ಸುಬ್ರಹ್ಮಣ್ಯ ಗ್ರಾ.ಪಂ ನಲ್ಲಿ ಮಕ್ಕಳ ಗ್ರಾಮ ಸಭೆ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕುಮಾರಧಾರ ಸಭಾಂಗಣದಲ್ಲಿ ಡಿ.4 ರಂದು ಮಕ್ಕಳ ಗ್ರಾಮ ಸಭೆ ನಡೆಯಿತು.
ಸಭಾಧ್ಯಕ್ಷತೆಯನ್ನು ಏನೆಕಲ್ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ರಜಿತ್ ವಹಿಸಿದ್ದರು.ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ, ಗ್ರಾಮ ಪಂಚಾಯತ್ ಸದಸ್ಯರು, ಹಾಗೂ ಮಾಹಿತಿ ನೀಡಲು ಆಗಮಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಯಶವಂತ ರೈ ಉಪಸ್ಥಿತರಿದ್ದರು. ಸ್ಥಳೀಯ ವಿದ್ಯಾ ಸಂಸ್ಥೆಗಳಾದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು, ಏನೆಕಲ್ಲು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು, ಐನೆಕಿದು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸಭೆಯಲ್ಲಿ ಹಾಜರಿದ್ದರು. ಮುಖ್ಯವಾಗಿ ಶುಚಿತ್ವದ ಕಡೆ ಗಮನಹರಿಸುವುದು, ರಸ್ತೆಯಲ್ಲಿ ಬ್ಯಾರಿ ಕೇಡ್ ಅಳವಡಿಸುವ ಬಗ್ಗೆ, ಸರಕಾರಿ ಶಾಲೆಗಳಿಗೆ ಹೆಚ್ಚುವರಿ ಶೌಚಾಲಯದ ಬಗ್ಗೆ ಹಾಗೂ ಅಗತ್ಯ ಸೌಕರ್ಯಗಳ ಬಗ್ಗೆ ವಿದ್ಯಾರ್ಥಿಗಳು ಗಮನಸೆಳೆದರು. ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಎಂದು ಫಲಕವಿದ್ದರೂ ಇನ್ನೂ ಕೂಡ ಸರಿಯಾಗಿ ಕಾರ್ಯಗತವಾಗದ ಬಗ್ಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳು ಬಂದವು. ರಸ್ತೆ ಗಳಲ್ಲಿ ಬೇಕಾ ಬಿಟ್ಟಿಯಾಗಿ ತಿರುಗಾಡುತ್ತಿರುವ ಜಾನುವಾರುಗಳು,ನಾಯಿ ಇತ್ಯಾದಿಗಳನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದರು. ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ ಅವರು ಎಲ್ಲವನ್ನು ಹಂತ ಹಂತವಾಗಿ ಕ್ರಮ ಕೈಗೊಂಡು ನೆರವೇರಿಸುತ್ತೇವೆಂದು ಭರವಸೆಯನ್ನು ನೀಡಿದರು.