ಜ್ಞಾನ ಧಾರೆಯೆರೆದ ಹೆಮ್ಮೆಯ ವಿದ್ಯಾ ಸಂಸ್ಥೆಗೆ ಅಮೃತ ಪಥದ ಸಂಭ್ರಮ

0

✍🏻 ಲತಾಶ್ರೀ ಎಸ್.

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಪಂಜ ಒಂದು ಹೋಬಳಿ ಕೇಂದ್ರವಾಗಿದೆ. ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಬಳಿ ಇರುವ ಐತಿಹಾಸಿಕ ಕೋಟಿ ಚೆನ್ನಯ್ಯ ಆರಾಧನೆಗೆ ಪ್ರಸಿದ್ಧಿಯಾಗಿರುವ ಈ ಪರಿಸರದಲ್ಲಿ 1951ನೇ ಜೂನ್ 5ರಂದು ಸರ್ಕಾರಿ ಪ್ರೌಢಶಾಲೆ ಪಂಜ ಸ್ಥಾಪಿತಗೊಂಡು ಪಂಜ ಇತಿಹಾಸದಲ್ಲಿ ಸ್ವರ್ಣಾಕ್ಷರದ ದಿನವಾಯಿತು.

ಸಂತಾನ್ ಡಿ’ಮೆಲ್ಲೋ , ಜಾಕೆ ಪರಮೇಶ್ವರ ಗೌಡ ,ಸುಬ್ಬಯ್ಯ ಶೆಟ್ಟಿ ಕೇನ್ಯ ಮೊದಲ್ಗೊಂಡು ಅನೇಕ ಊರ ಪರ ಊರ ವಿದ್ಯಾಭಿಮಾನಿಗಳ ಕನಸು ನನಸಾಗಿ ಸರ್ಕಾರಿ ಪ್ರೌಢಶಾಲೆ ಆರಂಭಗೊಂಡಿತು. ತದನಂತರ 1982 ರಲ್ಲಿ ಈ ಸಂಸ್ಥೆಯು ಪದವಿಪೂರ್ವ ಕಾಲೇಜು ಆಗಿ ಉನ್ನತಿ ಗೊಂಡಿರುವುದು ಪಂಜ ಪರಿಸರಕ್ಕೆ ಮತ್ತಷ್ಟು ಮೆರುಗನ್ನು ಹೆಚ್ಚಿಸಿತು. ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ ಧಾರೆಯನ್ನು ಎರೆದು ಬದುಕಿಗೊಂದು ಅರ್ಥ ಕಲ್ಪಿಸಿಕೊಟ್ಟ ಈ ವಿದ್ಯಾಸಂಸ್ಥೆಗೆ ಇದೀಗ 75ರ ಹರೆಯ. ಶಿಕ್ಷಣ ,ಕ್ರೀಡೆ, ಸಾಂಸ್ಕೃತಿಕ ,ಸಾಮಾಜಿಕ ,ರಾಜಕೀಯ ,ಧಾರ್ಮಿಕ ಹೀಗೆ ಇನ್ನಿತರ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆಯನ್ನು ಮಾಡಿ ರಾಜ್ಯ , ರಾಷ್ಟ್ರ ,ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಗಳಿಸಿದ ಅನೇಕ ಸಾಧಕರಲ್ಲಿ ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಇರುವುದು ಅತ್ಯಂತ ಹೆಮ್ಮೆ ಪಡುವ ಸಂಗತಿಯಾಗಿದೆ.

ಸುಮಾರು 21 ಎಕರೆಯಷ್ಟು ವಿಶಾಲ ಜಾಗವನ್ನು ಹೊಂದಿದ ತಾಲೂಕಿನ ಅತ್ಯಂತ ಹೆಚ್ಚು ವಿಸ್ತೀರ್ಣವಿರುವ ಏಕೈಕ ಶಾಲೆ ಇದಾಗಿದೆ. ಜೊತೆಗೆ 2010- 11 ರಲ್ಲಿ ಉದಾರದಾನಿಗಳ , ಸಂಘ – ಸಂಸ್ಥೆಗಳ, ಹಾಗೂ ಸರಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸುಸಜ್ಜಿತವಾದ 400 ಮೀಟರ್ ಟ್ರ್ಯಾಕ್ ಇರುವ ತಾಲೂಕಿನ ಏಕೈಕ ಕ್ರೀಡಾಂಗಣವು ಈ ಸಂಸ್ಥೆಯಲ್ಲಿದ್ದು , ತಾಲೂಕು ಮಟ್ಟ, ಜಿಲ್ಲಾಮಟ್ಟ, ವಿಭಾಗ ಮಟ್ಟ, ರಾಜ್ಯಮಟ್ಟ ಹೀಗೆ ಅನೇಕ ಕ್ರೀಡೆಗಳನ್ನು ಸಡಗರ ಸಂಭ್ರಮದಿಂದ ಆಯೋಜಿಸಿದ ಹೆಮ್ಮೆ ಈ ಸಂಸ್ಥೆಗೆ ಇದೆ. ಅಷ್ಟು ಮಾತ್ರವಲ್ಲದೆ ಪ್ರಾರಂಭವಾದಾಗಿನಿಂದ ಇಂದಿನವರೆಗೂ , ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಸೌಲಭ್ಯಗಳು , ಸಾಕಷ್ಟು ಜ್ಞಾನ ಭಂಡಾರವನ್ನು ಹೊಂದಿದ ನುರಿತ ಶಿಕ್ಷಕರು ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಅಗಾಧ ಸಂಪನ್ಮೂಲಗಳನ್ನು ಹೊಂದಿ ನೂರಾರು ವಿದ್ಯಾರ್ಥಿಗಳಿಂದ ರಾರಾಜಿಸುತ್ತಿದ್ದ ಈ ಸಂಸ್ಥೆಯಲ್ಲಿ ಪ್ರಸ್ತುತ ಬೆರಳಿನಿಕೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಕಾರಣವೇನೆಂದು ಒಂದು ಕ್ಷಣ ಯೋಚಿಸಿದಾಗ ಮನದಲ್ಲಿ ಮೂಡುವ ಪ್ರಶ್ನೆಗಳು ಹೀಗಿದೆ, ಪ್ರಸ್ತುತ ದಿನಮಾನಗಳಲ್ಲಿ ಮಾತೃಭಾಷೆ ಕನ್ನಡ ವಾದರೂ, ಅನ್ನದ ಭಾಷೆ ಆಂಗ್ಲ ಭಾಷೆಯಾಗಿದೆ ಆದುದರಿಂದ ಆಂಗ್ಲ ಭಾಷೆಯ ಪ್ರಭಾವಕ್ಕೆ ಒಳಗಾಗಿ ಕನ್ನಡ ಮಾಧ್ಯಮದ ಶಾಲೆಯನ್ನು ತ್ಯಜಿಸಿರುವುದೇ? ಅಥವಾ ಪಂಜ ಪರಿಸರ ಸೇರಿದಂತೆ ಆಸುಪಾಸಿನ ಗ್ರಾಮಗಳಲ್ಲಿ ನಂತರದಲ್ಲಿ ಪ್ರಾರಂಭಗೊಂಡಂತಹ ಶಾಲೆಗಳಿರಬಹುದೇ? ಅಥವಾ ಬೇರೆ ಕಾರಣಗಳೇನಿರಬಹುದು?ತಿಳಿಯದು. ಅದೇನೇ ಇರಲಿ ಪ್ರಸ್ತುತ ವಾಗಿಯೂ ಈ ಶಾಲೆ ಅಗಾಧ ಸಂಪನ್ಮೂಲಗಳ ಜೊತೆಗೆ ಮತ್ತಷ್ಟು ಅಭಿವೃದ್ಧಿಯನ್ನು ಕಂಡಿದ್ದು ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವುದರ ಜೊತೆಗೆ ನುರಿತ ಅಧ್ಯಾಪಕರ ಬಳಗವನ್ನು ಹೊಂದಿರುವ ಶಾಲೆ ಇದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇಂತಹ ಅದ್ಭುತ ಇತಿಹಾಸವನ್ನು ಹೊಂದಿದ ಈ ಶಾಲೆ 75 ವರ್ಷಗಳನ್ನು ಪೂರೈಸಿ ಮತ್ತೊಂದು ಇತಿಹಾಸವನ್ನು ದಾಖಲಿಸಲು ಮುಂದಾಗಿರುವುದು ಹೆಮ್ಮೆಯ ವಿಚಾರ. 1951 ರಲ್ಲಿ ಪ್ರಾರಂಭಗೊಂಡ ಈ ವಿದ್ಯಾಸಂಸ್ಥೆ ಇದೇ ತಿಂಗಳ 28ನೇ ತಾರೀಕಿನಂದು ‘ ಅಮೃತ ಪಥ’ ಎನ್ನುವ ನಾಮದೊಂದಿಗೆ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಳ್ಳಲು ಸಿದ್ಧವಾಗಿದೆ. ಈ ಶುಭ ಸಂದರ್ಭದಲ್ಲಿ ಪಂಜ ಪರಿಸರ ಮತ್ತೊಂದು ಸಿಹಿಸುದ್ದಿಯನ್ನು ಪಡೆದುಕೊಂಡಿದೆ ಅದುವೆ ಘನ ಕರ್ನಾಟಕ ಸರ್ಕಾರವು ಈ ವಿದ್ಯಾಸಂಸ್ಥೆಯನ್ನು ಕೆಪಿಎಸ್ ಆಗಿ ಪರಿವರ್ತನೆ ಮಾಡಲು ಮಂಜೂರು ಮಾಡಿದ್ದು ಅಮೃತ ಮಹೋತ್ಸವದ ಸಡಗರವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ಧಾರೆಯನ್ನು ನೀಡಿ ಭವಿಷ್ಯ ರೂಪಿಸಿಕೊಳ್ಳಲು ಸಾಕ್ಷಿಯಾದ ಈ ವಿದ್ಯಾಸಂಸ್ಥೆಗೆ ಪ್ರಜ್ಞಾವಂತ ನಾಗರೀಕರಾದ ಎಲ್ಲರೂ ಪ್ರೋತ್ಸಾಹ ,ಅಭಿಮಾನ ಸದಾ ನೀಡೋಣ ಆ ಮೂಲಕ ಸಂಸ್ಥೆಯ ಕೀರ್ತಿ ಬಾನೆತ್ತರಕ್ಕೆ ತಲುಪಲಿ ಎನ್ನುವ ಹಾರೈಕೆ ನನ್ನದು.

2011- 12 ರಿಂದ 2013- 14ರ ಶೈಕ್ಷಣಿಕ ಸಾಲಿನಲ್ಲಿ ನಾನು ಈ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಇದೇ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ನನ್ನ ಸೌಭಾಗ್ಯವೇ ಎಂದರು ತಪ್ಪಾಗಲಾರದು ಇಂತಹ ಅವಕಾಶವನ್ನು ನನಗೆ ನೀಡಿದ ನನ್ನ ಹೆಮ್ಮೆಯ ವಿದ್ಯಾಸಂಸ್ಥೆಗೆ ನಾನು ಸದಾ ಆಭಾರಿಯಾಗಿರುತ್ತೇನೆ.

🖊 ಲತಾಶ್ರೀ ಎಸ್
ಅತಿಥಿ ಶಿಕ್ಷಕಿ
ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಪಂಜ