ಗ್ರಾಮಸಭೆಗೇ ಬರಲಾಗದವರಿಗೆ ಗ್ರಾಮದ ಅಭಿವೃದ್ಧಿ ಬಗ್ಗೆ ಆಸಕ್ತಿ ಇರಬಹುದೇ..? : ಗ್ರಾಮಸ್ಥರ ಪ್ರಶ್ನೆ
ಕೊಡಿಯಾಲಬೈಲು ಸ್ಮಶಾನ ನಿರ್ವಹಣೆ ಕಷ್ಟ. ಶುಲ್ಕ ಏರಿಸುತ್ತೇವೆ : ಪಂಚಾಯತ್
ಉಬರಡ್ಕ ಗ್ರಾಮ ಪಂಚಾಯತ್ ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ಫೆ.18ರಂದು ನಡೆಯಿತು. ಗ್ರಾಮ ಸಭೆಗೆ ಪಂಚಾಯತ್ ಸದಸ್ಯರೇ ಅರ್ಧಕ್ಕರ್ಧ ಗೈರಾಗಿರುವ ವಿಚಾರವಾಗಿ ಗ್ರಾಮಸ್ಥರು ಆಡಳಿತವನ್ನು ತರಾಟೆಗೆತ್ತಿಕೊಂಡ ಘಟನೆಯು ನಡೆದಿದೆ.
ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೋಡು ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
5 ಮಂದಿ ಸದಸ್ಯರ ಗೈರು
ಉಬರಡ್ಕ ಗ್ರಾಮದ ಪಂಚಾಯತ್ ನಲ್ಲಿ 9 ಮಂದಿ ಸದಸ್ಯರಿದ್ದಾರೆ. ಅವರಲ್ಲಿ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂಂತೋಡು, ಉಪಾಧ್ಯಕ್ಷೆ ಚಿತ್ರ ಕುಮಾರಿ, ಸದಸ್ಯರುಗಳಾದ ದೇವಕಿ ಕುದ್ಪಾಜೆ, ಅನಿಲ್ ಬಳ್ಳಡ್ಕ ರವರುಮಾತ್ರ ಸಭೆಯಲ್ಲಿದ್ದರು. ಸದಸ್ಯರುಗಳಾದ ಹರೀಶ್ ರೈ ಉಬರಡ್ಕ, ಸಂದೀಪ್ ಕುತ್ತಮೊಟ್ಟೆ, ಭವಾನಿ ಎಂ.ಪಿ., ಪ್ರಶಾಂತ್ ಪಾನತ್ತಿಲ, ವಸಂತಿ ಯವರು ಗೈರಾಗಿದ್ದರು. ಅಲ್ಲದೆ ಇಲಾಖಾಧಿಕಾರಿಗಳು ಕೂಡಾ ಗೈರಾಗಿದ್ದರು.
ಈ ಕುರಿತು ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್.ಗಂಗಾಧರ್ ರವರು ಗ್ರಾಮ ಸಭೆಯಲ್ಲಿ ಇಲಾಖಾಧಿಕಾರಿಗಳು ಮಾಮೂಲಾಗಿ ಗೈರಾಗುತ್ತಾಗರೆ. ಆದರೆ ನಮ್ಮಲ್ಲಿ 5 ಮಂದಿ ಪಂಚಾಯತ್ ಸದಸ್ಯರೇ ಗೈರಾಗಿರುವುದು ದುರದೃಷ್ಟಕರ. ಹೀಗೆ ಆಗಬಾರದು. ಗ್ರಾಮ ಸಭೆಗೆ ಬರಲು ಆಗದ ಸದಸ್ಯರು ಗ್ರಾಮದ ಅಭಿವೃದ್ಧಿ ಕುರಿತು ಎಷ್ಟು ಆಸಕ್ತಿ ವಹಿಸುತ್ತಾರೆ ಎಂದು ಪ್ರಶ್ನಿಸಿದರು. ಗ್ರಾಮ ಸಭೆಗೆ ಯಾರೂ ತಪ್ಪಿಸಲೇ ಬಾರದು. ಅಷ್ಟು ದೊಡ್ಡ ಸಮಸ್ಯೆಯಾದರೆ ಬಾರದಿರುವುದು ಬೇರೆ. ಗ್ರಾಮ ಸಭೆಗೆ ಬಾರದಿರುವುದು ಗ್ರಾಮಸ್ಥರಿಗೆ ಅವಮಾನ ಮಾಡಿದಂತೆ ಎಂದು ತರಾಟೆಗೆತ್ತಿಕೊಂಡರು. ಮಾಜಿ ಅಧ್ಯಕ್ಷ ಸುರೇಶ್ ಎಂ.ಹೆಚ್. ರವರು ಕೂಡಾ ಧ್ವನಿಗೂಡಿಸಿದರು.
ಕೊಡಿಯಾಲಬೈಲು ಸ್ಮಶಾನ ಕ್ಕೆ ಈಗ ಪಡೆಯುತ್ತಿರುವ ದರದಿಂದ ನಿರ್ವಹಣೆ ಕಷ್ಟವಾಗುತ್ತಿದೆ. ಆದ್ದರಿಂದ ಶುಲ್ಕ ಏರಿಸುವ ಕುರಿತು ಪ್ರಸ್ತಾಪವನ್ನು ಪಂಚಾಯತ್ ಸಭೆಯ ಮುಂದಿರಿಸಿತು.
ಜೆಜೆಎಂ ವಿಚಾರ ಸಹಿತ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಪ್ರಸ್ತಾಪಗೊಂಡವು.
ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ದೀಪಿಕಾ ನೋಡೆಲ್ ಅಧಿಕಾರಿಯಾಗಿದ್ದರು.
ಪಿ.ಡಿ.ಒ. ರವಿಚಂದ್ರ ಸ್ವಾಗತಿಸಿದರು.