ಪಿಕಪ್ ಚಾಲಕ ಮತ್ತು ಸುಳ್ಯದ ಇಬ್ಬರು ಯುವಕರ ಮೇಲೆ ಪೋಲೀಸ್ ಕೇಸು ದಾಖಲು















ಕಾಲೇಜಿನ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡುತ್ತಿದ್ದ. ಪಿಕಪ್ ಚಾಲಕನ ಮೇಲೆ ಹಾಗೂ ಅದನ್ನು ಪ್ರಶ್ನಿಸಲು ಬಂದ ಆಕೆಯ ಪೋಷಕರಿಗೆ, ಚಾಲಕನ ಪರವಾಗಿ ಬಂದು ಬೆದರಿಕೆ ಒಡ್ಡಿದರೆಂಬ ಆರೋಪದ ಮೇರೆಗೆ ನಿಕೇಶ್ ಸುಳ್ಯ ಮತ್ತು ರಕ್ಷಿತ್ ಎಂಬ ಯುವಕರ ಮೇಲೆ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪೆರ್ನಾಜೆ ಬಳಿಯ ಕಾಲೇಜ್ ವಿದ್ಯಾರ್ಥಿನಿಯೊಬ್ಬಳು ಪುತ್ತೂರಿನ ಕಾಲೇಜಿಗೆ ಹೋಗಲು ಪೆರ್ನಾಜೆ ಬಸ್ ನಿಲ್ದಾಣದಲ್ಲಿ ನಿಂತಿರುವಾಗ ತ್ರಿನೇತ್ರ ಎಂಬ ಹೆಸರಿನ ಪಿಕಪ್ ಚಲಾಯಿಸಿಕೊಂಡು ಬರುವ ಚಾಲಕ ಪ್ರತಿದಿನ ಅವಳಿಗೆ ಹಾಯ್ ಹೇಳುತ್ತಾ, ಫೋನ್ ನಂಬರ್ ಕೇಳುತ್ತಾ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ.
ಇದನ್ನು ಆಕೆ ತನ್ನ ಮನೆಯಲ್ಲಿ ಹೇಳಿದಾಗ ದಿನಾಂಕ 13.10.2025 ರಂದು ಮನೆಯವರು ವಿದ್ಯಾರ್ಥಿನಿ ಬಸ್ ನಿಲ್ದಾಣದಲ್ಲಿ ಬಸ್ ಕಾಯುವ ಹೊತ್ತಿಗೆ ಬಂದು ಬಸ್ ನಿಲ್ದಾಣದಲ್ಲಿ ಪಿಕಪ್ ಬರುವುದನ್ನು ಕಾದು ನಿಂತರೆನ್ನಲಾಗಿದೆ. ಬೆಳಿಗ್ಗೆ 8.45 ರ ಹೊತ್ತಿಗೆ ಆ ಪಿಕಪ್ ಬಂತೆಂದೂ, ಚಾಲಕ ವಿದ್ಯಾರ್ಥಿನಿಗೆ ಹಾಯ್ ಹೇಳುತ್ತಾ ಮುಂದೆ ಹೋದನೆಂದೂ ಇದನ್ನು ಕಂಡ ವಿದ್ಯಾರ್ಥಿನಿಯ ಮನೆಯವರು ಬೇರೆ ವಾಹನದಲ್ಲಿ ಪಿಕಪ್ ವಾಹನವನ್ನು ಹಿಂಬಾಲಿಸಿದರೆಂದೂ ತಿಳಿದುಬಂದಿದೆ. ಕನಕಮಜಲು ದಾಟಿ ಸುಣ್ಣಮೂಲೆ ಎಂಬಲ್ಲಿಗೆ ತಲಪುವಾಗ ಅವರಿಗೆ ಪಿಕಪ್ ವಾಹನ ಸಿಕ್ಕಿತೆನ್ನಲಾಗಿದ್ದು, ಅವರು ವಾಹನ ಅಡ್ಡಗಟ್ಟಿ ಚಾಲಕನನ್ನು ಪ್ರಶ್ನಿಸಿದಾಗ ಆತ ಯಾರಿಗೋ ಫೊನ್ ಮಾಡಿದನೆಂದೂ, ಆಗ ಸುಳ್ಯದಿಂದ ನಿಕೇಶ್ ಮತ್ತು ರಕ್ಷಿತ್ ಎಂಬವರು ಬಂದು ವಿದ್ಯಾರ್ಥಿನಿಯ ಪೋಷಕರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿದ್ದಾರೆಂದೂ ವಿದ್ಯಾರ್ಥಿನಿ ಪೋಷಕರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೋಲೀಸರು ಕೇಸು ದಾಖಲಿಸಿದ್ದಾರೆ.










