಪರ ಕೆಲಸ ಮಾಡುವವರು. ಆ ದಿನ ನಾನು ಬೆಂಗಳೂರಿನಲ್ಲಿದ್ದೆ. ಕೃಷಿ ತೆಗೆಯಬೇಡಿ ಎಂದು ಕೂಡಾ ಅಧಿಕಾರಿಗಳಿಗೆ ಹೇಳಿದ್ದೇನೆ” ಎಂದು ಶಾಸಕರು ಹೇಳಿದರು. “ನೀವು ಹೇಳಿದ ಮೇಲೆಯಾದರೂ ಅಧಿಕಾರಿಗಳು ನಿಮ್ಮ ಮಾತಿಗೆ ಬೆಲೆ ಕೊಡಬೇಕಿತ್ತು” ಎಂದು ಕೆಡಿಪಿ ಸದಸ್ಯರುಗಳು ಹೇಳಿದರಲ್ಲದೆ, “ಇಲಾಖೆ ಎದುರು ಪ್ರತಿಭಟನೆ ಮಾಡೋಣ” ಎಂದು ಶಾಸಕರನ್ನು ಕೇಳಿಕೊಂಡರು.
“ಕೃಷಿಕನ ಪರ ನಾವಿದ್ದೇವೆ” ಎಂದು ಶಾಸಕರು ಹೇಳಿದರು. “ಆ ಜಾಗ ಅಕ್ರಮ ಸಕ್ರಮದಲ್ಲಿ ಮಂಜೂರಾದು. ಈಗ ಅರಣ್ಯ ಎಂದಾದರೆ ಅಂದು ಹೇಗೆ ಕೊಟ್ಟರು. ತಪ್ಪೆಸಗಿದವರು ಯಾರು? ಎಂದು ಜಯಪ್ರಕಾಶ್ ನೆಕ್ರೆಪ್ಪಾಡಿ ಕೇಳಿದರು. ಹೀಗೆ ಮಾತು ಮುಂದುವರಿಯುತ್ತಿದ್ದಾಗ ಸುಳ್ಯ ರೇಂಜರ್ ಮಂಜುನಾಥ್ ರವರು ” ಈ ಪ್ರಕರಣದಲ್ಲಿ ದೂರು ದಾಖಲಾಗಿ ವಿಚಾರಣೆ ನಡೆದು ನ್ಯಾಯಾಲಯ ನೀಡಿದ ಆದೇಶದಂತೆ ಅಧಿಕಾರಿಗಳಾಗಿ ನಾವು ಕೆಲಸ ಮಾಡಬೇಕು. ನಮ್ಮಲ್ಲಿ ಒಂದಷ್ಟು ಅತಿಕ್ರಮಣ ಜಾಗ ಇದೆ. ಅಲ್ಲಿ ಕೃಷಿಯೂ ಇದೆ ಎನ್ನುವುದು ನಿಜವಾದರೂ ದೂರು ದಾಖಲಾಗಿ ನ್ಯಾಯಾಲಯ ಆದೇಶ ಮಾಡಿದರೆ ನಾವೇನೂ ಮಾಡಲು ಆಗುವುದಿಲ್ಲ. ಮತ್ತು ಅರಣ್ಯ ಪ್ರದೇಶ ಒತ್ತುವರಿಯ ಕುರಿತು ಕಾನೂನು ಕೂಡಾ ಸ್ಟ್ರಿಕ್ಟ್ ಇರೋದರಿಂದ ಅದೇ ರೀತಿ ಕೆಲಸ ಮಾಡಬೇಕಾಗುತ್ತದೆ” ಎಂದು ಸಭೆಗೆ ಹೇಳಿದರು.
ಹಲವು ವಿಷಯ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದವು.










