ಚಾಲಕನಿಗೆ ಶಿಕ್ಷೆ ನೀಡಿದ ನ್ಯಾಯಾಲಯ
ನಾಲ್ಕು ವರ್ಷಗಳ ಹಿಂದೆ ಸಂಪಾಜೆ ಗ್ರಾಮದ ಗಡಿಕಲ್ಲು ಎಂಬಲ್ಲಿ ನಡೆದ ಬಸ್ ಅಪಘಾತದಲ್ಲಿ ಚಾಲಕನ ನಿರ್ಲಕ್ಷ್ಯ ವೆಂದು ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಕಂಡು ಬಂದು, ಚಾಲಕನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿರುವ ಘಟನೆ ವರದಿಯಾಗಿದೆ.
ಆರೋಪಿತ ಸುಭಾಶ್ ರವರು ಬಸ್ಸಿನ ಚಾಲಕರಾಗಿದ್ದು ದಿನಾಂಕ 17.03.2022 ರಂದು ಸಮಯ 12.00 ಗಂಟೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮ ಗಡಿಕಲ್ಲು ಮಾಣಿ- ಮೈಸೂರು ಹೆದ್ದಾರಿ ರಸ್ತೆಯಲ್ಲಿ ಕೆಎ 10 ಎಫ್ 0406 ನಂಬ್ರದ ಕೆಎಸ್ಆರ್ ಟಿಸಿ ಬಸ್ಸನ್ನು ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ರಸ್ತೆಯ ಎಡ ಬದಿಯಲ್ಲೇ ಕಬ್ಬಿಣದ ಸೇಪ್ ಗಾಡ್೯ಗೆ ಢಿಕ್ಕಿಪಡಿಸಿ ಸುಮಾರು 50 ಅಡಿ ಮುಂದೆ ಎಡ ಬದಿಗೆ ಬಸ್ಸು ಚಲಿಸಿ ರಸ್ತೆಯ ಎಡ ಬದಿಯಲ್ಲಿದ್ದ 30 ಅಡಿ ನೀರಿನ ತೋಡಿಗೆ ಬಸ್ಸು ಬಿದ್ದು ಜಖಂಗೊಂಡು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 8 ಜನರಿಗೆ ಸಾದ ಸ್ವರೂಪದ ಗಾಯ ಹಾಗು 11 ಜನರಿಗೆ ತೀವ್ರ ಸ್ವರೂಪದ ಗಾಯ ಮತ್ತು 4 ವರ್ಷದ ಸಣ್ಣ ಮಗುವಿಗೆ ಸಾದ ಸ್ವರೂಪದ ಗಾಯಗೊಳಿಸಿದ ಅಪರಾಧ ಎಸಗಿರುವುದಾಗಿದೆ.
ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರ ಮುಂದೆ ಈ ಪ್ರಕರಣದ ವಿಚಾರಣೆ ನಡೆದು ಆರೋಪಿಯನ್ನು ಫೆ.17, 2025 ರಂದು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಕೆಳಕಂಡಂತೆ ಪ್ರಕಟಿಸಿರುತ್ತಾರೆ.
ಕಲಂ 279 ರಡಿಯಲ್ಲಿನ ಅಪರಾಧಕ್ಕಾಗಿ ಮೂರು ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ₹1,000/- ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಸಾದಾಕಾರಾಗೃಹ ಶಿಕ್ಷೆ, ಕಲಂ 337 ರಡಿಯಲ್ಲಿನ ಅಪರಾಧಕ್ಕೆ ಮೂರು ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ₹500 ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳುಗಳ ಕಾಲ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ, ಕಲಂ 338 ರಡಿಯಲ್ಲಿನ ಅಪರಾಧಕ್ಕಾಗಿ ಆರು ತಿಂಗಳುಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹1000 ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಎರಡು ತಿಂಗಳ ಕಾಲ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ .
ಮೇಲಿನ ಅಪರಾಧಗಳಿಗೆ ವಿಧಿಸಲಾದ ಶಿಕ್ಷೆಯನ್ನು ಏಕಕಾಲಕ್ಕೆ ಜಾರಿಗೊಳಿಸತಕ್ಕದ್ದು ಎಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಸರ್ಕಾರದ ಪರವಾಗಿ ಪ್ರಕರಣವನ್ನು ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿ ವಾದ ಮಂಡಿಸಿರುತ್ತಾರೆ.