ತರಗತಿಯಲ್ಲಿ ಕಲಿತದ್ದಷ್ಟೇ ವಿದ್ಯೆಯಲ್ಲ, ಹೊರಗಿನ ಪರಿಸರವೂ ಮುಖ್ಯ : ಡಾ. ಲೀಲಾ ಉಪಾಧ್ಯಾಯ

0

“ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನವು ಮಹತ್ತರವಾದ ಪಾತ್ರವಹಿಸುತ್ತದೆ. ಜ್ಞಾನವು ಮನುಜನನ್ನು ಮುಕ್ತಿಯೆಡೆಗೆ ಕೊಂಡೊಯ್ಯುವ ಸಾಧನವಾದರೆ, ಶಿಕ್ಷಣವು ಪುರುಷ ಸಿಂಹರನ್ನು ಸೃಷ್ಟಿಸುತ್ತದೆ ಎಂಬುದು ವಿವೇಕ ವಾಣಿಯಾಗಿದೆ. ಯಾವುದೇ ಸಂದರ್ಭದಲ್ಲಿಯೂ ಉಪಕಾರ ಮಾಡುವುದರಿಂದ ಹಿಂದೆ ಸರಿಯಬಾರದು. ಸಮಾಜದಲ್ಲಿ ಸಹಕಾರಯುತ ಬಾಳ್ವೆ ನಡೆಸಬೇಕು. ನಾಲ್ಕು ಗೋಡೆಗಳ ನಡುವೆ ಕಲಿತದ್ದು ಮಾತ್ರ ಜ್ಞಾನವಾಗಿರಲಾರದು. ಪ್ರಕೃತಿಯಿಂದ ಕಲಿಯಲು ಸಾಕಷ್ಟಿದೆ. ಹಾಗಾಗಿ ಪ್ರಕೃತಿಯನ್ನು ಪೂಜಿಸಬೇಕು. ಜ್ಞಾನಕ್ಕೆ ಜ್ಞಾನವೇ ಸಾಟಿ ಆಗಿರುತ್ತದೆ ನಾವೆಲ್ಲರೂ ಜ್ಞಾನವಂತರಾಗಬೇಕು” ಎಂದು ಡಾ. ಲೀಲಾ ಉಪಾಧ್ಯಾರವರು ಹೇಳಿದರು.

ಅ.31ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಸುಳ್ಯ ತಾಲೂಕು ಮಟ್ಟದ ಜೀವಿಗಳು ಮತ್ತು ಪರಿಸರ ವಿಷಯಧಾರಿತ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ನಿವೃತ್ತ ಬ್ಯಾಂಕ್ ಉದ್ಯೋಗಿ ರಮೇಶ್ ರಾವ್ ರವರು ಮಾತನಾಡಿ “ಸಮಾಜದಲ್ಲಿ ಬದುಕುವಾಗ ಪರಸ್ಪರ ಪರಿಚಯ ಅಗತ್ಯ. ಹಾಗೆಯೇ ಪರಸ್ಪರ ಸಹಕಾರಯುತ ಜೀವನವು ಬದುಕಿನ ಸಾರ್ಥಕತೆಯನ್ನು ತಿಳಿಸುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ನೀನಾದ ತಂಟೆಪಾಡಿ ಇದರ ಉಪಾಧ್ಯಕ್ಷರಾಗಿರುವ ವಾಸಪ್ಪರವರು ಮಾತನಾಡಿ ” ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಶ್ರೇಷ್ಠ. ಸಿಕ್ಕಿದ್ದನ್ನು ಹೆಕ್ಕಿ ತಿನ್ನುವ ಕೊಕ್ಕರೆ ಜಾತಿಯ ವಿದ್ಯಾರ್ಥಿಗಳು ಯಾವುದನ್ನು ಆರಿಸಿಕೊಳ್ಳಬೇಕು ಎಂದು ತಿಳಿದು ನಡೆದರೆ ಬದುಕು ಹಸನಾಗುವುದು” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಯವರು ಮಾತನಾಡಿ ” ವಿದ್ಯೆಯು ವಿಮುಕ್ತಿಯನ್ನು ಒದಗಿಸುತ್ತದೆ. ವಿದ್ಯೆಯು ಭೀತಿಯಿಂದ, ಅಜ್ಞಾನದಿಂದ, ಮನೋವೈಕಲ್ಯತೆಯಿಂದ ಮತ್ತು ಅಸಮರ್ಥತೆಯಿಂದ ಮುಕ್ತರಾಗಲು ಸಹಕರಿಸುತ್ತದೆ. ವಿದ್ಯೆಯಿಂದ ದೊರೆತ ಜ್ಞಾನವು ಶ್ರೇಷ್ಠ ಮತ್ತು ಶಕ್ತಿಯುತವಾಗಿರುತ್ತದೆ” ಎಂದು ಹೇಳಿ ಸ್ಪರ್ದಾಳುಗಳಿಗೆ ಶುಭ ಹಾರೈಸಿದರು.

ರಸಪ್ರಶ್ನೆ ಸ್ಪರ್ಧೆಯ ಕ್ವಿಜ್ ಮಾಸ್ಟರ್ ಆಗಿ ಸ್ನೇಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಅಕ್ಷರ ದಾಮ್ಲೆ ಮತ್ತು ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಸಹಕರಿಸಿದರು. ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಿಂದ 13 ತಂಡಗಳು ಮತ್ತು ಪ್ರಾಥಮಿಕ ವಿಭಾಗದಿಂದ 8 ತಂಡಗಳು ಭಾಗವಹಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ ಶಿಕ್ಷಕ ದೇವಿಪ್ರಸಾದ ಜಿ ಸಿ ವಂದಿಸಿದರು.
ಶಿಕ್ಷಕಿ ಶ್ರೀಮತಿ ಸವಿತಾ ಎಂ ನಿರೂಪಿಸಿದರು.
ಈ ಸಂದರ್ಭದಲ್ಲಿ ಸ್ಪರ್ಧಾಳುಗಳು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.