ಬೆಳ್ಳಾರೆಯ ಯುವ ಉದ್ಯಮಿ ಮತ್ತು ಕ್ರೃೆಂ ಎಸ್.ಐ. ಮಧ್ಯೆ ಚಕಮಕಿ

0

 

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ – ಪುತ್ತೂರು ಮಹಿಳಾ ಠಾಣೆಗೆ ದೂರು

ಪೋಲೀಸ್ ಇಲಾಖೆಗೂ ಪೀಕಲಾಟ

ಅಕ್ಟೋಬರ್ 2 ರಂದು ಬೆಳ್ಳಾರೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ರಂಗುರಂಗಾಗಿ ಪ್ರಸಾರವಾಗುತ್ತಿರುವ ಕಾರಣದಿಂದ ಸಂಬಂಧಿಸಿದ ಮನೆಯವರು ಪುತ್ತೂರಿನ ಮಹಿಳಾ ಪೋಲೀಸ್ ಠಾಣೆಗೆ ದೂರು ನೀಡಿ ಅಪಪ್ರಚಾರ ತಡೆಗಟ್ಟಬೇಕೆಂದು ವಿನಂತಿಸಿಕೊಂಡಿರುವ ಹಾಗೂ ಪ್ರಕರಣದಲ್ಲಿ ಪೋಲೀಸ್ ಅಧಿಕಾರಿಯೇ ಇರುವುದರಿಂದ ಪೋಲೀಸ್ ಇಲಾಖೆ ಪೀಕಲಾಟಕ್ಕೆ ಸಿಲುಕಿರುವ ಘಟನೆ ವರದಿಯಾಗಿದೆ.
ಬೆಳ್ಳಾರೆ ಕ್ರೈಂ ಎಸ್.ಐ. ಆನಂದರಿಗೂ, ಬೆಳ್ಳಾರೆಯ ಯುವ ಉದ್ಯಮಿ ನವೀನ್ ಎಂಬವರಿಗೂ ಅ.2 ರಂದು ಸಂಜೆ 7 ಗಂಟೆ ಸುಮಾರಿಗೆ ಚಕಮಕಿ ನಡೆದಿತ್ತು. ನವೀನರು ಆನಂದರಿಗೆ ಹೊಡೆದಿದ್ದಾರೆ ಎಂದು ಊರಿಡೀ ಪ್ರಚಾರವಿದೆ. ಆದರೆ ಹೊಡೆದಿಲ್ಲ – ಚಕಮಕಿ ನಡೆದಿದೆ ಎಂದು ಆನಂದರು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆನ್ನಲಾಗಿದೆ.
ಆನಂದರು ತನ್ನ ಮಿತ್ರರೊಬ್ಬರಿಗೆ ಬಾಡಿಗೆ ಕೊಠಡಿ ಕೊಡಿಸಲು ಹೋಗಿದ್ದರೆಂದೂ, ಆ ವಸತಿ ಗೃಹದ ಮಾಲಕರ ಸೊಸೆ ಕೊಠಡಿ ತೋರಿಸಲು ಹೋದರೆಂದೂ, ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಆಕೆಯ ಪತಿ ತಪ್ಪಾಗಿ ತಿಳಿದು ಹಲ್ಲೆ ನಡೆಸಲು ಮುಂದಾದರೆಂದೂ ಪೋಲೀಸ್ ಅಧಿಕಾರಿ ಮೇಲಧಿಕಾರಿಗಳೊಡನೆ ಹೇಳಿದ್ದಾರೆನ್ನಲಾಗಿದೆ.
ಚಕಮಕಿಯ ಸಂದರ್ಭ ಅಕ್ಕಪಕ್ಕದವರು ಸೇರಿದ್ದರು. ಇದರಿಂದಾಗಿ ವಿಷಯ ಪ್ರಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಮಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕೆಂದು ರಾಜಕೀಯ ಮುಖಂಡೆಯೊಬ್ಬರು ಪುತ್ತೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ. ಬೆಳ್ಳಾರೆಯಲ್ಲಿ ನಿಜವಾಗಿಯೂ ನಡೆದುದೇನೆಂಬ ಬಗ್ಗೆ ವರದಿ ನೀಡುವಂತೆ ಪೋಲೀಸ್ ಉನ್ನತಾಧಿಕಾರಿಗಳು ಬೆಳ್ಳಾರೆ ಪೋಲೀಸ್ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆಗೆ ಕ್ರೈಂ ಎಸ್.ಐ. ಆನಂದರಾಗಲೀ ಯುವ ಉದ್ಯಮಿ ನವೀನರಾಗಲೀ ಲಭ್ಯರಾಗಿಲ್ಲ.