ಪ್ರಸಿದ್ಧ ನಾಟಿವೈದ್ಯ, ಧಾರ್ಮಿಕ ಶ್ರದ್ಧಾಳು, ಕೊಡುಗೈ ದಾನಿ, ಸಂಘಟಕ ಹಿರಿಯ ಚೇತನ ಕೃಷಿಕ ಎನ್.ಜನಾರ್ಧನ ಗೌಡರ ನೆನಪು…

0

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ಎಂಬಲ್ಲಿ ನಡುಮುಟ್ಲು ಜನಾರ್ಧನ ಗೌಡರವರ ಜನ್ಮಭೂಮಿ.
ಸುಳ್ಯ ಕಂಡ ಪ್ರಮುಖ ಹತ್ತು ಕುಟುಂಬ ಹದ್ನೆಂಟು ಗೋತ್ರಕ್ಕೆ ಸಂಬಂಧಿಸಿದ ನಾಯರ್ ಗೋತ್ರದ (ಬರಿ) ಪಾರಂಪರಿಕ, ಐತಿಹಾಸಿಕ ಹಿನ್ನಲೆಯುಳ್ಳ ನಡುಮುಟ್ಲು ಮನೆತನದ ಹಿರಿಯರಾಗಿದ್ದವರು.
ಇವರು ನಡುಮುಟ್ಲು ದಿ. ದೇವಪ್ಪ ಗೌಡ (ಪ್ರಸಿದ್ಧ ನಾಟಿವೈದ್ಯರು) ಮತ್ತು ದಿ. ನೀಲಮ್ಮ ದಂಪತಿಯವರ ಐವರು ಮಕ್ಕಳಲ್ಲಿ ಜೇಷ್ಠ ಪುತ್ರನಾಗಿ ೧೬-೧೨-೧೯೪೨ರಲ್ಲಿ ಜನಿಸಿದವರು.


ಹುಟ್ಟು ಸಿರಿವಂತರು, ಹತ್ತಾರು ಎಕ್ರೆಯ ಕೃಷಿ ಹಿನ್ನಲೆಯ ಜಮಿನ್ದಾರರು. ಮನೆಯಲ್ಲಿ ಐಷಾರಾಮಿ ಬದುಕಿನ ದಿನಗಳಲ್ಲಿ ಕಳೆದವರು.
ಅರುವತ್ತರ ದಶಕದಲ್ಲಿಯೇ ಪುತ್ತೂರಿನ ಪ್ರತಿಷ್ಠಿತ ಫಿಲೋಮಿನಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದವರು. ಯಾವುದೇ ಉದ್ಯೋಗಕ್ಕೆ ಹೋಗದೆ ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಂಡವರು. ತನ್ನ ಹಿರಿಯರು ಹಾಕಿಕೊಟ್ಟ ಅಡಿಕೆ, ತೆಂಗು, ರಬ್ಬರ್, ಬಾಳೆ, ಕಾಳುಮೆಣಸು ಮುಂತಾದ ಕೃಷಿಯನ್ನು ಮುಂದುವರಿಸಿಕೊಂಡು ಊರಿನಲ್ಲಿ ಕೃಷಿಯ ಬಗ್ಗೆ ಮೌನವಾಗಿ ಕ್ರಾಂತಿ ಮಾಡುತ್ತಾ ಮಾದರಿ ಕೃಷಿಕರೆನಿಸಿಕೊಂಡವರು.
ಜೊತೆ ಜೊತೆಯಾಗಿ ಸಮಾಜ ಕಾರ್ಯ, ಧಾರ್ಮಿಕ ಕಾರ್ಯಕ್ರಮದ ಜೊತೆಗೆ ತನ್ನ ಹಿರಿಯರ ಆಶೀರ್ವಾದದ ಫಲದಿಂದಾಗಿ, ತಂದೆ ದಿ. ದೇವಪ್ಪ ಗೌಡ ನೀಡುತ್ತಾ ಬಂದಿರುವ ನಾಟಿ ವೈದ್ಯ ಪದ್ಧತಿಯನ್ನು ಕಲಿತು ಕರಗತ ಮಾಡಿ ಮುಂದುವರೆಸಿಕೊಂಡು ಬಂದವರು.


ಪಾಷಾಣಮೂರ್ತಿ ಅಮ್ಮನವರ ಶ್ರೀರಕ್ಷೆಯಿಂದಾಗಿ ಅದೆಷ್ಟೋ ರೋಗಿಗಳ ಪಾಲಿನ ಸಂಜೀವಿನಿಯಾಗಿ, ಕೆಂಪು, ಸರ್ಪಸುತ್ತು, ಬಿಳಿಸೆರಗು ಮುಂತಾದ ಖಾಯಿಲೆಗಳಿಗೆ ಔಷಧಿಯನ್ನು ಕೊಟ್ಟಿರುವ ದಾರ್ಶನಿಕರೆಂದರೂ ತಪ್ಪಲ್ಲ. ಶ್ರೀಮಂತಿಕೆಯಿಂದ ಕೂಡಿದ ಬದುಕು ಇವರದ್ದಾಗಿದ್ರೂ ಬಡವರು, ಜಾತಿ, ಮತ, ಪಂಥ ಬೇಧಭಾವವಿಲ್ಲದೆ ಸಾವಿರಾರು ಮಂದಿಗೆ ಮದ್ದು ಕೊಟ್ಟು ಗುಣಪಡಿಸಿದ ಹಳ್ಳಿವೈದ್ಯ.


ತಾಲೂಕು, ಜಿಲ್ಲೆ, ರಾಜ್ಯ, ಹೊರರಾಜ್ಯಗಳಿಂದಲೂ ರೋಗಿಗಳು ನಿತ್ಯ ಬರುವುದನ್ನು ನಾವು ಕಂಡಿದ್ದೇವೆ. ಮಂಗಳೂರು, ಮಣಿಪಾಲ ಮುಂತಾದ ಆಸ್ಪತ್ರೆಗಳಿಗೆ ಸವಾಲಾಗಿದ್ದ ಮತ್ತು ವಾಸಿಯಾಗದ ಸಮಸ್ಯೆಗಳ ಖಾಯಿಲೆಗಳಿಗೆ ಮದ್ದನ್ನು ನೀಡಿರುವ ಸಾಕಷ್ಟು ನಿದರ್ಶನಗಳಿವೆ. ಇವರನ್ನು ಸೂಂತೋಡು ಅಣ್ಣನೆಂದೇ ಜನ ಇಂದಿಗೂ ಸಂಭೋಧಿಸುತ್ತಿದ್ದರು.

ಇವರು ಮತ್ತು ಇವರ ಕುಟುಂಬ


ಜನಾರ್ಧನ ಗೌಡರ ಶ್ರಮದ ಹಿಂದೆ ಅವರ ಪತ್ನಿ ವಸಂತಿಯವರ ಪ್ರೋತ್ಸಾಹ, ಜವಾಬ್ದಾರಿಯೆಲ್ಲವನ್ನು ನಿಭಾಯಿಸಿಕೊಂಡು ಸೈ ಎನಿಸಿಕೊಂಡವರು. ಅರಂತೋಡು ಗ್ರಾಮದ ಪ್ರತಿಷ್ಠಿತ ದೇರಾಜೆ ಪಟೇಲ್ ಮನೆತನದವರು. ಹಿರಿಯ ಪುತ್ರ ಸಾಪ್ಟ್‌ವೇರ್ ಇಂಜಿನಿಯರ್ ಸುನಿಲ್‌ಕುಮಾರ್ ಪತ್ನಿ ಮಕ್ಕಳೊಂದಿಗೆ ಅಮೇರಿಕಾದಲ್ಲಿ ವಾಸವಾಗಿದ್ದಾರೆ. ದ್ವಿತೀಯ ಪುತ್ರ ಸಂದೇಶ್‌ಕುಮಾರ್ ಪತ್ನಿ, ಮಕ್ಕಳೊಂದಿಗೆ ಕೃಷಿ ಮತ್ತು ನಾಟಿವೈದ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಕಿರಿಯ ಪುತ್ರ ಸಂತೋಷ್‌ಕುಮಾರ್ ಪತ್ನಿ ಮಕ್ಕಳೊಂದಿಗೆ ಬೆಂಗಳೂರಿನ ಕಂಪೆನಿಯಲ್ಲಿ ಹಿರಿಯ ಉದ್ಯೋಗಿಯಾಗಿದ್ದುಕೊಂಡು, ತಂದೆ ಸೇವಾ ಕೈಂಕರ್ಯಗಳು ಮತ್ತು ಕುಟುಂಬದ ಧರ್ಮದೈವಸ್ಥಾನದ ನಾಯಕನಾಗಿ, ಮಾರ್ಗದರ್ಶಕರಾಗಿ, ಜನಪರ ಕೆಲಸಗಳನ್ನು ಮಾಡುವ ಸಮಾಜ ಸೇವಕ.
ಪುತ್ರಿ ಡಾ. ಸೌಮ್ಯ ಶ್ಯಾಮ್‌ಪ್ರಸಾದ್ ಅಡ್ಡಂತ್ತಡ್ಕದ ನಿವೃತ್ತ ವಾಯುಸೇನಾಧಿಕಾರಿಯಾಗಿರುವ ದೇರಣ್ಣ ಗೌಡರ ಸೊಸೆ. ಇವರು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀನಿಯರ್ ಉಪನ್ಯಾಸಕಿಯಾಗಿದ್ದವರು. ಪ್ರಸ್ತುತ ಇವರು ಪತಿಯೊಂದಿಗೆ ಸೇರಿಕೊಂಡು ಸ್ವಂತ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರು ಪತಿ ಮತ್ತು ಮಕ್ಕಳೊಂದಿಗೆ ಅಡ್ಡಂತ್ತಡ್ಕದಲ್ಲಿ ನೆಲೆಸಿದ್ದಾರೆ.


ಇನ್ನೋರ್ವ ಪುತ್ರಿ ಶ್ರೀಮತಿ ಸ್ಪರ್ಶ ಶಂಕರ್ ಪತಿ ಮತ್ತು ತನ್ನ ಮಕ್ಕಳೊಂದಿಗೆ ಸಕಲೇಶಪುರದಲ್ಲಿ ಗೃಹಿಣಿಯಾಗಿ ನೆಲೆಸಿದ್ದಾರೆ.
ಸರಿಸುಮಾರು ಇಪ್ಪತ್ತೆಂಟು ವರ್ಷಗಳ ಹಿಂದೆ ಸುಳ್ಯ ಕಸಬಾ ಗ್ರಾಮದ ಕಾಯರ್ತೋಡಿ ಬೈಲಿನಲ್ಲಿರುವ ನಡುಮುಟ್ಲು ಮೂಲ ಜಾಗದಲ್ಲಿರುವ, ಇವರ ಕುಟುಂಬಕ್ಕೆ ಸಂಬಂಧಿಸಿರುವ ದೈವಸ್ಥಾನದ ಅಭಿವೃದ್ಧಿಯೆಡೆಗೆ ಈ ಜಾಗ ಧರ್ಮ ದೈವಸ್ಥಾನದ ಪೂರ್ತಿ ಜಾಗ ನೆಲಸಮವಾಗಿತ್ತು. ಇದನ್ನು ಮನಗಂಡ ಇವರು ಶಿಥಿಲಾವಸ್ಥೆಯಲ್ಲಿದ್ದಾಗ ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಿದ ಮಹಾನ್ ಧಾರ್ಮಿಕ ದಾರ್ಶನಿಕರಿವರು.
ಪಾಳು ಬಿದ್ದ ಜಾಗಕ್ಕೆ ಕಾಯಕಲ್ಪ ನೀಡುವ ಸಲುವಾಗಿ ಕುಟುಂಬಿಕರನ್ನು ಒಟ್ಟುಗೂಡಿಸಿಕೊಂಡು, ಅಷ್ಟಂಗಲ ಪ್ರಶ್ನೆಯ ಚಿಂತನೆಯ ಮೂಲಕ ಕುಟುಂಬ ಜೀಣೋದ್ಧಾರದ ಅಧ್ಯಕ್ಷನಾಗಿ ಹೊಸ ಭಾಷ್ಯ ಬರೆದವರು.


೧೯೯೯ರಲ್ಲಿ ನಡುಮುಟ್ಲು ಧರ್ಮದೈವಸ್ಥಾನದ ಬ್ರಹ್ಮಕಲಶೋತ್ಸವವು ಕುಟುಂಬಿಕರ ಸಂಪೂರ್ಣ ಸಹಕಾರದೊಂದಿದೆ, ಊರಿನವರ ಬೆಂಬಲದೊಂದಿಗೆ ಜನಾರ್ಧನ ಗೌಡರ ನಾಯಕತ್ವದಲ್ಲಿ ಒಂಬತ್ತು ಧರ್ಮ ನಡಾವಳಿಗಳನ್ನು ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇವರ ಮುಂದಾಳತ್ವದಲ್ಲಿ ನಾಗನ ಕಟ್ಟೆ, ಗುಳಿಗನ ಕಟ್ಟೆ, ಚಾವಡಿಯ ಸುತ್ತ ಅಭಿವೃದ್ಧಿ, ರಸ್ತೆ ಕಾಮಗಾರಿ ಅಲ್ಲದೆ ಐನ್ ಮನೆಯ ಅಭಿವೃದ್ಧಿಗೆ ಚಾಲನೆ ನೀಡಿರುವುದು ಇವರ ಮುಂದಾಲೋಚನೆಯ ಚಿಂತನೆಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ ವಯೋ ಸಹಜದಿಂದಾಗಿ ತನ್ನ ಜವಾಬ್ದಾರಿಯನ್ನು ಕಿರಿಯ ಪುತ್ರ ಸಂತೋಷ್‌ಕುಮಾರ್ ರವರಿಗೆ ವಹಿಸಿಕೊಟ್ಟಿರುತ್ತಾರೆ. ಇವರ ಪ್ರೇರಣೆಯಿಂದಾಗಿ ಕುಟುಂಬಿಕರು ಸೇರಿಕೊಂಡು ಐನ್‌ಮನೆಯನ್ನು ಶೀಘ್ರ ಮಾಡಿ ಮುಗಿಸಿ ಅವರ ಆಸೆಯನ್ನು ಈಡೆರುಸುವಂತಾಗಲಿ.


ಜನಾರ್ಧನ ಗೌಡರ ಇಚ್ಛಾಶಕ್ತಿಯಿಂದಾಗಿ ಇವರನ್ನು ಇವತ್ತಿಗೂ ಕಾಯರ್ಯೋಡಿ ಬೈಲಿನ ನಾಗರೀಕರು ನಡುಮುಟ್ಲು “ದೊಡ್ಡ” ಗೌಡರೆಂದೇ ಸಂಭೋದಿಸುತ್ತಾರೆ.
ಮೂಲ ಸ್ಥಾನವಿರುವ ಕಾಯರ್ತೋಡಿ ಬೈಲಿನಲ್ಲಿ ನಡುಮುಟ್ಲು ಮನೆತನದವರ ಸಂಖ್ಯೆತಾರ ಕಮ್ಮಿ ಮೂರು ಮನೆಗಳು ಮಾತ್ರ. ಉಳಿದವುಗಳು ಗ್ರಾಮದಿಂದ ಹೊರತಾಗಿವೆ. ಹೀಗಿದ್ದು ಕೂಡ ಅವರನ್ನು ಪ್ರೀತಿಸುವ ಅಭಿಮಾನಿಗಳ ದೊಡ್ಡ ಬಳಗವೇ ಇಡೀ ಕಾಯರ್ತೋಡಿ ಮತ್ತು ಉಬರಡ್ಕ ಗ್ರಾಮದಲ್ಲಿವೆ. ಆದಾಗ್ಯೂ ಇಂತಹ ಸಂದರ್ಭದಲ್ಲಿ ಇಪ್ಪತ್ತೊಂಬತ್ತು (೨೯ವರ್ಷಗಳ) ವರ್ಷಗಳ ಹಿಂದೆ ಇವರ ಮೂಲ ದೈವಸ್ಥಾನಕ್ಕೆ ಕಾಲು ದಾರಿಯೇ ಆಗಿತ್ತು.
ನಮ್ಮ ಮನೆಯ ಅಂಗಳಲ್ಲಿ ಪ್ರಪ್ರಥಮವಾಗಿ ಅವರ ಬಳಿಯಿರುವ, ಜೀಪು, ಕಾರು, ಬೈಕುಗಳಲ್ಲಿ ಒಂದು ಅಂಗಳದಲ್ಲಿ ಇಟ್ಟು, ನಂತರ ಅವರ ಕುಟುಂಬಿಕರ ಜೊತೆಯಾಗಿ ಕಾಲು ದಾರಿಯಲ್ಲಿ ಹೋಗಬೇಕಿತ್ತು. ನನ್ನ ತೀರ್ಥರೂಪರಾದ ದಿ. ಬಚ್ಯಪ್ಪ ಗೌಡರೊಡನೆ ಅನ್ಯೋನ್ಯತೆಯಿದ್ದವರು. ಜನಾರ್ಧನ ಗೌಡರು ಮತ್ತು ನನ್ನ ತಂದೆಯವರು ಸಮಕಾಲಿನ ವಯಸ್ಸಿನವರಾದ ಕಾರಣ ಅವರಿಬ್ಬರ ಮಾತಿನ ಝಳಕು, ಅಭಿವೃದ್ಧಿಯ ಬಗ್ಗೆ ವಿಷಯ ಹಂಚಿಕೊಳ್ಳುತ್ತ, ಆಗುಹೋಗುಗಳ, ಸುಮಧುರ ಬಾಂದವ್ಯವನ್ನು ಎಲ್ಲರೊಡನೆ ಹಂಚುವ ಗುಣ, ಬೆರೆಯುವ ಕ್ಷಣ ಇವತ್ತಿಗೂ ಎಲ್ಲರಿಗೂ ಮಾದರಿಯಾಗಿದೆ.

ಸಮಾಜಕ್ಕೆ ಇವರ ಕೊಡುಗೆ

ಇವರ ಪೂರ್ವಿಕರು ಇವತ್ತಿನ ವಿಶಾಲ ಕಾಯರ್ತೋಡಿ ಬೈಲ್, ಒಂದು ಕಾಲದಲ್ಲಿ ನಡುಮುಟ್ಲು ಎಂಬುದಾಗಿತ್ತು. ಇವತ್ತಿಗೂ ಕೂಡ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಇವರ ವಂಶಸ್ಥರಿಗೂ ಆಡಳಿತದ ಹಕ್ಕು ಇದ್ದೆ ಇದೆ. ಬೈಲಿನಲ್ಲಿ ನಡೆಯುವ ಜಾಗ ಕೂಡ “ನಡುಮುಟ್ಲು ನಡುಮಂಟಮೆ”ಯಿಂದಾಗಿ ಗುರುತಿಸಿಕೊಂಡಿದೆ.
ಇಂದು ಆಡಳಿತ ಬದಲಾವಣೆಯಿಂದಾಗಿ ಬೇರೆಬೇರೆಯಾಗಿ ದೇವಸ್ಥಾನ ಮತ್ತು ಜಾಲಾಟದ ಜವಾಬ್ದಾರಿಯು ಕಳಚಿದೆ. ಏಕ ವ್ಯವಸ್ಥೆ ಬಿಟ್ಟು ಹೋಗಿದೆ.
ಇಂಥ ಉದ್ದೇಶಗಳನ್ನೇ ಇಟ್ಟುಕೊಂಡು ಸರಿ ಸುಮಾರು ೧೬(ಹದಿನಾರು) ವರ್ಷಗಳ ಹಿಂದೆ ಕಾಯರ್ತೋಡಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷನಾಗಿದ್ದುಕೊಂಡು, ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಯಾಗುವಲ್ಲಿ ಶ್ರಮಿಸಿದವರು ಎನ್. ಜನಾರ್ಧನ ಗೌಡರು ಅಲ್ಲದೆ ದೇವಸ್ಥಾನಗಳಿಗೆ ಗರಿಷ್ಟ ಸಹಾಯಧನ ಕೊಟ್ಟಿದಲ್ಲದೆ. ಧಾರ್ಮಿಕ ಭಕ್ತರನ್ನು ಕಾಯರ್ತೋಡಿ ದೇವಸ್ಥಾನವನ್ನು ಸುಳ್ಯ ಕಸಬಾದಲ್ಲಿ ಮಾದರಿ ದೇವಸ್ಥಾನವಾಗಿ ಅಭಿವೃದ್ಧಿಪಡಿಸಿಕೊಂಡು ರಾತ್ರಿ ಹಗಲಿರುಳೆನ್ನದೆ ಭಕ್ತರ ಜೊತೆಗೆ ಸಮಿತಿಯವರು ಸೇರಿಸಿಕೊಂಡು ಬ್ರಹ್ಮಕಲಶೋತ್ಸವವನ್ನು ನಡೆಸಿಕೊಟ್ಟಿರುವ ಮಹಾನ್ ಧಾರ್ಮಿಕ ಭಕ್ತರೆಂದೆನಿಸಿಕೊಂಡವರು.


ಊರಿನ ಹತ್ತು ಹಲವು ಯುವಕ ಯುವತಿ ಮಂಡಲಗಳಿಗೂ, ಊರ ಪರವೂರಿನ ದೇವಸ್ಥಾನ, ದೈವಸ್ಥಾನ, ಗೌಡ ಸಮಾಜಕ್ಕೂ, ಅಲ್ಲದೆ ಇತರ ಎಲ್ಲಾ ವರ್ಗಕ್ಕೂ ತನ್ನಿಂದಾದ ಗರಿಷ್ಟ ಸಹಾಯಧನವನ್ನು ನೀಡಿ ಕೊಡುಗೈ ದಾನಿಯಾಗಿ ಊರಿನವರಿಂದ ಪುರಸ್ಕರಿಸಲ್ಪಟ್ಟ ವ್ಯಕ್ತಿ.
ಇಂಥ ಜನಾನುರಾಗಿ ಪರೋಪಕಾರಿಯೆನಿಸಿದ ಹಾಸ್ಯವ್ಯಕ್ತಿತ್ವದ ಎಲ್ಲರೊಡನೆ ಬೆರೆಯುವ ಸದಾ ಹಸನ್ಮುಖಿ ವ್ಯಕ್ತಿತ್ವದ, ಸಜಾನುಭಾವದ ನೀಲಕಾಯದ ಶ್ರೀಯುತ ನಡುಮುಟ್ಲುಜನಾರ್ಧನ ಗೌಡರವರು ಇತ್ತೀಚೆಗೆ ತನ್ನ ವಯೋಸಹಜ ಖಾಯಿಲೆಯಿಂದಾಗಿ ೮೪ನೇ ಇಳಿವಯಸ್ಸಿನಲ್ಲಿ ತೀರಿಸಿಕೊಂಡರು.
ಜೀವನದಲ್ಲಿ ಆದರ್ಶ ಗುಣಗಳನ್ನು ಸಮಾಜಕ್ಕೆ ಬಿಟ್ಟು ಹೋಗಿರುವ ಉದಾತ್ತ ಚಿಂತಕನ ನೆನೆದು “ಭಾವಪೂರ್ಣ ಶ್ರದ್ಧಾಂಜಲಿ” ಓಂ ಶಾಂತಿ.

ಬರಹ : ದೇವರಾಜ್ ಕುದ್ಪಾಜೆ