ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪೋಷಕರಿಂದ ದೂರು
ರಾಧಾಕೃಷ್ಣ ಬೊಳ್ಳೂರುರಿಂದ ಬಿ.ಇ.ಒ. ಕಚೇರಿಯಲ್ಲಿ ತರಾಟೆ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮತ್ತು ದಸರಾ ರಜೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದ ವಲಯ ಮಟ್ಟದ ಕ್ರೀಡಾಕೂಟ ಶಾಲಾರಂಭದ ದಿನವಾದ ಅ.23 ರಂದು ಅರಂತೋಡಿನಲ್ಲಿ ನಡೆಯುವ ವಿಚಾರವನ್ನು ಮುಖ್ಯೋಪಾಧ್ಯಾಯರು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸದ ಕಾರಣದಿಂದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾದರೆಂದು ಪೋಷಕರು ಶಾಲಾ ಮುಖ್ಯೋಪಾಧ್ಯಾಯರ ಮೇಲೆ ಅಸಮಾಧಾನಗೊಂಡು ಬಿ.ಇ.ಒ.ಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ಆರಂತೋಡು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟ ಅರಂತೋಡಿನಲ್ಲಿ ಅ.23 ಮತ್ತು 24 ರಂದು ಆಯೋಜಿಸಲ್ಪಟ್ಟಿದೆ.
ಆದರೆ ಈ ಕ್ರೀಡಾಕೂಟದ ಬಗ್ಗೆ ಮರ್ಕಂಜ ಮುಡ್ನೂರು ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ. ಓರ್ವ ಪೋಷಕರಾದ ಸಂಧ್ಯಾ ದೋಳ ರವರಿಗೆ ಈ ಬಗ್ಗೆ ಮಾಹಿತಿ ತಿಳಿದು ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಮಗನನ್ನು ಆರಂತೋಡಿಗೆ ಕರೆದುಕೊಂಡು ಹೋದರೆನ್ನಲಾಗಿದೆ. ಆದರೆ ಅಲ್ಲಿ ಆತನಿಗೆ ಪಾಲ್ಗೊಳ್ಳಲು ಅವಕಾಶ ಸಿಗದೇ ನಿರಾಶರಾದರೆನ್ನಲಾಗಿದೆ. ಈ ಬಗ್ಗೆ ಸಂಧ್ಯಾ ದೋಳರವರು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾ ಮುಖ್ಯಯೊಪಾಧ್ಯಾಯರು ಕರ್ತವ್ಯ ಲೋಪ ಎಸಗಿರುವ ಬಗ್ಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸುದ್ದಿಯನ್ನು ಸಂಪರ್ಕಿಸಿ ತನ್ನ ಬೇಸರವನ್ನು ತೋಡಿಕೊಂಡ ಸಂಧ್ಯಾ ದೋಳರವರು ” ಶಾಲಾ ಮುಖ್ಯೋಪಾಧ್ಯಾಯರು ಕ್ರೀಡಾಕೂಟದ ಬಗ್ಗೆ ಮೊದಲೇ ಮಾಹಿತಿ ನೀಡಬೇಕಿತ್ತು. ಅವರು ತಿಳಿಸದೇ ಇದ್ದರೂ ನಮಗೆ ಮಾಹಿತಿ ಸಿಕ್ಕಿ ನನ್ನ ಮಗನನ್ನು ಕರೆದುಕೊಂಡು ಹೋದೆ. ಅಲ್ಲಿ ಮುಖ್ಯೋಪಾಧ್ಯಾಯರು ಇದ್ದರೂ ಆತನಿಗೆ ಅವಕಾಶ ಮಾಡಿಕೊಡಲಿಲ್ಲ. ಆತ ಸ್ವಇಚ್ಛೆಯಿಂದ 600 ಮಿ. ಓಟ ಕ್ಕೆ ತೇರ್ಥಮಜಲು ಶಾಲಾ ಗ್ರೌಂಡ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ. ಅವಕಾಶ ಸಿಗದ ಕಾರಣ ಬೇಸರ ಗೊಂಡಿದ್ದಾನೆ. ಈ ರೀತಿ ವಿದ್ಯಾರ್ಥಿಗಳಿಗೆ ಆಗಬಾರದು” ಎಂದರು.















ಮುಖ್ಯೋಪಾಧ್ಯಾಯರಾದ ದೇವರಾಜ್ ರವರನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ ” ರಜೆ ಮುಂದೂಡಿಕೆಯಾದ ಕಾರಣ ಕ್ರೀಡಾ ಕೂಟಕ್ಕೆ ನಿಗದಿಯಾದ ದಿನಗಳು ಎರಡು ಮೂರು ಬಾರಿ ಮುಂದೂಡಲ್ಪಟ್ಟಿತು. ಈಗ 23, 24ಕ್ಕೆ ನಡೆಯುವ ಕ್ರೀಡಾ ಕೂಟವು ಮಳೆಯ ಕಾರಣದಿಂದ ಮುಂದೂಡಲ್ಪಡಬಹುದು ಎಂದಿತ್ತು. ಆದರೆ ರಾತ್ರಿ ನಮಗೆ ಮಾಹಿತಿ ಬಂದಿರುವುದು. ರಾತ್ರಿ ಮಳೆ ಇದ್ದ ಕಾರಣ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ. ನಿನ್ನೆ ಬೆಳಿಗ್ಗೆ ಮಕ್ಕಳನ್ನು ಕ್ರೀಡಾ ಕೂಟಕ್ಕೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಿದ್ದೇವೆ. ಪೋಷಕರಾದ ಸಂಧ್ಯಾ ದೋಳರವರು ಅವರ ಮಗನನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದಾರೆ. 600 ಮೀ. ಓಟದಲ್ಲಿ ಪಾಲ್ಗೊಳ್ಳಲು ಹೇಳಿದರೂ ಅವರು ಪಾಲ್ಗೊಳ್ಳಲಿಲ್ಲ. ನಿನ್ನೆ 4 ಮಕ್ಕಳು ಇಂದು 10 ಮಕ್ಕಳು ಪಾಲ್ಗೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ.
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸುಜಾತ ಅಂಗಡಿಮಜಲು ಪ್ರತಿಕ್ರಿಯಿಸಿ ” ಶಾಲಾ ಮುಖ್ಯೋಪಾಧ್ಯಾಯರು ಕ್ರೀಡಾ ಕೂಟದ ಬಗ್ಗೆ ಮೊದಲೇ ಮಾಹಿತಿ ತಿಳಿಸಬೇಕಿತ್ತು. ಮಕ್ಕಳನ್ನು ಶಾಲೆಯಿಂದ ಬೇರೆ ಕಡೆಗೆ ಕರೆದುಕೊಂಡು ಹೋಗಬೇಕಾದರೆ ಪೋಷಕರಿಂದ ಅನುಮತಿ ಪತ್ರಕ್ಕೆ ಸಹಿ ಪಡೆದುಕೊಳ್ಳಬೇಕು. ಇವರು ಅದ್ಯಾವುದನ್ನು ಮಾಡಿಲ್ಲ. ಇದರಿಂದಾಗಿ ಕ್ರೀಡಾ ಕೂಟದಲ್ಲಿ ಭಾಗವಹಿಸಲಾಗದೆ ಮಕ್ಕಳು ಅವಕಾಶ ವಂಚಿತರಾಗಿದ್ದಾರೆ” ಎಂದಿದ್ದಾರೆ.
ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಜಯ ಕುಮಾರ್ ರವರು ಸಂಪರ್ಕಿಸಿ ” ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರು ಮೊದಲೇ ಮಾಹಿತಿ ನೀಡಬೇಕಿತ್ತು. ಇನ್ನು ಮುಂದೆ ಈ ರೀತಿ ಆಗಬಾರದು” ಎಂದಿದ್ದಾರೆ.
ರಾಧಾಕೃಷ್ಣ ಬೊಳ್ಳೂರು ತರಾಟೆ
ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸದಿರುವ ಮುಖ್ಯೋಪಾಧ್ಯಾಯರ ಕ್ರಮವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ಬೊಳ್ಳೂರು ರವರು ಬಿ.ಇ.ಒ. ಕಚೇರಿಗೆ ಹೋಗಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರೆಂದು ತಿಳಿದುಬಂದಿದೆ.










