ನೆಟ್ಟಾರು : ಅಂಗನವಾಡಿ ಎಲ್ ಕೆ. ಜಿ, ಯು. ಕೆ. ಜಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

0

ನೆಟ್ಟಾರು ಅಂಗನವಾಡಿ ಕೇಂದ್ರದ ಎಲ್. ಕೆ. ಜಿ ಮತ್ತು ಯು. ಕೆ. ಜಿ. ಮಕ್ಕಳಿಗೆ ಆರ್ ಕೆ ಭಟ್ ಕುರುಂಬುಡೇಲು ರವರು ಉಚಿತವಾಗಿ ನೀಡಿದ ಸಮವಸ್ತ್ರ ವಿತರಣಾ ಕಾರ್ಯಕ್ರಮವು ನ.24ರಂದು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ನೆಟ್ಟಾರು ಅಧ್ಯಕ್ಷರಾದ ಶ್ರೀಮತಿ ರಂಜಿತಾ ಅಶೋಕ್ ವಹಿಸಿದ್ದರು.

ಅತಿಥಿಗಳಾಗಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ಆರ್. ಕೆ .ಭಟ್ ಕುರುಂಬುಡೇಲು ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿ, ಶೈಕ್ಷಣಿಕವಾಗಿ ಮಕ್ಕಳು ಬೆಳೆಯಬೇಕು ಅದಕ್ಕೆ ಪೂರಕವಾದ ವಾತಾವರಣ ಈಗಿನ ಕಾಲದಲ್ಲಿ ಇದೆ. ನಾವು ಸಹ ವಿದ್ಯಾಭ್ಯಾಸ ಮಾಡುತ್ತಿರುವಾಗ ಯಾವುದೋ ರೀತಿಯಲ್ಲಿ ಸಹಾಯ ಪಡೆದಿರಬಹುದು ಅದರ ಋಣ ತೀರಿಸುವ ಕೆಲಸವನ್ನಷ್ಟೇ ನಾನು ಮಾಡಿದ್ದೇನೆ ಎಂದು ಹೇಳಿ ಮಕ್ಕಳಿಗೆ ಶುಭಹಾರೈಸಿದರು.

ಅಕ್ಷಯ ಯುವಕ ಮಂಡಲದ ಅಧ್ಯಕ್ಷರಾದ ಭಾಸ್ಕರ ನೆಟ್ಟಾರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ನಳಿನಾಕ್ಷಿ ಮಾತನಾಡಿ ಉತ್ತಮ ಗುಣಮಟ್ಟದ ಸಮವಸ್ತ್ರ ದಾನಿಗಳಾದ ಆರ್ ಕೆ ಭಟ್ ರವರು ಮಕ್ಕಳಿಗೆ ನೀಡಿದ್ದಾರೆ. ಅಷ್ಟೇ ಗುಣಮಟ್ಟದ ಶಿಕ್ಷಣ ಪಡೆದು ದೇಶದ ಒಳ್ಳೆಯ ಪ್ರಜೆಗಳಾಗಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು,ಅಕ್ಷಯ ಯುವಕ ಮಂಡಲ ಪದಾಧಿಕಾರಿಗಳು, ಬಾಲವಿಕಾಸ ಸಮಿತಿ ಸದಸ್ಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಜರಿದ್ದರು. ನೆಟ್ಟಾರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಸ್ವಾಗತಿಸಿ ಧನ್ಯವಾದವಿತ್ತರು. ಶೈಲೇಶ್ ನೆಟ್ಟಾರು ನಿರೂಪಿಸಿದರು.