ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ ಬಿಡುಗಡೆ

0

ಸುದ್ದಿಯಿಂದ ನಿರಂತರ ಜಾಗೃತಿ ಕಾರ್ಯ : ಗಿರೀಶ್ ಭಾರದ್ವಾಜ್ ಶ್ಲಾಘನೆ

“ಸುದ್ದಿ ಬಿಡುಗಡೆ ಸಮಾಜದಲ್ಲಿ ನಿರಂತರ ಜಾಗೃತಿ ಮಾಡುವ ಮಾಧ್ಯಮ. ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ ಇದಕ್ಕೆ ಇನ್ನೊಂದು ಗರಿ” ಎಂದು ಪದ್ಮಶ್ರೀ ಪುರಸ್ಕೃತ, ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಾಜ್ ಹೇಳಿದ್ದಾರೆ.

ಸುದ್ದಿ ಬಿಡುಗಡೆ ಹೊರತಂದಿರುವ ಈ ವರ್ಷದ ವರ್ಣಮಯ ದೀಪಾವಳಿ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ರಾಜಣ್ಣ ಮಾತನಾಡಿ ಸುದ್ದಿ ಬಿಡುಗಡೆಯ ಈ ವಿಶೇಷಾಂಕ ಅತ್ಯಂತ ವಿಶಿಷ್ಟವಾಗಿ ಮೂಡಿ ಬಂದಿದೆ. ಎಲ್ಲರೊಂದಿಗೂ ಸಮನ್ವಯತೆ ಸಾಧಿಸಿದ ವಿಶೇಷ ಕೃತಿಯಾಗಿದೆ ಎಂದರು.

ಮುಖ್ಯ ಅತಿಥಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ ಅವರು ಮಾತನಾಡಿ, ದೀಪಾವಳಿ ವಿಶೇಷಾಂಕ ಹೊರತಂದಿರುವುದು ಖುಷಿಯ ಸಂಗತಿ. ಸುದ್ದಿಯ ಎಲ್ಲ ಕಾರ್ಯಗಳಿಗೆ ವರ್ತಕರ ಸಂಘದ ಪೂರ್ಣ ಬೆಂಬಲವಿರುವುದಾಗಿ ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಸುಳ್ಯ ತಾಲೂಕು ಯುವ ಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಮಾತನಾಡಿ, ಈ ವಿಶೇಷಾಂಕವು ಅನೇಕರ ಬಾಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ತರುವ ಅದ್ಭುತ ಜ್ಞಾನ ಭಂಡಾರದ ಸಂಚಿಕೆಯಾಗಿದೆ. ಸುದ್ದಿಯು ಹಳ್ಳಿಯ ಸಂಗತಿಗಳನ್ನು ದಿಲ್ಲಿಗೆ ಮಾತ್ರವಲ್ಲ ವಿದೇಶಕ್ಕೂ ಪರಿಚಯಿಸಿದ ಪತ್ರಿಕೆ. ಡಿಜಿಟಲ್ ಮಾಧ್ಯಮದ ಈ ಕಾಲದಲ್ಲೂ ಸೋಮವಾರ ಬಂದರೆ ಸುದ್ದಿ ಪತ್ರಿಕೆಯನ್ನು ಓದಲು ಕಾಯುತ್ತಿರುತ್ತಾರೆ ಎಂದು ಹೇಳಿದರು.

ರಂಗ ಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಮಾತನಾಡಿ, ಅಕ್ಷರದ ಒಡನಾಟ ಎಲ್ಲರನ್ನೂ ಒಟ್ಟುಗೂಡಿಸುತ್ತದೆ. ನಾನು ಕೂಡ ಸುದ್ದಿಯ ಅಕ್ಷರದ ಒಡನಾಟದಿಂದಲೇ ಬೆಳೆದು ಬಂದವ ಎಂದು ಹೇಳಿದರು.

ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ವಿಷಯ ವೈವಿಧ್ಯ, ಗುಣ ಮಟ್ಟ ಹೀಗೆ ಎಲ್ಲಾ ರೀತಿಯಿಂದಲೂ ಸುದ್ದಿ ದೀಪಾವಳಿ ವಿಶೇಷಾಂಕ ರಾಜ್ಯ ಮಟ್ಟದಲ್ಲಿ ವಿಶಿಷ್ಟತೆ ಮೆರೆದಿದೆ. ಸುದ್ದಿ ಪತ್ರಿಕೆಯೂ ಅದೇ ರೀತಿ. ನಮ್ಮ ಊರಿನ ಸಂಗತಿಗಳನ್ನೇ ಹೆಮ್ಮೆ ಎಂದು ಭಾವಿಸಿ ಜಗತ್ತಿಗೆ ಪರಿಚಯಿಸುತ್ತಿರುವುದು ಇದಕ್ಕೆ ಕಾರಣ ಎಂದರು.

ಸುದ್ದಿ ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ, ವಿಶೇಷಾಂಕ ಸಂಯೋಜಕ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಶ್ರೀಧರ್ ಕಜೆಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಬಳಗದ ಚೈತ್ರ ವಿನಯ್‌ ಕೇರ್ಪಳ ಪ್ರಾರ್ಥಿಸಿದರು. ಸುದ್ದಿ ಬಿಡುಗಡೆ ಕಛೇರಿ ವ್ಯವಸ್ಥಾಪಕ ಯಶ್ವಿತ್‌ ಕಾಳಂಮನೆ ಸ್ವಾಗತಿಸಿದರು.ದೀಪಾವಳಿ ವಿಶೇಷಾಂಕದ ಕಾರ್ಯನಿರ್ವಾಹಕ ಸಂಪಾದಕ ದುರ್ಗಾಕುಮಾರ್ ನಾಯರ್ ಕೆರೆಯವರು ಪ್ರಸ್ತಾವನೆಗೈದರು. ಸುದ್ದಿ ವೆಬ್‌ ಸೈಟ್‌ ಮುಖ್ಯಸ್ಥೆ ಜಯಶ್ರೀ ಕೊಯಿಂಗೋಡಿ ವಂದಿಸಿದರು. ಜಾಹೀರಾತು ವಿಭಾಗದ ಮುಖ್ಯಸ್ಥ ಹಾಗೂ ವಿಶೇಷಾಂಕ ಸಂಯೋಜಕ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.