Home Uncategorized ಜಟ್ಟಿಪಳ್ಳವನ್ನು ಬೆಚ್ಚಿ ಬೀಳಿಸಿರುವ ಅಪಘಾತ

ಜಟ್ಟಿಪಳ್ಳವನ್ನು ಬೆಚ್ಚಿ ಬೀಳಿಸಿರುವ ಅಪಘಾತ

0

ತಂದೆ, ಮಗ, ಬಂಧು ಸೇರಿ ಮೂವರ ದಾರುಣ ಅಂತ್ಯ

ಸುಳ್ಯ ಜಟ್ಟಿಪಳ್ಳದ ಹಿರಿಯರಲ್ಲೊಬ್ಬರಾದ ನಿವೃತ್ತ ಪೋಸ್ಟ್ ಮಾಸ್ಟರ್ ಅಣ್ಣು ನಾಯ್ಕ್, ಅವರ ಪುತ್ರ ಪಿಎಫ್ ಕಚೇರಿಯಲ್ಲಿ  ಅಧಿಕಾರಿಯಾಗಿರುವ ಚಿದಾನಂದ ನಾಯ್ಕ್, ಜಟ್ಟಿಪಳ್ಳ ಪರಿಸರದಲ್ಲಿ ಪ್ಲಂಬಿಂಗ್ ಮತ್ತು ಕೃಷಿ ಕಾರ್ಮಿಕರಾಗಿ ಗುರುತಿಸಿಕೊಂಡಿದ್ದ ಉತ್ತಮ ಕೆಲಸಗಾರ ರಮೇಶ್ ನಾಯ್ಕ್ ಇಂದು ಮುಂಜಾನೆ ಪುತ್ತೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವುದು ಜಟ್ಟಿಪಳ್ಳ ಪರಿಸರದ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಅಣ್ಣು ನಾಯ್ಕರವರ ಪತ್ನಿ ರತ್ನಾವತಿಯವರ ತವರು ಮನೆಯಾದ ವಿಟ್ಲದ ದಂಬೆ ಎಂಬಲ್ಲಿ ಗೋಂದೋಳು ಪೂಜೆ ಇದ್ದ ಕಾರಣ ನಿನ್ನೆ ಅವರು ಮತ್ತು ಅವರ ಬಂಧುಗಳೆಲ್ಲ ವಿಟ್ಲಕ್ಕೆ ಹೋಗಿದ್ದರು. ರಘುನಾಥ ಜಟ್ಟಿಪಳ್ಳ, ರಾಮಣ್ಣ ನಾಯ್ಕ್ ಮೊದಲಾದವರು ಗೋಂದೋಳು ಪೂಜೆ ಮುಗಿದ ಕೂಡಲೇ ಮುಂಜಾನೆ ೪ ಗಂಟೆಗೆ ವಿಟ್ಲದಿಂದ ಹೊರಟು ಸುಳ್ಯಕ್ಕೆ ಬಂದರು.

ಹಿರಿಯರಾದ ಅಣ್ಣು ನಾಯ್ಕ್ ಮತ್ತು ರಮೇಶ್ ನಾಯ್ಕರು ಅಣ್ಣು ನಾಯ್ಕರ ಪುತ್ರ ಚಿದಾನಂದರ ಜತೆ ಅವರ ಕಾರಿನಲ್ಲಿ ನಂತರ ಹೊರಟರು. ಅವರ ಕಾರು ಪುತ್ತೂರಿನ ಪರ್ಲಡ್ಕದಲ್ಲಿ ಬರುತ್ತಿರುವಾಗ ನಿದ್ದೆಯ ಮಂಪರಿನ ಕಾರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿತು. ಪರಿಣಾಮವಾಗಿ ಮೂವರೂ ಸ್ಥಳದಲ್ಲೇ ಮೃತಪಟ್ಟರು.

 ಅಣ್ಣು ನಾಯ್ಕರು ಸುಮಾರು ೮೫ ವರ್ಷ ಪ್ರಾಯದವರಾಗಿದ್ದು ಜಟ್ಟಿಪಳ್ಳದ ಹಿರಿಯರಲ್ಲಿ ಒಬ್ಬರಾಗಿ ಜನಪ್ರಿಯರಾಗಿದ್ದರು. ಕೊಡುಗೈ ದಾನಿಯಾಗಿದ್ದ ಅವರು ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಬಳಿಕ ಸುಳ್ಯ ಲ್ಯಾಂಪ್ ಸೊಸೈಟಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮನೆಯಲ್ಲಿ ಅವರು ಮತ್ತು ಅವರ ಪತ್ನಿ ಈ ಇಳಿವಯಸ್ಸಿನಲ್ಲೂ ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆಯಲ್ಲಿ ಸ್ವತಃ ದುಡಿಯುತ್ತಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೆ ಸಹಸ್ರಚಂದ್ರ ದರ್ಶನ ಕಾರ್ಯಕ್ರಮವನ್ನೂ ನಡೆಸಿದ್ದರು.

ಅವರ ಪುತ್ರ ಚಿದಾನಂದ (೫೭ ವರ್ಷ) ರು  ಪ್ರೊವಿಡೆಂಟ್ ಫಂಡ್ ಕಚೇರಿಯಲ್ಲಿ ಸಹಾಯಕ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆಗಾಗ ಜಟ್ಟಿಪಳ್ಳದ ಮನೆಗೆ ಬಂದು ಹೋಗುತ್ತಿದ್ದರು.

 ಜಟ್ಟಿಪಳ್ಳ ಕಾನತ್ತಿಲ ಬಳಿಯ ನಿವಾಸಿ ರಮೇಶ್ ನಾಯ್ಕ್ (೬೭ ವರ್ಷ) ರವರು ನಗರ ಪಂಚಾಯತ್‌ನ ಪ್ಲಂಬರ್ ಜಲೀಲ್ ರವರ ಜತೆಗೆ ಪ್ಲಂಬಿಂಗ್ ಕಾರ್ಯದಲ್ಲಿ ತೊಡಗಿ ಕೊಳ್ಳುತ್ತಿದ್ದರಲ್ಲದೆ, ತೆಂಗಿನ ಮರಕ್ಕೆ ಹತ್ತಿ ಕಾಯಿ ಕೀಳುವ ಉದ್ಯೋಗವನ್ನೂ ಮಾಡುತ್ತಿದ್ದರು. ಜಟ್ಟಿಪಳ್ಳ ಪರಿಸರದಲ್ಲಿ ಈ ಕೆಲಸಕ್ಕೆ ಅನಿವಾರ್ಯ ವ್ಯಕ್ತಿಯಾಗಿ ಅವರು ಜನರ ಪ್ರೀತಿ ಸಂಪಾದಿಸಿದ್ದರು.

ಈ ಮೂವರು ಜಟ್ಟಿಪಳ್ಳ ಪರಿಸರದಲ್ಲಿ ಹೆಚ್ಚು ಪರಿಚಿತರಾಗಿರುವುದರಿಂದ ಏಕಕಾಲದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿರುವುದು ಜನರನ್ನು ಶಾಕ್ ಗೆ ಒಳ ಪಡಿಸಿದೆ. ಅವರ ಮೃತದೇಹಗಳ ಮಹಜರು ಮತ್ತು ಮರಣೋತ್ತರ ಶವ ಪರೀಕ್ಷೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಸಂಜೆಯ ವೇಳೆಗೆ ಪಾರ್ಥಿವ ಶರೀರಗಳನ್ನು ಸುಳ್ಯದ ಮನೆಗೆ ತರುವ ನಿರೀಕ್ಷೆ ಇದೆ.

NO COMMENTS

error: Content is protected !!
Breaking