ಸುಬ್ರಹ್ಮಣ್ಯದ ಕುಮಾರಧಾರಾ ನದಿಗೆ ತ್ಯಾಜ್ಯ ಎಸೆದು ಯಾರೂ ನೋಡಿಲ್ಲವೆಂದು ಭಾವಿಸಿಕೊಂಡು ತೆರಳಿದ ಬೆಂಗಳೂರಿನ ಪ್ರವಾಸಿಗರಿಂದ ದಂಡ ವಸೂಲಿ ಮಾಡಿ ಜಾಗೃತಿ ಮೂಡಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ಅ.23 ರಂದು ವರದಿಯಾಗಿದೆ.















ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದಿದ್ದ ಯಾತ್ರಿಕರು ಅ. 23ರಂದು ಬೆಳಗ್ಗೆ ಕಾರಿನಲ್ಲಿ ಮರಳಿ ಹೋಗುವಾಗ ತ್ಯಾಜ್ಯದ ಕಟ್ಟೊಂದನ್ನು ನದಿಗೆ ಎಸೆದು ಹೋಗಿದ್ದರು. ಇದನ್ನು ಗಮನಿಸುತ್ತಿದ್ದ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಪಂಚಾಯತ್‌ಗೆ ದೂರು ನೀಡಿದ್ದರು. ಪಂಚಾಯತ್ ಅಧಿಕಾರಿಗಳು ವೀಡಿಯೋವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಅವರು ವಾಹನದ ನೋಂದಣಿ ಸಂಖ್ಯೆಯ ಆಧಾರದಲ್ಲಿ ವಾಹನದ ವಾರಸುದಾರರನ್ನು ಪತ್ತೆಹಚ್ಚಿದರು.
ವಾಹನವು ಬೆಂಗಳೂರಿನ ಮುರಳಿ ಎಂಬವರಿಗೆ ಸೇರಿದ್ದಾಗಿದ್ದು, ಅವರನ್ನು ಸಂಪರ್ಕಿಸಿದ ಪಂಚಾಯತ್ ಅಧಿಕಾರಿಗಳು ತ್ಯಾಜ್ಯ ಎಸೆದಿರುವುದಕ್ಕೆ ರೂ. 2,000 ದಂಡ ಪಾವತಿಸಲು ಸೂಚಿಸಿದ್ದು, ಬಳಿಕ ಅವರು ಆನ್‌ಲೈನ್ ಮೂಲಕ ದಂಡ ಪಾವತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.










