Home Uncategorized ಕಲೆ ಸಾಹಿತ್ಯ ಮನಸ್ಸಿನ ಸೌಂದರ್ಯ

ಕಲೆ ಸಾಹಿತ್ಯ ಮನಸ್ಸಿನ ಸೌಂದರ್ಯ

0

ಲೇಖನ : ಮಮತಾ ರವೀಶ್ ಪಡ್ದoಬೈಲು

ಪ್ರತಿಯೊಬ್ಬ ಮನುಷ್ಯನ ದಿನ ನಿತ್ಯದ ಬದುಕಿನಲ್ಲಿ ಸಾಹಿತ್ಯ, ಕಲೆ ಹಾಸು ಹೊಕ್ಕಾಗಿರುತ್ತದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಉತ್ತೇಜನ ನೀಡುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕವು ಸರಕಾರಿ ಪದವಿಪೂರ್ವ ಕಾಲೇಜಿನ ಅಮೃತ ಮಹೋತ್ಸವ ಸಮಿತಿಯ ಸಹಕಾರದೊಂದಿಗೆ ದಿವಂಗತ ಯು.ಸು.ಗೌ ಸ್ಮರಣಾರ್ಥ ನಡೆಸಿದ ಸುಳ್ಯ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ -2025 ಯಾವುದೇ ಆಡಂಭರವಿಲ್ಲದೆ ಅರ್ಥಪೂರ್ಣವಾಗಿ ನಡೆದು ಯಶಸ್ವಿಯಾಗಿ ಸಂಪನ್ನಗೊಂಡಿತು.
ಮಕ್ಕಳ ಸಾಹಿತ್ಯ ಸಮ್ಮೇಳನವು ಬಹಳ ವಿಜೃಂಭಣೆಯಿಂದ ಮೇಳೈಸಿದ್ದು ಅದಕ್ಕೆ ಸಾಕ್ಷಿಯಾಗಿ ಸುಮಾರು 300ಕ್ಕಿಂತ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಅಭೂತಪೂರ್ವ ದಿನ. ಸಮ್ಮೇಳನದ ಕೊನೆಯವರೆಗೂ ಎಲ್ಲಾ ವಿದ್ಯಾರ್ಥಿಗಳು ತದೇಕ ಚಿತ್ತದಿಂದ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಹರ್ಷಚಿತ್ತರಾದರು. ಸುಳ್ಯ ತಾಲೂಕಿನ ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗದಿಂದ ವಿದ್ಯಾರ್ಥಿಗಳು ಆಯ್ಕೆಗೊಂಡು ಸನ್ನದ್ಧಗೊಂಡ ಮಕ್ಕಳ ಸಾಹಿತ್ಯ ಸಮ್ಮೇಳನ ಸುಳ್ಯದ ಇತಿಹಾಸ ಪುಟಕ್ಕೆ ಸೇರಿದೆ. ಧ್ವಜಾರೋಹಣದೊಂದಿಗೆ ಆರಂಭಗೊಂಡು ಅತಿಥಿ ಅಭ್ಯಾಗತರ ಸಮ್ಮುಖದೊಂದಿಗೆ ಸಮ್ಮೇಳನ ಉದ್ಘಾಟನೆ. ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತಾಗಿ ಹಿರಿಯ ಸಾಹಿತಿಗಳಿಂದ ಆಶಯ ಆಶೀರ್ವಾದದ ನುಡಿಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿತ್ತು.


ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಆತ್ಮೀಯ ಕೆ ಇವರ ಕನ್ನಡ ನಾಡು ನುಡಿ, ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನ್ನುವ ಮಾತು ಅಭಿನಂದನಾರ್ಹವಾದುದು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕುಮಾರಿ ಪೌರ್ಣಮಿ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ಭಾಷೆ ಸಂಸ್ಕೃತಿಯ ಕುರಿತು ಎಲ್ಲರ ಮನಮುಟ್ಟುವಂತೆ ಮಾತಾಡಿ ಎಲ್ಲರ ಗಮನಸೆಳೆದಳು. ಕವಿಗೋಷ್ಠಿಯಲ್ಲಿ ಭಾಗವಹಿಸಲು ವಿವಿಧ ಶಾಲೆಗಳಿಂದ ಸಮ್ಮೇಳನಕ್ಕೆ ಹೆಜ್ಜೆಯಿಟ್ಟ ವಿದ್ಯಾರ್ಥಿಗಳು ತಮ್ಮೆಲ್ಲರ ಮನದ ಭಾವನೆಗಳನ್ನು ಕವನದ ಮೂಲಕ ವ್ಯಕ್ತಪಡಿಸಲು ವೇದಿಕೆಯನ್ನು ಬಳಸಿಕೊಂಡರು. ‍ಚರ್ಚಾಗೋಷ್ಠಿಯಲ್ಲಿ ವಿದ್ಯಾರ್ಥಿಗಳ ಮಾತಿನ ವರಸೆ, ವಿಷಯ ಜ್ಞಾನದ ಪಾಂಡಿತ್ಯ ನೆರೆದ ಸಾಹಿತ್ಯ ಅಭಿಮಾನಿಗಳನ್ನು ರೋಮಾಂಚನಗೊಳಿಸುವಂತಿತ್ತು.ಎಲ್ಲರೂ ತದೇಕ ಚಿತ್ತದಿಂದ ಆಲಿಸುವಂತೆ ಮಾಡಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ದೀಪಶ್ರೀ ವೇದಿಕೆಯಲ್ಲಿ ಎಲ್ಲಾ ಕವಿಗಳ ಭಾವನೆಗಳನ್ನು ಮನೋವೈಶಾಲ್ಯತೆಯನ್ನು ಎಳೆಎಳೆಯಾಗಿ ವಿವರಿಸಿ ಎಲ್ಲರ ಗಮನ ಸೆಳೆದಳು. ಅಚ್ಚುಕಟ್ಟಾಗಿ ನಡೆದ ಸಮ್ಮೇಳನದಲ್ಲಿ ಯಾವುದೇ ಅನವಶ್ಯಕ ಅದ್ದೂರಿ ಇಲ್ಲದೆ ಸಭಾಂಗಣದಲ್ಲಿ ಸಮಯ ಪ್ರಜ್ಞೆ , ಶಿಸ್ತು ಎದ್ದು ಕಾಣುತ್ತಿತ್ತು. ಇದು ಕಾರ್ಯಕ್ರಮದ ಆಯೋಜನೆಯ ಶ್ರಮಕ್ಕೆ ಸಂದ ಗೌರವ. ಸಮ್ಮೇಳನದ ಮಧ್ಯದಲ್ಲಿ ಹಲವು ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಮೆರುಗು ನೀಡಿದ್ದು ಸಮ್ಮೇಳನದ ಸೌಂದರ್ಯವನ್ನು ಹೆಚ್ಚಿಸಿತು. ವಿದ್ಯಾರ್ಥಿಗಳ ಇಂತಹ ಸಮ್ಮೇಳನವು ಇನ್ನು ಮುಂದೆಯೂ ನಡೆದು ವಿದ್ಯಾರ್ಥಿಗಳಿಗೆ ಫಲಪ್ರದವಾಗಲಿ ಎಂದು ಆಶಿಸೋಣ.

– ಮಮತಾ ರವೀಶ್ ಪಡ್ದoಬೈಲು

ಕಿರಿಯರ ಸಾಹಿತ್ಯ ಸಮ್ಮೇಳನ ಬಹಳ ಶಿಸ್ತುಬದ್ಧವಾಗಿತ್ತು. ಅಧ್ಯಕ್ಷರ ಮತ್ತು ಅತಿಥಿಗಳ ಆಯ್ಕೆಯಲ್ಲಿಯೇ ಬಹಳ ಮುಖ್ಯವಾಗಿ ಶ್ರಮ ಎದ್ದು ಕಾಣುತ್ತಿತ್ತು. ಬಹುಶಃ ಅವರು ದೊಡ್ಡವರಿಗಿಂತ ಚೆನ್ನಾಗಿಯೇ ನಿಭಾಯಿಸಿದರೆಂದು ಹೇಳಲು ಸಂತೋಷ ಪಡುತ್ತೇನೆ. ಕವಿಗೋಷ್ಠಿಯಂತೂ ತುಂಬಾ ಆಶ್ಚಯರ್ಯಕರವಾಗಿತ್ತು. ಇಷ್ಟು ವೈವಿಧ್ಯಮಯವಾಗಿ ರಚಿಸಿರುವ ಬಗ್ಗೆ ನಮ್ಮ ಎಳೆಯರು ಚಿಂತಿಸುತ್ತಾರೆಂದರೆ ಅದು ಹೆಮ್ಮೆಪಡತಕ್ಕಂತಹ ವಿಷಯ. ಅದು ಪೆಹಲ್ಗಾಮ್‌ನ ದುರಂತ ಇರಬಹುದು, ಅಥವಾ ಜಾತೀಯತೆಯ ಭೂತ ಇರಬಹುದು, ಅಥವಾ ನಮ್ಮವರಂತೆ ನಟಿಸಿ ನಮ್ಮವರಾಗದೇ ಇರುವವರಾಗಿರಬಹುದು, ಅಥವಾ ತುಂಟ ತಮ್ಮನ ಬಗ್ಗೆ ಇರಬಹುದು, ಇಲ್ಲವೇ ದೇಶದ ಬಗ್ಗೆ ಇರಬಹುದು. ಒಟ್ಟಿನಲ್ಲಿ ವೈವಿಧ್ಯಮಯವಾದ ವಿಷಯದಲ್ಲಿ ಕವನಗಳನ್ನು ರಚಿಸಿರುವ ಎಳೆಯರನ್ನು ಗಮನಿಸಿದಾಗ ಸಾಹಿತ್ಯಿಕವಾಗಿ ಮುಂದೆ ತುಂಬಾ ದೊಡ್ಡ ಬೆಳವಣಿಯಾಗಲಿದೆ ಎಂಬ ಭರವಸೆ ಮೂಡಿಸುತ್ತದೆ. ನಾನು ಇದರ ಪೂರ್ತಿಯಾದ ಶಹಭಾಷ್‌ಗಿರಿಯನ್ನು ಸಂಘಟರಿಗೆ ನೀಡಲು ಬಯಸುತ್ತೇನೆ. ಪ್ರತಿಭೆಯನ್ನು ಮಾತ್ರ ಮಾನದಂಡವಾಗಿಟ್ಟುಕೊಂಡು ಮಕ್ಕಳಿಗೆ ಬೇರೆ ಬೇರೆ ಅವಕಾಶ ನೀಡಿದ್ದು ಮಾದರಿಯಾಗಿದೆ.

ಡಾ. ಪ್ರಭಾಕರ ಶಿಶಿಲ
ಹಿರಿಯ ಸಾಹಿತಿಗಳು, ವಿಶ್ರಾಂತ ಪ್ರಾಂಶುಪಾಲರು.

ಪ್ರಬುದ್ಧ ಸಾಹಿತಿಗಳಾಗುವ ಭವಿಷ್ಯದ ಕನಸಿಗೆ ಮುನ್ನುಡಿ ನಮ್ಮ ಹಿರಿಯರ ಸಾಹಿತ್ಯ ಸಮ್ಮೇಳನದ ಸಂಘಟನೆಗೆ ಸಮಾನಾಂತರವಾಗಿ ರೂಪುಗೊಂಡಂತಹ ಪುಟಾಣಿ ಸಾಹಿತ್ಯ ಮೇಳ.

ಕೆ ಆರ್ ಗೋಪಾಲಕೃಷ್ಣ.
ಭಾವನಾ ಬಳಗ ಸುಳ್ಯ.

ವೇದಿಕೆಯಲ್ಲಿ ಸುಮಾರು 45 ವಿದ್ಯಾರ್ಥಿಗಳು ತಮ್ಮ ಪ್ರೌಢಿಮೆಯಿಂದಲೇ ಕಾರ್ಯಕ್ರಮ ಯಶಸ್ವಿಗೊಳಿಸಿದನ್ನು ಕಣ್ಣಲ್ಲಿ ಕಂಡವರಿಗೆ ಮಾತ್ರ ವರ್ಣಿಸಲು ಸಾಧ್ಯ. ಪದಗಳಲ್ಲಿ ಅದನ್ನು ವರ್ಣಿಸಲು ಅಸಾಧ್ಯ.

ಶ್ರೀ ಚಂದ್ರಶೇಖರ ಪೇರಾಲು
ಅಧ್ಯಕ್ಷರು ಕ. ಸಾ. ಪ. ಸುಳ್ಯ ಘಟಕ.

ಮಕ್ಕಳ ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗದೆ ಅರ್ಥಪೂರ್ಣವಾಗಿ ನಡೆಯಿತು ಈ ಸಮ್ಮೇಳನವು ನಮ್ಮ ನಿರೀಕ್ಷೆಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಿತು.

ಶ್ರೀ ಪ್ರಕಾಶ್ ಮೂಡಿತ್ತಾಯ
ಉಪ ಪ್ರಾಂಶುಪಾಲರು ಸರಕಾರಿ ಪದವಿ ಪೂರ್ವ ಕಾಲೇಜು , ಸುಳ್ಯ.

ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ನಡೆದ ಸಮ್ಮೇಳನ ನಿಜವಾಗಿ ಒಂದು ಆದರ್ಶಮಯ ಕಾರ್ಯಕ್ರಮ. ಶಿಸ್ತು ಮತ್ತು ಸಮಯ ಪಾಲನೆ ಮಕ್ಕಳಿಂದ ನೋಡಿ ಹಿರಿಯರೂ ಕಲಿಯುವಂತಿತ್ತು.

ಶ್ರೀಮತಿ ಚಂದ್ರಾವತಿ ಬಡ್ಡಡ್ಕ
ಅಧ್ಯಕ್ಷರು ಕ.ಸಾ.ಪ ಸುಳ್ಯ ಹೋಬಳಿ ಘಟಕ.

NO COMMENTS

error: Content is protected !!
Breaking