ಗುರುಗಮನ ಗುರುನಮನ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಗೌರವಾರ್ಪಣೆ
ಯೇನೆಕಲ್ಲು ಗ್ರಾಮದ ಗುರು ಪರಂಪರೆ ಜಗತ್ತಿಗೆ ಮಾದರಿ : ನಾಯರ್ ಕೆರೆ

ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ( ರಿ.) ಯೇನೆಕಲ್ಲು ಮತ್ತು ರೈತ ಯುವಕ ಮಂಡಲ ( ರಿ.) ಯೇನೆಕಲ್ಲು ಇದರ ವತಿಯಿಂದ ಅಂತರಾಷ್ಟ್ರೀಯ ಶಿಕ್ಷಕ ದಿನಾಚರಣೆ ಅಂಗವಾಗಿ ” ಗುರುಗಮನ ಗುರುನಮನ ” ಎಂಬ ವಿನೂತನ ಕಾರ್ಯಕ್ರಮವು ಇಂದು ಯೇನೆಕಲ್ಲಿನ ರೈತ ಯುವಕ ಮಂಡಲದ ಸಭಾಭವನದಲ್ಲಿ ನೆರವೇರಿತು.
ಯೇನೆಕಲ್ಲು ಗ್ರಾಮ ಅತೀ ಹೆಚ್ಚು ಶಿಕ್ಷಕರನ್ನು ಹೊಂದಿರುವ ಗ್ರಾಮವಾಗಿರುವ ಹಿನ್ನಲೆಯಲ್ಲಿ ಇದೇ ಪ್ರಥಮ ಬಾರಿಗೆ ಎಲ್ಲಾ ಶಿಕ್ಷಕರನ್ನು ಜೊತೆ ಸೇರಿಸುವ ವಿನೂತನ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ಅನುಷ್ಠಾನಗೊಂಡಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಪೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ” ನೂರಾರು ಸಂಖ್ಯೆಯಲ್ಲಿರುವ ಇಲ್ಲಿನ ಶಿಕ್ಷಕರು ಲಕ್ಷಾಂತರ ಮಂದಿಗೆ ಮೌಲ್ಯಾಧಾರಿತ ಶಿಕ್ಷಣ ಧಾರೆ ಎರೆದವರು. ಅಂಥವರನ್ನು ಗೌರವಿಸುವ ಅವಕಾಶ ಒಂದು ಮಹಾಯೋಗ. ಪ್ರಾಮಾಣಿಕವಾಗಿ ಕರ್ತವ್ಯ ಮಾಡಿದರೆ ಸಮಾಜ ಅವರನ್ನು ಗುರುತಿಸುತ್ತದೆ ” ಎಂದರು.

ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆಯವರು ದಿಕ್ಸೂಚಿ ಭಾಷಣ ಮಾಡಿದರು. ” ಪ್ರತಿ ಮನೆಯೂ ಒಂದು ಶಾಲೆಯಂತಿರುವ ಗ್ರಾಮವಿದು. ಯೇನೆಕಲ್ಲು ಗ್ರಾಮದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಶಿಕ್ಷಕರು ಗುರು ಪರಂಪರೆ ಮೂಲಕ ಜಗತ್ತಿಗೇ ಮಾದರಿಯಾಗಿದ್ದಾರೆ. ಆದರ್ಶವಾಗಿ ಮತ್ತು ವೃತ್ತಿಯಾಗಿ ದೊಡ್ಡ ಕೊಡುಗೆ ಇಲ್ಲಿನ ಶಿಕ್ಷಕರಿಂದ ಸಾಧ್ಯವಾಗಿದೆ. ಅಂಥ ಶಿಕ್ಷಕರನ್ನು ಒಟ್ಟು ಸೇರಿಸಿ ಗೌರವಿಸುವ ಮೂಲಕ ನಿಜವಾದ ಅರ್ಥದಲ್ಲಿ ಅಂತರ್ ರಾಷ್ಟ್ರೀಯ ಶಿಕ್ಷಕ ದಿನಾಚರಣೆ ಆಚರಿಸಲಾಗಿದೆ . ಈ ಗ್ರಾಮವೂ ಅಭಿಮಾನಪಡುವಂತಾಗಿದೆ ಎಂದವರು ಹೇಳಿದರು.















ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಅಧ್ಯಕ್ಷತೆ ವಹಿಸಿದ್ದರು. ” ಶಿಕ್ಷಕರಿಂದಾಗಿ ನಮ್ಮ ಗ್ರಾಮಕ್ಕೆ ಶ್ರೇಷ್ಠತೆ ದೊರೆತಿದೆ. ಮುಂದೆ ನಮ್ಮ ಟ್ರಸ್ಟ್ ವತಿಯಿಂದ ತರಬೇತಿ ಸಂಘಟಿಸಿ ನಾಗರಿಕ ಸೇವೆಯಂತಹ ದೊಡ್ಡ ಸ್ಥಾನಕ್ಕೆ ಹೋಗುವವರನ್ನೂ ತಯಾರು ಮಾಡುವಂತಹ ಕನಸು ಹೊಂದಿದ್ದೇವೆ ಎಂದರು.
ಯೇನೆಕಲ್ಲು ಗ್ರಾಮದವರಾಗಿದ್ದು, ಬೇರೆ ಬೇರೆ ಕಡೆ ಶಿಕ್ಷಕ ವೃತ್ತಿಯಲ್ಲಿರುವ ಮತ್ತು ನಿವೃತ್ತರಾದ ನೂರಾರು ಶಿಕ್ಷಕರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ತುಕಾರಾಮ್ ಏನೆಕಲ್ಲು, ಡಾ. ಶಿವಕುಮಾರ್ ಹೊಸೊಳಿಕೆ, ಶ್ರೀಮತಿ ಜಯಲಕ್ಷ್ಮಿ ಅಡ್ಪಂಗಾಯ ಮಾತನಾಡಿದರು.
ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಸಂಚಾಲಕ ಗಣೇಶ್ ಪ್ರಸಾದ್ ಅನಿಸಿಕೆ ವ್ಯಕ್ತಪಡಿಸಿದರು.
ಯುವಕ ಮಂಡಲ ಅಧ್ಯಕ್ಷ ಜೀವಿತ್ ಪರಮಲೆ ವೇದಿಕೆಯಲ್ಲಿದ್ದರು. ಟ್ರಸ್ಟಿನ ಉಪಾಧ್ಯಕ್ಷ ಶಿವರಾಮ ಚಿದ್ಗಲ್ ಸ್ವಾಗತಿಸಿ ಪ್ರಸ್ತಾವನೆಗೈದರು. ಖಜಾಂಜಿ ನಾಗರಾಜ್ ಪರಮಲೆ ವಂದಿಸಿದರು. ನಿರ್ದೇಶಕ ವಿಜಯ್ ಕುಮಾರ್ ಅಮೈ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳ ಶಿಕ್ಷಣದ ಖರ್ಚನ್ನು ಟ್ರಸ್ಟ್ ವತಿಯಿಂದ ಭರಿಸುವುದಾಗಿ ಘೋಷಿಸಲಾಯಿತು.










