ನ್ಯಾಯಾಲಯದಲ್ಲಿ ಆರೋಪ ಸಾಬೀತು, ಆರೋಪಿ ಮರ್ಕಂಜದ ವ್ಯಕ್ತಿಗೆ ಜೈಲು ಶಿಕ್ಷೆ ಆದೇಶ
ಸುಳ್ಯ ತಾಲೂಕು ಕೆಮ್ರಾಜೆ ಗ್ರಾಮದ ಗಿರೀಶ ಎಂಬವರು 2017 ನ.03ರಂದು ಪರಿಶಿಷ್ಟ ಜಾತಿಗೆ ಸೇರಿದ ಮರ್ಕಂಜ ಗ್ರಾಮದ ಗುಂಡಿಮಜಲು ನಿವಾಸಿ ಅಂಗಾರೆ ಇವರು ಕುಡಿಯಲು ಮತ್ತು ಗೃಹ ಬಳಕೆಗಾಗಿ ಶೇಖರಿಸಿಟ್ಟ ನೀರಿನ ಬ್ಯಾರೆಲ್‌ನಲ್ಲಿ ಮಲವಿಸರ್ಜನೆ ಮಾಡಿ ನೀರನ್ನು ಮಲಿನ ಗೊಳಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಇದನ್ನು ವಿಚಾರಿಸಲು ಬಂದ ಅಂಗಾರೆ ಮತ್ತು ಅವರ ಗಂಡನಿಗೆ ಜಾತಿನಿಂದನೆ ಮಾಡಿ ಬೈದು ಅವಮಾನ ಮಾಡಿ ದೌರ್ಜನ್ಯ ಎಸಗಿದ್ದರಿಂದ ಆರೋಪಿಯ ವಿರುದ್ಧ ಪ.ಜಾ ಮತ್ತು ಪ.ಪ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಅಂದಿನ ಈ ಪ್ರಕರಣದಲ್ಲಿ ಪುತ್ತೂರು ಉಪವಿಭಾಗದ ಪೋಲೀಸ್ ಉಪಾಧೀಕ್ಷಕರಾಗಿದ್ದ ಶ್ರೀನಿವಾಸ್.ಬಿ.ಎಸ್ ರವರು ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ಪುತ್ತೂರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.















ಈ ಪ್ರಕರಣಗಳಲ್ಲಿ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳ ಸಾಕ್ಷ್ಯವನ್ನು ಪರಿಶೀಲಿಸಿ ಹಾಗೂ ವಾದ ವಿವಾದವನ್ನು ಆಲಿಸಿ ನೊಂದ ಪಿರ್ಯಾಧಿದಾರರ ಸಾಕ್ಷ್ಯವನ್ನು ಪ್ರಮುಖವಾಗಿ ಪರಿಗಣಿಸಿ ಆರೋಪಿತ ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ಮಂಗಳೂರು(ಪೀಠಾಸೀನ ಪುತ್ತೂರು) ಇಲ್ಲಿನ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ ಇವರು ನ.27 ರಂದು ಆರೋಪಿ ಗಿರೀಶ ರಿಗೆ 6 ತಿಂಗಳ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಅಭಿಯೋಜನೆಯ ಪರವಾಗಿ ಶ್ರೀಮತಿ ಜಯಂತಿ. ಕೆ. ಭಟ್ ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.










