ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಕುರಿಂಜಿ ಡಾ. ರೇಣುಕಾ ಪ್ರಸಾದ್ ಕುಟುಂಬದವರು ನೀಡಲಿರುವ ಬೆಳ್ಳಿ ರಥವು 5 ರಂದು ಶ್ರೀ ಕ್ಷೇತ್ರ ಕುಕ್ಕೆಗೆ ಆಗಮಿಸಲಿದ್ದು,ಅದನ್ನು ಸ್ವಾಗತಿಸಲು ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿ ವತಿಯಿಂದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನವೆಂಬರ್ 01 ರಂದು ನಡೆದ ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಸಮಿತಿಯ ಅಧ್ಯಕ್ಷ ಡಾ. ಎ ಎ ತಿಲಕ್ ವಹಿಸಿದ್ದರು. ಸುಬ್ರಹ್ಮಣ್ಯದ ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಮುಖಂಡರು ನಿವೃತ್ತ ವಿಟಿಯು ವಿಶೇಷ ಅಧಿಕಾರಿ ಡಾ. ಶಿವಕುಮಾರ್ ಹೊಸಳ್ಳಿಕೆ ರಥ ಆಗಮಿಸುವ ಬಗ್ಗೆ ವಿವರವಾದ ಮಾಹಿತಿಗಳನ್ನ ಸಭೆಗೆ ನೀಡಿದರು. ನವೆಂಬರ್ 5ರಂದು ಕುಕ್ಕೆಗೆ ಆಗಮಿಸುವ ಬೆಳ್ಳಿ ರಥವನ್ನು ಸುಬ್ರಮಣ್ಯ ಸಮೀಪದ ಕಲ್ಲಾಜೆಯಲ್ಲಿ ಕಡಬ ತಾಲೂಕು ವತಿಯಿಂದ ನೂರಾರು ಜನ ಸೇರಿ ಅದ್ದೂರಿಯಾಗಿ ಸ್ವಾಗತಿಸುವುದೆಂದು ನಿರ್ಣಯಿಸಲಾಯಿತು. ಅದಕ್ಕೂ ಮೊದಲು ರಥ ಆಗಮಿಸುವ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು. ಕಡಬ ತಾಲೂಕು ಅಲ್ಲದೆ ಅಕ್ಕಪಕ್ಕದ ಊರುಗಳ ಎಲ್ಲ ಭಕ್ತರು ಕಲ್ಲಾಜೆ ಸಮೀಪ ಜಮಾಯಿಸುವುದೆಂದು ವಿನಂತಿಸಿಕೊಳ್ಳಲಾಯಿತು.















ಸಭೆಯಲ್ಲಿ ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಮುಖಂಡರುಗಳಾದ ಗೋಪಾಲ ಎಣ್ಣೆಮಜ್ಜಲ್, ಶಿವರಾಮ ಏನಕ್ಕಲ್, ಉಮೇಶ ಹೊಸಳ್ಳಿಕೆ, ಶಿವರಾಮ ಪಳ್ಳಿ, ದಾಮೋದರ ಕಟ್ಟೆಮನೆ ,ಅಶೋಕ್ ಕುಮಾರ್ ಮೂಲೆ ಮಜಲು ಮುಂತಾದವರು ಉಪಸ್ಥಿತರಿದ್ದು ಬೆಳ್ಳಿರಥ ಆಗಮಿಸುವ ಅದ್ದೂರಿ ಸ್ವಾಗತಕ್ಕಾಗಿ ಸಲಹೆ ಸೂಚನೆಗಳನ್ನು ನೀಡಿದರು. ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಕಾರ್ಯದರ್ಶಿ ವಿಶ್ರಾಂತ ಉಪನ್ಯಾಸಕ ಪ್ರೊ.ವಿಶ್ವನಾಥ ನಡುತೋಟ ಧನ್ಯವಾದ ಸಮರ್ಪಿಸಿದರು.










