ಸುಳ್ಯದ ಮಾಲಿನಿಪ್ರಸಾದ್ ಸೇರಿ 13 ಮಂದಿ ಅವಿರೋಧ ಆಯ್ಕೆ
6 ಸ್ಥಾನಕ್ಕೆ 8 ಮಂದಿ ಕಣದಲ್ಲಿ-ಸುಳ್ಯದವರು ಮೂವರು
ಅಡಿಕೆ ಬೆಳೆಗಾರರ ಅಂತಾರಾಜ್ಯ ಸಹಕಾರ ಸಂಸ್ಥೆಯಾದ ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯ ಆಡಳಿತ ಮಂಡಳಿಗೆ ನ.23 ರಂದು ಚುನಾವಣೆ ನಡೆಯಲಿದೆ.
ಒಟ್ಟು 19 ನಿರ್ದೇಶಕ ಸ್ಥಾನವಿರುವ ಕ್ಯಾಂಪ್ಕೊ ಸಂಸ್ಥೆಯಲ್ಲಿ ಕೇರಳದಿಂದ 9 ಮಂದಿ ನಿರ್ದೇಶಕರು, ಕರ್ನಾಟಕದಿಂದ 10 ಮಂದಿ ನಿರ್ದೇಶಕರು ಆಯ್ಕೆಯಾಗಬೇಕಾಗಿದೆ. 19 ಸ್ಥಾನಗಳಿಗೆ 30 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ನ.18ರಂದು ಅವರಲ್ಲಿ ಕೇರಳದ ಒಂಬತ್ತು ಮಂದಿ ಮಾತ್ರ ಕಣದಲ್ಲುಳಿದುದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.
ಕರ್ನಾಟಕದಿಂದ ಮಹಿಳಾ ಸ್ಥಾನಕ್ಕೆ ಸ್ಪರ್ಧಿಸಿದ್ದವರಲ್ಲಿ ಡಾ| ಕಲ್ಲಡ್ಕ ಪ್ರಭಾಕರ ಭಟ್‌ರವರ ಪತ್ನಿ ಡಾ| ಕಮಲ
ಭಟ್ ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ, ಸುಳ್ಯ ತಾಲೂಕು ಕಳಂಜ ಗ್ರಾಮದವರಾದ ಬಿಜೆಪಿ ಮುಖಂಡ ಪಿ.ಜಿ.ಎಸ್.ಎನ್. ಪ್ರಸಾದ್‌ರವರ ಧರ್ಮಪತ್ನಿ ಹಾಗೂ ಕಳಂಜ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಮಾಲಿನಿ ಪ್ರಸಾದ್ ರವರು
ಕ್ಯಾಂಪ್ಕೋ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು.
ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗಣೇಶ್ ಇಡ್ಕಿದು ಮತ್ತು ಸೊಸೈಟಿ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶಿವಮೊಗ್ಗದ ರಾಘವೇಂದ್ರ ಎಚ್.ಎಂ. ಮತ್ತು ಉತ್ತರ ಕನ್ನಡದ ವಿಶ್ವನಾಥ ಈಶ್ವರ ಹೆಗಡೆಯವರುಗಳು ಅವಿರೋಧವಾಗಿ ಆಯ್ಕೆಯಾದರು.
ಇನ್ನು ಜನರಲ್ ಕ್ಷೇತ್ರದಿಂದ 6 ಮಂದಿ ಆಯ್ಕೆಯಾಗಬೇಕಾಗಿದ್ದು, 8 ಮಂದಿ ಕಣದಲ್ಲಿದ್ದಾರೆ. ಸಂಘ ಪರಿವಾರದ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸುಳ್ಯ ತಾಲೂಕಿನವರಾದ ಎಲಿಮಲೆಯ ಎ.ವಿ. ತೀರ್ಥರಾಮ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ಜವಾಬ್ದಾರಿ ಸ್ಥಾನದಲ್ಲಿರುವ ಕಲ್ಮಡ್ಕದ ಮುರಳಿಕೃಷ್ಣ ಕೆ.ಎನ್. ಚಳ್ಳಂಗಾರು, ಕ್ಯಾಂಪ್ಕೊ ಮಾಜಿ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ, ಪುರುಷೋತ್ತಮ ಭಟ್, ದಯಾನಂದ ಹೆಗ್ಡೆ, ಮಹೇಶ್ ಚೌಟ, ಸ್ವತಂತ್ರ ಅಭ್ಯರ್ಥಿಗಳಾದ ಸುಳ್ಯ ಕುಕ್ಕುಜಡ್ಕದ ಎಂ.ಜಿ. ಸತ್ಯನಾರಾಯಣ ಮತ್ತು ಪುತ್ತೂರಿನವರಾದ ರಾಮ್ ಪ್ರತೀಕ್ ಕಣದಲ್ಲಿದ್ದಾರೆ.
ಕೇರಳ ರಾಜ್ಯದ ಪರವಾಗಿ ಸತೀಶ್ಚಂದ್ರ ಭಂಡಾರಿ, ಸೌಮ್ಯ, ಸದಾನಂದ ಶೆಟ್ಟಿ , ವಿವೇಕಾನಂದ ಗೌಡ, ಸತ್ಯನಾರಾಯಣ ಪ್ರಸಾದ್, ರಾಧಾಕೃಷ್ಣ, ಗಣೇಶ್ ಕುಮಾರ್, ವೆಂಕಟ್ರಮಣ ಭಟ್ ಹಾಘೂ ಪದ್ಮರಾಜ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನ.೨೩ರಂದು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಮತದಾನ ನಡೆಯಲಿದೆ.

























