“ಯಾವುದೇ ಭಾಷೆಯನ್ನು ಉಳಿಸಿ ಬೆಳೆಸಲು ಭಾಷಾಭಿಮಾನವು ಮುಖ್ಯ . ಕನ್ನಡ ಮಾಧ್ಯಮದಲ್ಲೇ ಕಲಿತವರು ಭವಿಷ್ಯದ ಕನ್ನಡದ ಕಣ್ಮಣಿಗಳು. ಯುವಜನರು ಕನ್ನಡ ಭಾಷೆ ಉಳಿಸಿ ಬೆಳೆಸಲು ಮನಸ್ಸು ಮಾಡಬೇಕು . ಇಂದು ಕನ್ನಡದಲ್ಲಿ ಹೆಚ್ಚೆಚ್ಚು ಸಾಹಿತ್ಯ ಕೃಷಿ ಮಾಡುವ ಅಗತ್ಯವಿದೆ . ಗಂಧದ ಗುಡಿಯಾದ ಕನ್ನಡ ನಾಡು ಹಾಗೂ ನುಡಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡೋಣ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರು ಹೇಳಿದರು .















ಅವರು ನ.1ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ನಮ್ಮ ಸಂಸ್ಥೆಯ ಶಿಕ್ಷಕಿ ಶ್ರೀಮತಿ ವಿಜೇತಾ ಪಿ ಅವರು ಮಾತನಾಡಿ ” ಕನ್ನಡ ರಾಜ್ಯೋತ್ಸವ ಒಂದು ದಿನದ ಹಬ್ಬವಾಗದೆ, ದಿನನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕು. ಕರ್ನಾಟಕದ ರಚನೆಗಾಗಿ ಹೋರಾಡಿದ ಕನ್ನಡದ ಕಟ್ಟಾಳುಗಳ ಶ್ರಮವನ್ನು ವ್ಯರ್ಥಮಾಡದೆ
ಭಾಷಾಬೆಳವಣಿಗೆಗೆ ನಾವು ಶ್ರಮಿಸಬೇಕು. ಕರ್ನಾಟಕ ಏಕೀಕರಣ ಕೇವಲ ಗಡಿಯ ವಿಚಾರ ಮಾತ್ರವಾಗಿರದೆ ಕನ್ನಡ ಸಂಸ್ಕೃತಿಯ ನೆಲೆಬೀಡಾಗಿದೆ. ಜಾತಿಭೇದ ಮರೆತು ಕನ್ನಡ ಭಾಷೆಯ ಉಳಿವಿಗೆ ಎಲ್ಲರೂ ತೊಡಗಬೇಕು” ಎಂದು ಹೇಳಿದರು. ಇನ್ನೋರ್ವ ಶಿಕ್ಷಕಿ ಶ್ರೀಮತಿ ಪವಿತ್ರ ಎಚ್ ಮಾತನಾಡಿ ” ಕನ್ನಡ ಕೇವಲ ಒಂದು ಭಾಷೆಯಲ್ಲ , ಅದು ನಮ್ಮ ಸಂಸ್ಕೃತಿಯ ಹೆಗ್ಗುರುತು. ಸಾಹಿತ್ಯ ಹಂತ ಹಂತವಾಗಿ ಬೆಳೆದು ಬಂದಿದೆ. ಸಾಹಿತ್ಯದ ಬೆಳವಣಿಗೆಗೆ ಕವಿಗಳ ಕೊಡುಗೆ ಅಪಾರವಾದದ್ದು. ಇಂದು ಆಂಗ್ಲ ಭಾಷೆಯ ಪ್ರಭಾವದಿಂದ ನಮ್ಮ ಭಾಷೆ ಅಳಿವಿನಂಚಿನಲ್ಲಿದೆ. ಹಾಗಾಗಿ ಕನ್ನಡಿಗರಾದ ನಾವು ಅದನ್ನು ಉಳಿಸಿ ಬೆಳೆಸಬೇಕು. ಇದು ಕೇವಲ ಸರ್ಕಾರ , ಸಂಘ ಸಂಸ್ಥೆಗಳ ಕೆಲಸವಲ್ಲ. ಪ್ರತಿಯೊಬ್ಬ ನಾಗರಿಕನ ಕೆಲಸ. ಪ್ರತಿಯೊಬ್ಬರೂ ಭಾಷೆಯ ಬೆಳವಣಿಗೆಗೆ ತೊಡಗಿದಾಗ ಭಾಷೆ ಇನ್ನಷ್ಟು ಪ್ರಜ್ವಲಿಸುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ, ಆಡಳಿತಾಧಿಕಾರಿ ಅಕ್ಷರ ದಾಮ್ಲೆ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಗಿರಿಜಾ ಕುಮಾರಿ ಎಂ ಸ್ವಾಗತಿಸಿ, ಶ್ರೀಮತಿ ಕವಿತಾ ಹೆಚ್ ಎ ಧನ್ಯವಾದವಿತ್ತರು . ಶಿಕ್ಷಕಿ ಶ್ರೀಮತಿ ಸವಿತಾ ಎಂ ನಿರೂಪಿಸಿದರು . ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ವೈಭವ ವಿದ್ಯಾರ್ಥಿಗಳಿಂದ ನಡೆಯಿತು.











