ನಿವೇಶನ ಜಾಗ ನೀಡುವಂತೆ ಸುಳ್ಯ ಆಶ್ರಯ ಯೋಜನೆ ನಿವೇಶನ ಹಕ್ಕು ಹೋರಾಟ ಸಮಿತಿ ವತಿಯಿಂದ ಶಾಸಕರಿಗೆ ಮನವಿ

0

ಸ್ಪಂದಿಸಿದ ಶಾಸಕರು, ಕೂಡಲೇ ಸಭೆ ಕರೆಯುವಂತೆ ನಗರ ಪಂಚಾಯತ್ ಮುಖ್ಯ ಅಧಿಕಾರಿಗೆ ಸೂಚನೆ

ಸುಳ್ಯ ನಗರ ವಸತಿ ರಹಿತ ನಿವಾಸಿಗಳು ಕಳೆದ ಹತ್ತು ಹದಿನೈದು ವರ್ಷಗಳಿಂದ ಮನವಿಗಳನ್ನು ಸಲ್ಲಿಸಿದ್ದರು ಇವರಿಗೆ ಯಾವುದೇ ಮನೆ ನಿವೇಶನ ಜಾಗ ನೀಡದೆ ಇದ್ದು ಕೂಡಲೇ ಸಂಬಂಧಪಟ್ಟ ಫಲಾನುಭವಿಗಳಿಗೆ ಮನೆ ನಿವೇಶನಕ್ಕೆ ಜಾಗ ಗುರುತಿಸಿ ಕೊಡುವಂತೆ ಒತ್ತಾಯಿಸಿ ನ.10 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರಿಗೆ ಮನವಿ ನೀಡಿ ಆಗ್ರಹ ವ್ಯಕ್ತಪಡಿಸಿ ಸರಕಾರದಿಂದ ರಚನೆಗೊಂಡ ಆಶ್ರಯ ಸಮಿತಿಯ ಸಭೆ ಕರೆಯಲು ಮತ್ತು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚುವ ಬಗ್ಗೆ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಾತನಾಡಿದ ಸಮಿತಿಯ ಸಂಚಾಲಕ ರಶೀದ್ ಜಟ್ಟಿಪಳ್ಳರವರು ‘ವಸತಿ ನಿವೇಶನ ನಿರಾಶ್ರಿತರಿಗೆ ಸರಕಾರದಿಂದ ಕೊಡಮಾಡುವ ಆಶ್ರಯ ಯೋಜನೆ ಅಡಿಯಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿ ನಗರ ಆಡಳಿತಕ್ಕೆ ನಿವೇಶನಕ್ಕೆ ಬೇಕಾಗಿ ಅರ್ಜಿ ಸಲ್ಲಿಸಿ ವರುಷಗಳು 17 ಕಳೆದರೂ ಯಾವುದೇ ನಿವೇಶನ ದೊರಕಿಲ್ಲ.

ಇದಕ್ಕೆ ಸಂಬಂಧಿಸಿ ಫಲಾನುಭವಿಯವರು ಅನೇಕ ಸಲ ನಗರ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನ ಇಲ್ಲದಂತೆ ಆಗಿದೆ. ನಂತರ ಹೋರಾಟ ಸಮಿತಿ ರಚಿಸಿ ಸಮಿತಿ ಮುಖಾಂತರ ನಗರ ಆಡಳಿತ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಒತ್ತಡ ಹಾಕುತ್ತಾ ಬಂದರೂ ನಿವೇಶನ ಹಂಚಲು ಸುಳ್ಯ ನಗರ ಭಾಗದಲ್ಲಿ ಸರಕಾರಿ ಜಾಗ ಇಲ್ಲ ಎಂಬ ಸಮಜಾಯಿಷಿ ಕೊಡುತ್ತಾ ಸತಾಯಿಸಿ ಫಲಾನುಭವಿಯವರನ್ನು ಹಿಂದಕ್ಕೆ ಕಳುಹಿಸಿ ನಿರಾಶೆಗೆ ಒಳಪಡಿಸುತ್ತಿದ್ದರು.

ಈ ಪರಿಸ್ಥಿತಿಯಲ್ಲಿ ಹೋರಾಟ ಸಮಿತಿಯು ಸರಕಾರದಿಂದ ವಸತಿ ಯೋಜನೆಯಡಿಯಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿದ ಸರ್ವೆ ನಂಬ್ರ 96/1A1 ಮತ್ತು ಸರ್ವೆ ನಂಬ್ರ 374/2 ಎರಡೂ ಸರಕಾರಿ ನಿವೇಶನಗಳ ಭೂ ದಾಖಲಾತಿಯನ್ನು ಆಧಾರ ಸಹಿತ ತಾಲೂಕು ಕಛೇರಿಗೆ ನೀಡಿ ಆಗಿನ ತಹಶೀಲ್ದಾರರಾದ ಅನಿತಾಲಕ್ಷ್ಮಿಯವರು ಪರಿಶೀಲಿಸಿ ಸರ್ವೆಯರ್ ಆದ ಜಗದೀಶ್ ಅವರಲ್ಲಿ ಸರ್ವೆಯನ್ನು ಮಾಡಿಸಿ, ಕಂದಾಯ ಇಲಾಖೆಯ ಕೆಲಸವನ್ನು ಮುಗಿಸಿ ನಗರ ಪಂಚಾಯತ್ ಆಡಳಿತಕ್ಕೆ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿರುತ್ತಾರೆ.

ಆದರೆ ಇದೀಗ ನಗರ ಆಡಳಿತದಿಂದ ಸ್ಪಂದನೆ ದೊರಕಿದ್ದು, ಸರಕಾರದಿಂದ ಆಶ್ರಯ ಸಮಿತಿ ರಚನೆಗೊಂಡಿದ್ದು, ಮುಂದೆ ಆಶ್ರಯ ಸಮಿತಿಯ ಸಭೆ ಕರೆದು ಇದೀಗ ಸ್ಥಳ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ 455ಕ್ಕೂ ಮೇಲ್ಪಟ್ಟ ಫಲಾನುಭವಿಗಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಸುಮಾರು 20 ವರ್ಷ ಮೇಲ್ಪಟ್ಟು, ಮಂಜೂರಾಗದ ನಿವೇಶನವನ್ನು ಆದಷ್ಟು ಬೇಗನೆ ಫಲಾನುಭವಿಗಳಿಗೆ ದೊರಕಿಸಿಕೊಡಬೇಕಾಗಿ ಈ ವಿನಂತಿಸಿಕ್ಕೊಂಡರು.

ಮನವಿ ಸ್ವೀಕರಿಸಿದ ಶಾಸಕರು ಕೂಡಲೇ ನಗರ ಪಂಚಾಯತ್ ಮುಖ್ಯ ಅಧಿಕಾರಿಯವರಿಗೆ ದೂರವಾಣಿ ಮೂಲಕ ಕರೆ ಮಾಡಿ ಅವರನ್ನು ತಮ್ಮ ಕಚೇರಿಗೆ ಕರೆಸಿ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ಅತಿ ಶೀಘ್ರದಲ್ಲಿ ಆಶ್ರಯ ಸಮಿತಿಯ ಸಭೆ ಕರೆಯುವಂತೆ ಮುಖ್ಯ ಅಧಿಕಾರಿಯವರಿಗೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ಫಲಾನುಭವಿಗಳು ಹಾಗೂ ಸಮಿತಿಯ ಸದಸ್ಯರುಗಳಾದ ಕವಿತ, ಸಾಜಿದಾ, ಪದ್ಮನಾಭ,ಅನೀಸಾ, ಸರೋಜ ಇಂದಿರಾ, ಕಮಲ,ಮಮತ ಮೊದಲಾದವರು ಉಪಸ್ಥಿತರಿದ್ದರು.