ನಾನು ಕಣ್ಕಟ್ಟಿಗೆ ರಾಜೀನಾಮೆ ಕೊಟ್ಟದ್ದು ಎಂದು ಹೇಳಿಯೇ ಇಲ್ಲ. ಅಧ್ಯಕ್ಷರಿಂದ ನನ್ನ ತೇಜೋವಧೆ : ಅಶ್ವಥ್ ಯಲದಾಳು ಸ್ಪಷ್ಟನೆ

0

ಕೊಲ್ಲಮೊಗ್ರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ಕಟ್ಟ ಅವರು ನನ್ನ ರಾಜಿನಾಮೆ ವಿಚಾರವಾಗಿ “ನಾನು ಕಣ್ಕಟ್ಟಿಗೆ ರಾಜೀನಾಮೆ ಕೊಟ್ಟದ್ದೆಂದು ಹೇಳಿರುವುದಾಗಿ” ಸುದ್ದಿ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಆದರೆ ನಾನು ಆ ರೀತಿ ಹೇಳಿಯೇ ಇಲ್ಲ. ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಅಧ್ಯಕ್ಷರು ಹಾಗೆ ಹೇಳಿಕೆ ನೀಡಿದ್ದಾರೆ ” ಎಂದು ಕೊಲ್ಲಮೊಗ್ರು ಗ್ರಾ.ಪಂ.ಸದಸ್ಯ ಅಶ್ವಥ್ ಯಲದಾಳು ಸುದ್ದಿಗೆ ತಿಳಿಸಿದ್ದಾರೆ.

ಕೊಲ್ಲಮೊಗ್ರು ಗ್ರಾಮ ಪಂಚಾಯತಿನ ಸದಸ್ಯ ಅಶ್ವಥ್ ಅವರು ಸೆ.25 ರಂದು ಭ್ರಷ್ಟಾಚಾರ ವಿರುದ್ಧದ ಪ್ರತಿಭಟನೆ ಬೆಂಬಲಿಸಿ ರಾಜೀನಾಮೆ ನೀಡಿದ್ದರು. ಸೆ. 30 ರಂದು ಗ್ರಾಮ ಪಂಚಾಯತ್ ಸಭೆಗೆ ಬಂದಿದ್ದರಲ್ಲದೆ, ರಾಜೀನಾಮೆ ಹಿಂತೆಗೆದುಕೊಳ್ಳುವುದಾಗಿ ಅಧ್ಯಕ್ಷರೊಡನೆ ಹೇಳಿದ್ದರು. ಈ ವಿಚಾರವನ್ನು ಸುದ್ದಿಗೆ ತಿಳಿಸಿದ ಗ್ರಾ.ಪಂ.ಅಧ್ಯಕ್ಷೆ ಮೋಹಿನಿಯವರು ” ತಾನು ಕಣ್ಕಟ್ಟಿಗೆ ರಾಜೀನಾಮೆ ನೀಡಿದ್ದೆಂದು ತನ್ನೊಡನೆ ಅವರು ಹೇಳಿರುವುದಾಗಿಯೂ, ಇದನ್ನು ಪತ್ರಿಕೆಯಲ್ಲಿ ಹಾಕಬೇಕೆಂದೂ ತಿಳಿಸಿದ್ದರು. ಅದರಂತೆ ಸುದ್ದಿ ಆನ್ಲೈನ್ ನ್ಯೂಸ್ ನಲ್ಲಿ ಇದು ಪ್ರಕಟವಾಗಿತ್ತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಶ್ವಥ್ ರವರು, ” ನಾನು ಯಾವತ್ತೂ ಭ್ರಷ್ಟಾಚಾರದ ವಿರುದ್ಧವಾಗಿ ಇರುವವನು. ಈಗ ತನಿಖೆ ಆರಂಭವಾಗಿರುವ ಕಾರಣ ಹಾಗೂ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ನನ್ನ ವಾರ್ಡಿನವರು ಮತ್ತು ಮಿತ್ರರು ಒತ್ತಾಯಿಸಿದ ಕಾರಣ ನಾನು ರಾಜಿನಾಮೆ ವಾಪಸ್ಸು ಪಡೆದಿದ್ದೇನೆ. ಆದರೆ ಅಧ್ಯಕ್ಷರು ನನ್ನ ಬಗ್ಗೆ ಇಲ್ಲಸಲ್ಲದ ಹೇಳಿಕೆಯನ್ನು ಪತ್ರಿಕೆಗೆ ನೀಡಿದ್ದು, ನಾನು ಇದನ್ನು ಖಂಡಿಸುತ್ತೇನೆ. ನನ್ನಲ್ಲಿ ಅಧ್ಯಕ್ಷರು ಕೇಳಿದಾಗ ನಾನು ಭ್ರಷ್ಟಾಚಾರದ ವಿರುದ್ಧವಿದ್ದೇನೆ. ಆದ್ದರಿಂದ ರಾಜೀನಾಮೆ ನೀಡಿದ್ದಾಗಿ ಅವರಿಗೆ ಹೇಳಿದ್ದೆ. ಪತ್ರಿಕೆಗೆ ಬೇರೆಯೇ ಕೊಟ್ಟಿದ್ದಾರೆ ” ಎಂದವರು ಹೇಳಿದ್ದಾರೆ.