ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ

0

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 108 ನೇ ಜನ್ಮ ದಿನವನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನ.11ರಂದು ಬ್ಲಾಕ್ ಅಧ್ಯಕ್ಷರಾದ ಪಿ. ಸಿ. ಜಯರಾಮರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ನಂದರಾಜ್ ಸಂಕೇಶ್ ರವರು ಮಾತನಾಡಿ ಮಾಜಿ ಪ್ರಧಾನಿ ಇಂದಿರಾ ಗಾಂಧೀಯವರು ಕೈಗೊಂಡಷ್ಟು ಜನಪರ ಕಾರ್ಯಕ್ರಮಗಳು ಬೇರೆ ಯಾರಿಂದಲೂ ಮಾಡಲು ಸಾಧ್ಯವಾಗಿಲ್ಲ, ದಲಿತರಿಗೆ ಅವರು ನೀಡಿದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್ ಮಾತನಾಡಿ ಇಂದಿರಾಜೀಯವರು ವಿಶ್ವದಲ್ಲೇ ಧೀಮಂತ ಮತ್ತು ಕೆಚ್ಚೆದೆಯ ನಾಯಕಿಯಾಗಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಸಹ ಪಾಕಿಸ್ಥಾನದಿಂದ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿದ್ದಕ್ಕಾಗಿ ಇಂದಿರಾ ಗಾಂಧಿಯವರನ್ನು ದುರ್ಗೆ ಎಂದು ಕರೆದಿದ್ದರು ಎಂದು ನೆನಪಿಸಿಕೊಂಡರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಮಾತನಾಡಿ ಇಂದಿರಾ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ನಮ್ಮ ಇಂದಿನ ಪೀಳಿಗೆಗೆ ತಿಳಿಹೇಳುವ ಅವಶ್ಯಕತೆ ಇದೆ, ದೇಶದ ಪ್ರಧಾನಿಯಾಗಿ ಅವರು ಕೈಗೊಂಡ ಜನಪರ ಕಾರ್ಯಗಳು ಪ್ರಾತಃಸ್ಮರಣೀಯ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ ರವರು ಮಾತನಾಡಿ ದಿವಂಗತ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳಲ್ಲಿ ಗರೀಬಿ ಹಠಾವೋ, ಬ್ಯಾಂಕುಗಳ ರಾಷ್ಟ್ರೀಕರಣ, ಉಳುವವನೇ ಹೊಲದೊಡೆಯ, ಜೀತ ಪದ್ಧತಿ ನಿರ್ಮೂಲನೆ ಹಾಗೂ ದಲಿತರಿಗೆ ದೇಗುಲಗಳ ಒಳಗೆ ಪ್ರವೇಶ ಮುಂತಾದ ಯೋಜನೆಗಳಿಂದ ದೇಶದ ಜನರಿಗೆ ಆದ ಪ್ರಯೋಜನಗಳನ್ನು ವಿವರಿಸಿದರು. ಇಂದಿರಾ ಗಾಂಧಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಪಕ್ಷವನ್ನು ಕಟ್ಟುವಲ್ಲಿ ನಾವೆಲ್ಲ ಒಗ್ಗೂಡೋಣ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ವಂದಿಸಿದರು.

ಪಕ್ಷದ ಮುಖಂಡರುಗಳಾದ ದಿನೇಶ್ ಅಂಬೆಕಲ್ಲು, ಮಹಮ್ಮದ್ ಪವಾಜ್, ಭವಾನಿಶಂಕರ್ ಕಲ್ಮಡ್ಕ, ಜತ್ತಪ್ಪ ಗೌಡ (ಶರವು), ಸಿದ್ದೀಕ್ ಕೋಕೋ, ಶಹೀದ್ ಪಾರೆ, ಡೇವಿಡ್ ಧೀರ ಕ್ರಾಸ್ತಾ, ರಿಯಾಜ್ ಕಟ್ಟೆಕಾರ್, ಕೇಶವ ಮೊರಂಗಲ್ಲು ಮತ್ತು ಇಬ್ರಾಹಿಂ ಉಪಸ್ಥಿತರಿದ್ದರು.