ಬಳ್ಪ-ಕೇನ್ಯ ಗ್ರಾಮಗಳನೊಳಗೊಂಡ ಬಳ್ಪ ಗ್ರಾಮ ಪಂಚಾಯತ್ ಗೆ ಒಳಪಟ್ಟ ಪರಿಸರದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಆಗುತ್ತಿರುವಂತಹ ಕಳ್ಳತನ, ಕಳ್ಳತನ ಯತ್ನಗಳು ಗ್ರಾಮಸ್ಥರ ನಿದ್ದೆ ಗೆಡಿಸಿದ್ದು, ಈ ಬಗ್ಗೆ ಗ್ರಾಮಸ್ಥರು ಫೆ. 22ರಂದು ಬೀದಿಗುಡ್ಡೆಯ ಅಮೃತ ವರ್ಷಿಣಿ ಸಭಾಂಗಣದಲ್ಲಿ ಸಭೆ ನಡೆಸಿದರು.
ತಲೆಹೊರೆ- ಗುಜರಿ ವ್ಯಾಪಾರಿಗಳಿಂದ ಯಾ ಅಪರಿಚಿತ ವ್ಯಕ್ತಿಗಳಿಂದ ಆಗುತ್ತಿರುವ ಭಯ ಹಾಗೂ ಇನ್ನಿತರ ಅಹಿತಕರ ಘಟನೆಗಳ ವಿಷಯಗಳನ್ನು ಆಧಾರಿಸಿ, ಬಳ್ಪ ಗ್ರಾಮಸ್ಥರಲ್ಲಿ ಜಾಗೃತ್ತಿಯನ್ನು ಮೂಡಿಸಲು ಈ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ ಸೇರಿದಂತೆ ಸದಸ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದು, ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.
ಗ್ರಾಮಕ್ಕೆ ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲಿ ಮತ್ತು ಅಗತ್ಯ ಸ್ಥಳಗಳಲ್ಲಿ ಊರಿನವರ ಸಹಕಾರದಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ ಮತ್ತು ಪೊಲೀಸರೊಂದಿಗೆ ಗ್ರಾಮಸ್ಥರು ಸೇರಿ ರಾತ್ರಿ ಗಸ್ತು ತಿರುಗುವುದರ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆಯೆಂದು ತಿಳಿದುಬಂದಿದೆ.