ಕುಣಿತ ಭಜನೆಗೆ ಹೆಜ್ಜೆ ಹಾಕಿದ ಸಾವಿರಾರು ಭಜಕರು
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ನಿನ್ನೆ ರಾತ್ರಿ ವೈಭವದ ಲಕ್ಷದೀಪೋತ್ಸವ ನೆರವೇರಿತು.
ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ದೇವಸ್ಥಾನದ ಅರ್ಚಕರು ಉತ್ಸವದ ವಿಧಿ ವಿಧಾನ ನೆರವೇರಿಸಿದರು.

ಕುಕ್ಕೆ ಸುಬ್ರಹ್ಮಣ್ಯದ ಹಲವೆಡೆ ಬೆಳಗುದ ಲಕ್ಷ ಹಣತೆ ದೀಪದ ನಡುವೆ ಭಕ್ತರ ಪರಾಕುಗಳೊಂದಿಗೆ ಶ್ರೀ ದೇವರ ಲಕ್ಷದೀಪೋತ್ಸವ ರಥೋತ್ಸವ ನೆರವೇರಿತು. ಈ ಮೂಲಕ ಶ್ರೀ ದೇವರ ರಥಬೀದಿ ಉತ್ಸವ ಆರಂಭವಾಯಿತು.
ಇದಕ್ಕೂ ಪೂರ್ವದಲ್ಲಿ ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಂಕೃತ ರಂಗಪೂಜೆ ನಡೆಯಿತು. ಬಳಿಕ ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಅದರಲ್ಲಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ನೆರವೇರಿತು. ಮಹಾಪೂಜೆಯ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವ ಆರಂಭವಾಯಿತು.
ಆಕರ್ಷಕ ಸಾಲುದೀಪಗಳ ನಡುವೆ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ಮತ್ತು ವಿವಿಧ ಸಂಗೀತ ವಾದ್ಯಗಳ ಸುತ್ತುಗಳು ನೆರವೇರಿತು.

ಹೊರಾಂಗಣ ಉತ್ಸವದ ಬಳಿಕ ರಥಬೀದಿಗೆ ಆಗಮಿಸಿದ ಶ್ರೀ ದೇವರು ಪಂಚ ಶಿಖರಗಳನ್ನಳಗೊಂಡ ಚಂದ್ರಮಂಡಲ ರಥದಲ್ಲಿ ಆರೂಢರಾಗಿ ಪೂಜೆ ಸ್ವೀಕರಿಸಿದರು. ಬಳಿಕ ಶ್ರೀ ದೇವಳದಿಂದ ಕಾಶಿಕಟ್ಟೆ ತನಕ ಉತ್ಸವ ನೆರವೇರಿತು. ಗುರ್ಜಿ ಪೂಜೆ ನೆರವೇರಿತು. ಶ್ರೀ ದೇವರು ಚಂದ್ರಮಂಡಲ ರಥದಲ್ಲಿ ಕಾಶಿಕಟ್ಟೆಗೆ ಆಗಮಿಸುವುದು ಕೇವಲ ಲಕ್ಷ ದೀಪೋತ್ಸವದ ದಿನ ಮಾತ್ರ ಅನ್ನುವುದು ವಿಶೇಷ.















ಇದೇ ಸಂದರ್ಭದಲ್ಲಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ಸಿಡಿಮದ್ದು ಪ್ರದರ್ಶನಗೊಂಡಿತು.
ಕುಣಿತ ಭಜನೆ :
ಲಕ್ಷದೀಪೋತ್ಸವದ ಅಂಗವಾಗಿ ನೂರಾರು ಭಜನಾ ತಂಡಗಳಿಂದ ಕುಣಿತ ಭಜನೆ ನೆರವೇರಿತು. ಖ್ಯಾತ ಗಾಯಕ ರವೀಂದ್ರ ಪ್ರಭು ಮತ್ತು ತಂಡ ಭಜನೆಗಳನ್ನು ಹಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು ಈ ಸಂದರ್ಭದಲ್ಲಿದ್ದರು.
ಶಾಸಕಿ ಕು. ಭಾಗೀರಥಿ ಮುರುಳ್ಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಸೇರಿದಂತೆ ಗಣ್ಯರು ಕೂಡಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಸುಬ್ರಹ್ಮಣ್ಯದ ಭಜಕರಾದ ಗಣೇಶ್ ಪರ್ವತಮುಖಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಲಕ್ಷ ದೀಪೋತ್ಸವ ಮತ್ತು ಕುಣಿತ ಭಜನೆ ಕಾರ್ಯಕ್ರಮವನ್ನು ಸುದ್ದಿ ಚಾನೆಲ್ ನೇರ ಪ್ರಸಾರ ಮಾಡಿತು.










