ಮಾಹಿತಿ ನೀಡದೇ ರಸ್ತೆ ಅಗೆದುದಕ್ಕೆ ಆಕ್ಷೇಪ – ನಾಳೆ ಇಂಜಿನಿಯರ್ ಇದ್ದು ಕೆಲಸ ಆರಂಭಿಸಲು ಸೂಚನೆ
ಕನಕಮಜಲು ಗ್ರಾಮದ ಕಾರಿಂಜ ರಸ್ತೆಗೆ ನ್ಯಾಯವಾದಿ, ಕಾಂಗ್ರೆಸ್ ಮುಂದಾಳು ಪವಾಜ್ ಕನಕಮಜಲು ಪ್ರಯತ್ನದಲ್ಲಿ ಎಂ.ಎಲ್.ಸಿ. ಐವನ್ ಡಿಸೋಜಾರವರು ರೂ.5 ಲಕ್ಷ ಅನುದಾನ ಇರಿಸಿದ್ದು, ಈ ಕಾಮಗಾರಿಯ ಮಾಹಿತಿ ನೀಡದೇ ರಸ್ತೆಗೆ ಅಗೆದಿರುವುದಕ್ಕೆ ಊರಿನ ಕೆಲವರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಇಂದು ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿ, ನಾಳೆ ಕಾಮಗಾರಿಯ ಇಂಜಿನಿಯರ್ ಇದ್ದು ಕೆಲಸ ನಡೆಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಜನ ಸೇರಿದ ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ಕುತ್ಯಾಳ ಮೊದಲಾದವರು ಬಂದು ಊರವರೊಂದಿಗೆ ಮಾತನಾಡಿದರು.















ಈ ಕುರಿತು ಶ್ರೀಧರ್ ಕುತ್ಯಾಳರನ್ನು ಸಂಪರ್ಕಿಸಿ ವಿಚಾರಿಸಿದಾಗ, “ಕಾರಿಂಜ ರಸ್ತೆ ಅಭಿವೃದ್ಧಿಗೆ ರೂ.5 ಲಕ್ಷ ಅನುದಾನ ಬಂದಿದೆ. ಕೆಲಸ ಮಾಡಲಿದ್ದೇವೆ ಎಂದು ಕೆಲವು ದಿನಗಳ ಹಿಂದೆ ಫವಾಜ್ ಕನಕಮಜಲು ನಮಗೆ ತಿಳಿಸಿದ್ದರು. ಆದರೆ ದಿನ ಯಾವಾಗ ಎಂದು ಹೇಳಿರಲಿಲ್ಲ. ಇಂದು ದೀಪಾವಳಿ ಹಬ್ಬ ವಾದ್ದರಿಂದ ಜನ ಹೆಚ್ಚು ಓಡಾಡುತ್ತಾರೆ. ಮತ್ತು ಕಾಮಗಾರಿ ಆರಂಭದ ಮಾಹಿತಿಯೂ ಇರಲಿಲ್ಲ. ರಸ್ತೆ ಅಗೆದಿದ್ದಾರೆ. ಅದಕ್ಕಾಗಿ ಊರವರು ಆಕ್ಷೇಪಿಸಿದ್ದರು. ಮತ್ತು ನಿಯಮದಂತೆ 9 ಇಂಚಿನಷ್ಟು ರಸ್ತೆ ಅಗೆದು ಜಲ್ಲಿ ಹಾಕಬೇಕು.ಅದು ಮಾಡಿಲ್ಲ. ನಾನು ಸ್ಥಳಕ್ಕೆ ಹೋಗಿ ಜನರ ಅಹವಾಲು ಕೇಳಿ, ಗುತ್ತಿಗೆದಾರರಲ್ಲಿ ಮಾತನಾಡಿದ್ದೇನೆ. ನಾಳೆ ಇಂಜಿನಿಯರ್ ಇದ್ದು ನಮಗೆ ಕಾಮಗಾರಿಯ ವಿವರ ಸಲ್ಲಿಸಿ ಕೆಲಸ ಆರಂಭಿಸುವುದಾಗಿ ಗುತ್ತಿಗೆದಾರರು ಒಪ್ಪಿದ್ದಾರೆ ಎಂದು ತಿಳಿಸಿದರು.
ಅನುದಾನ ತರಿಸಿದ ಫವಾಜ್ ಕನಕಮಜಲು ಪ್ರತಿಕ್ರಿಯೆ ನೀಡಿ, ” ಕಾರಿಂಜ ರಸ್ತೆ ಅಭಿವೃದ್ಧಿಗೆ ರೂ.5 ಲಕ್ಷವನ್ನು ಎಂ.ಎಲ್.ಸಿ. ಐವನ್ ಡಿ ಸೋಜಾರವರು ನೀಡಿದ್ದಾರೆ. ಇವತ್ತು ಕೆಲಸ ಆರಂಭಿಸಿದ್ದಾರೆ. ನಾಳೆ ಇಂಜಿನಿಯರ್ ಬಂದು ಮಾಹಿತಿ ನೀಡಿ, ಕೆಲಸ ಮಾಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ” ಎಂದು ಹೇಳಿದರು.










